×
Ad

ಲೆಫ್ಟಿನೆಂಟ್ ಕರ್ನಲ್ ಆದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ!

Update: 2025-10-23 22:52 IST

 ರಾಜನಾಥ್ ಸಿಂಗ್,  ನೀರಜ್ ಚೋಪ್ರಾ | Photo Credit : PTI

ಬೆಂಗಳೂರು: ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಆಗಿ ಜಾವೆಲಿನ್ ಥ್ರೋ ಹಾಗೂ ಒಲಿಪಿಂಕ್ ಚಿನ್ನದ ಪದಕ ವಿಜೇತ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರಾ ಸೇರ್ಪಡೆಯಾಗಿದ್ದಾರೆ.

ಬುಧವಾರ ದಿಲ್ಲಿಯ ತಮ್ಮ ಕಚೇರಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೀರಜ್ ಚೋಪ್ರಾರಿಗೆ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಲಾಂಛನ ತೊಡಿಸಿ, ಅಭಿನಂದಿಸಿದರು. ಈ ವೇಳೆ ಭಾರತೀಯ ಸೇನೆಯ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹಾಜರಿದ್ದರು.

ನಂತರ, ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜನಾಥ್ ಸಿಂಗ್, “ನೀರಜ್ ಚೋಪ್ರಾ ಭಾರತದ ಅತ್ಯುತ್ತಮ ಕ್ರೀಡಾಪಟುವಾಗಿದ್ದು, ಅವರ ನಿರಂತರ ಪರಿಶ್ರಮ, ದೇಶಭಕ್ತಿಯು ಭಾರತೀಯ ಮನೋಭಾವದ ಸಂಕೇತ. ಭವಿಷ್ಯದಲ್ಲಿ ಅವರ ಎಲ್ಲ ಪ್ರಯತ್ನಗಳಿಗೂ ಯಶಸ್ಸು ಲಭಿಸಲಿ” ಎಂದು ಶುಭ ಹಾರೈಸಿದ್ದಾರೆ.

2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದರು. ಅವರು ಪರಮ ವಿಶಿಷ್ಟ ಸೇವಾ ಪದಕ, ಪದ್ಮಶ್ರೀ ಹಾಗೂ ವಿಶಿಷ್ಟ ಸೇವಾ ಪದಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಕ್ರಿಕೆಟಿಗ ಎಂ.ಎಸ್.ಧೋನಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಕರ್ನಾಟಕ ಕೇಡರ್ ನ ಹಿರಿಯ ಐಪಿಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ ಸೇರಿದಂತೆ ಹಲವು ಖ್ಯಾತನಾಮರು ಟೆರಿಟೋರಿಯಲ್ ಆರ್ಮಿಯ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ.

ಟೆರಿಟೋರಿಯಲ್ ಆರ್ಮಿಯ ಸದಸ್ಯರು ಭಾರತೀಯ ಸೇನೆಗೆ ಅಗತ್ಯ ಬಿದ್ದಾಗ ಸ್ವಯಂಸೇವಕರಾಗಿ ಕೆಲಸ ಮಾಡಬೇಕಾಗುತ್ತದೆ. ದೇಶಾದ್ಯಂತ ಐದು ವಲಯಗಳನ್ನು ಹೊಂದಿರುವ ಈ ಸೇನೆಯಲ್ಲಿ 40,000ಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ಈ ಸೇನೆಗೆ ಸೇರ್ಪಡೆಯಾಗಲು ಬಯಸುವವರು ಭಾರತೀಯ ಸೇನೆಯೊಂದಿಗೆ ವರ್ಷವೊಂದರಲ್ಲಿ ಕನಿಷ್ಠ ಎರಡು ತಿಂಗಳ ಕಾಲ ಕೆಲಸ ಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News