×
Ad

ತೀವ್ರ ಚಳಿಯ ವಾತಾವರಣದಲ್ಲೂ ಉತ್ತಮ ಪ್ರದರ್ಶನ; ದ್ವಿತೀಯ ಸ್ಥಾನ ಗಳಿಸಿದ ನೀರಜ್ ಚೋಪ್ರಾ

Update: 2025-05-24 08:00 IST

PC: x.com/IIS_Vijayanagar

ಹೊಸದಿಲ್ಲಿ: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮತ್ತು ವಿಶ್ವಚಾಂಪಿಯನ್ ಜಾವೆಲಿನ್ ಪಟು ನೀರಜ್ ಚೋಪ್ರಾ ಶುಕ್ರವಾರ ಪೋಲಂಡ್ ನ ಜನೂಝ್ ಕೌಸೊಸ್ಕಿ ಸ್ಮಾರಕ ಕೂಟದಲ್ಲಿ ಪ್ರತಿಕೂಲ ಹವಾಮಾನದ ನಡುವೆಯೂ ಉತ್ತಮ ಪ್ರದರ್ಶನ ತೋರಿ ಎರಡನೇ ಸ್ಥಾನ ಗಳಿಸಿದರು.

ಕಠಿಣ ಪರಿಸ್ಥಿತಿಯ ನಡುವೆ ಚೋಪ್ರಾ ತಮ್ಮ ಕೊನೆಯ ಹಾಗೂ ಆರನೇ ಪ್ರಯತ್ನದಲ್ಲಿ 84.14 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದರು.

ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ 85 ಮೀ. ಗಡಿಯನ್ನು ದಾಟುತ್ತಿದ್ದ ಚೋಪ್ರಾ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಯಾವುದೇ ಕೂಟದಲ್ಲಿ ಕನಿಷ್ಠ ಮಾನದಂಡವಾದ 85 ಮೀ. ಗಡಿಯನ್ನು ಚೋಪ್ರಾ ದಾಟದಿರುವುದು ಇದೇ ಮೊದಲು. ಫೌಲ್‍ನೊಂದಿಗೆ ಸ್ಪರ್ಧೆ ಆರಂಭಿಸಿದ ಚೋಪ್ರಾ, ಎರಡನೇ ಪ್ರಯತ್ನದಲ್ಲಿ ಕೇವಲ 81.28 ಮೀಟರ್ ಎಸೆಯಲು ಸಾಧ್ಯವಾಯಿತು. ಉತ್ತಮ ಪ್ರದರ್ಶನ ತೋರುವಲ್ಲಿ ಹೆಣಗಾಡಿದ ಚೋಪ್ರಾ ಮತ್ತೆ ಎರಡು ಫೌಲ್ ಗಳನ್ನು ಎಸಗಿ ಐದನೇ ಪ್ರಯತ್ನದಲ್ಲೂ 81.4 ಮೀ. ಎಸೆಯಲು ಸಾಧ್ಯವಾಯಿತು. ಅಂತಿಮ ಪ್ರಯತ್ನದಲ್ಲಿ ದ್ವಿತೀಯ ಸ್ಥಾನಕ್ಕೇರುವಲ್ಲಿ ಯಶಸ್ವಿಯಾದರು.

ಚೋಪ್ರಾ ಅವರ ಸಾಂಪ್ರದಾಯಿಕ ಎದುರಾಳಿ ಹಾಗೂ ದೋಹಾ ಡೈಮಂಡ್ ಲೀಗ್‍ನ ವಿಜೇತ ಜರ್ಮನಿಯ ಜೂಲಿಯನ್ ವೆಬೆರ್ ಎರಡನೇ ಪ್ರಯತ್ನದಲ್ಲಿ 86.12 ಮೀಟರ್ ದೂರಕ್ಕೆ ಎಸೆದು ಮತ್ತೆ ವಿಜಯದ ನಗೆ ಬೀರಿದರು. ವೆಬೆರ್ ಮತ್ತೆ ಎರಡು ಬಾರಿ 85 ಮೀಟರ್‍ಗಿಂತ ಅಧಿಕ ದೂರ ಎಸೆದು ತಮ್ಮ ಸಾಮರ್ಥ್ಯ ಪ್ರಸ್ತುತಪಡಿಸಿದರು. ಎರಡು ಬಾರಿಯ ವಿಶ್ವಚಾಂಪಿಯನ್ ಗ್ರೆನೇಡಾದ ಅಂಡೆರ್ಸನ್ ಪೀಟರ್ಸ್ 83.24 ಮೀಟರ್‍ನೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News