ಏಶ್ಯನ್ ಗೇಮ್ಸ್: ಜಾವೆಲಿನ್ ಎಸೆತದಲ್ಲಿ ಮತ್ತೆ ಚಿನ್ನ ಗೆದ್ದ ನೀರಜ್ ಚೋಪ್ರಾ
ನೀರಜ್ ಚೋಪ್ರಾ,ಕಿಶೋರ್ ಕುಮಾರ್ ಜೆನಾ | Photo: X
ಹಾಂಗ್ ಝೌ : ಭಾರತದ ಗೋಲ್ಡನ್ ಬಾಯ್, ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಏಶ್ಯನ್ ಗೇಮ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ ಚಿನ್ನವನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಜಾವೆಲಿನ್ ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ಇನ್ನೊರ್ವ ಕ್ರೀಡಾಪಟು ಕಿಶೋರ್ ಜೆನಾರನ್ನು ಸೋಲಿಸಿ ಚೋಪ್ರಾ ಈ ಸಾಧನೆ ಮಾಡಿರುವುದು ವಿಶೇಷ. ಕಿಶೋರ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದುಕೊಂಡರು. ಜಾವೆಲಿನ್ ಎಸೆತದಲ್ಲಿ ಭಾರತವು ಮೊದಲೆರಡು ಸ್ಥಾನವನ್ನು ಗಿಟ್ಟಿಸಿಕೊಂಡು ಇತಿಹಾಸ ನಿರ್ಮಿಸಿತು.
ಇಬ್ಬರು ಭಾರತೀಯರ ನಡುವೆ ತೀವ್ರ ಸ್ಪರ್ಧೆ ಕಂಡುಬಂತು. 88.88 ಮೀ. ದೂರ ಜಾವೆಲಿನ್ ಎಸೆದ ಚೋಪ್ರಾ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಕಿಶೋರ್ ಜೆನಾ 87.54 ಮೀ.ದೂರಕ್ಕೆ ಜಾವೆಲಿನ್ ಎಸೆದು ದ್ವಿತೀಯ ಸ್ಥಾನ ಪಡೆದರು.
ತನ್ನ ಜೀವನಶ್ರೇಷ್ಠ (86.77 ಮೀ.)ಪ್ರದರ್ಶನದ ಮೂಲಕ ಫೈನಲ್ನ ಒಂದು ಹಂತದಲ್ಲಿ ಕಿಶೋರ್ ಅವರು ಚೋಪ್ರಾರನ್ನು ಹಿಂದಿಕ್ಕಿದ್ದರು. ಈ ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ (88.88 ಮೀ.) ತೋರಿದ ಚೋಪ್ರಾ ಅಗ್ರ ಸ್ಥಾನ ಪಡೆದರು.
ಚೋಪ್ರಾ ಭಾರೀ ಕರತಾಡನದ ನಡುವೆ ಹಾಂಗ್ಝೌ ಸ್ಟೇಡಿಯಮ್ನೊಳಗೆ ಪ್ರವೇಶಿಸಿದರು. ಚೋಪ್ರಾ ಮೊದಲ ಎಸೆತದ ನಂತರ ಅಂತರವನ್ನು ತಿಳಿಯಲು ಕಾಯಬೇಕಾಯಿತು. 15 ನಿಮಿಷಗಳ ವಿಳಂಬದ ನಂತರ ನೀರಜ್ ಮೊದಲ ಎಸೆತವು 89 ಮೀ. ದೂರಕ್ಕೆ ಕ್ರಮಿಸಿದೆ ಎಂದು ಗೊತ್ತಾಯಿತು. ದುರದೃಷ್ಟವಶಾತ್ ಇದು ಗಣನೆಗೆ ಬರಲಿಲ್ಲ.
ಮುಂದಿನ ಎಸೆತದಲ್ಲಿ ನೀರಜ್ 85 ಮಾರ್ಕ್ ದಾಖಲಿಸಲಿಲ್ಲ. ಭಾರತದಲ್ಲಿ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಚೋಪ್ರಾ 2ನೇ ಪ್ರಯತ್ನದಲ್ಲಿ ತನ್ನದೇ ಸ್ಕೋರನ್ನು ಉತ್ತಮಪಡಿಸಿಕೊಂಡರು.
ಚೋಪ್ರಾ ತನ್ನ 4ನೇ ಎಸೆತದಲ್ಲಿ 88.88 ಮೀಟರ್ ದೂರಕ್ಕೆ ಈಟಿಯನ್ನು ಎಸೆದು ಪ್ರತಿಹೋರಾಟ ನೀಡಿದರು. ಇದೇ ವೇಳೆ ಕಿಶೋರ್ ಜೀವನಶ್ರೇಷ್ಠ ಸಾಧನೆ(86.77 ಮೀ.)ಯೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು.
ಬಹುನಿರೀಕ್ಷಿತ ನೀರಜ್ ಹಾಗೂ ಪಾಕಿಸ್ತಾನದ ಅರ್ಷದ್ ನದೀಮ್ ನಡುವಿನ ಸ್ಪರ್ಧೆ ನಡೆಯಲಿಲ್ಲ. ಪಾಕ್ ಜಾವೆಲಿನ್ ಎಸೆತಗಾರ ಅರ್ಷದ್ ಮಂಡಿನೋವಿನಿಂದಾಗಿ ಮಂಗಳವಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.