ಭಾರತದ ಜೊತೆಗೆ ಸೆಮಿ ಫೈನಲ್ಗೆ ಲಗ್ಗೆ ಇಟ್ಟ ನ್ಯೂಝಿಲ್ಯಾಂಡ್ ತಂಡ
PC | x.com/ICC
ರಾವಲ್ಪಿಂಡಿ: ರಚಿನ್ ರವೀಂದ್ರ ಶತಕ(112 ರನ್, 105 ಎಸೆತ, 12 ಬೌಂಡರಿ, 1 ಸಿಕ್ಸರ್)ಹಾಗೂ ಟಾಮ್ ಲ್ಯಾಥಮ್ ಅರ್ಧಶತಕದ(55 ರನ್, 76 ಎಸೆತ, 3 ಬೌಂಡರಿ)ಕೊಡುಗೆಯ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ‘ಎ‘ ಗುಂಪಿನ ಪಂದ್ಯದಲ್ಲಿ 5 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ‘ಎ‘ ಗುಂಪಿನಲ್ಲಿ ಅಗ್ರ 2 ಸ್ಥಾನದಲ್ಲಿರುವ ನ್ಯೂಝಿಲ್ಯಾಂಡ್ ಹಾಗೂ ಭಾರತ ತಂಡಗಳು ಸೆಮಿ ಫೈನಲ್ಗೆ ಟಿಕೆಟ್ ಗಿಟ್ಟಿಸಿಕೊಂಡಿವೆ.
ಸತತ 2 ಸೋಲು ಕಂಡಿರುವ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಸೆಮಿ ಫೈನಲ್ ಸ್ಪರ್ಧೆಯಿಂದ ಹೊರ ಬಿದ್ದಿವೆ.
ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 237 ರನ್ ಗುರಿ ಪಡೆದಿದ್ದ ಕಿವೀಸ್ ಪಡೆ 46.1 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 240 ರನ್ ಗಳಿಸಿತು.
ವಿಲ್ ಯಂಗ್(0) ಹಾಗೂ ಕೇನ್ ವಿಲಿಯಮ್ಸನ್(5 ರನ್)ಬೇಗನೆ ಔಟಾದರು. ಆಗ 3ನೇ ವಿಕೆಟ್ಗೆ 57 ರನ್ ಜೊತೆಯಾಟ ನಡೆಸಿದ ಡೆವೊನ್ ಕಾನ್ವೇ(30 ರನ್)ಹಾಗೂ ರವೀಂದ್ರ ತಂಡವನ್ನು ಆಧರಿಸಿದರು.
ಕಾನ್ವೇ ಔಟಾದ ನಂತರ ರವೀಂದ್ರ ಹಾಗೂ ಲ್ಯಾಥಮ್ 4ನೇ ವಿಕೆಟ್ಗೆ 129 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಗ್ಲೆನ್ ಫಿಲಿಪ್ಸ್(21 ರನ್)ಹಾಗೂ ಮೈಕಲ್ ಬ್ರೆಸ್ವೆಲ್(11)ಗೆಲುವಿನ ಶಾಸ್ತ್ರ ಮುಗಿಸಿದರು.
ಆಲ್ರೌಂಡ್ ಪ್ರದರ್ಶನ ನೀಡಿದ ಬ್ರೆಸ್ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
*ಬಾಂಗ್ಲಾದೇಶ 236/9, ಬ್ರೆಸ್ವೆಲ್ ಜೀವನಶ್ರೇಷ್ಠ ಬೌಲಿಂಗ್
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡವು ನಾಯಕ ನಜ್ಮುಲ್ ಹುಸೇನ್(77 ರನ್, 110 ಎಸೆತ, 9 ಬೌಂಡರಿ)ಅರ್ಧಶತಕದ ಕೊಡುಗೆಯ ಹೊರತಾಗಿಯೂ ಸ್ಪಿನ್ನರ್ ಮೈಕಲ್ ಬ್ರೆಸ್ವೆಲ್(4-26)ಜೀವನಶ್ರೇಷ್ಠ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 236 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನಿಂಗ್ಸ್ ಆರಂಭಿಸಿದ ನಜ್ಮುಲ್ ಹಾಗೂ ತಂಝೀದ್ ಹಸನ್(24 ರನ್)ಮೊದಲ ವಿಕೆಟ್ಗೆ 45 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು. ಬ್ರೆಸ್ವೆಲ್ ಈ ಜೋಡಿಯನ್ನು ಬೇರ್ಪಡಿಸಿದರು.
ತೌಹೀದ್ ಹ್ರಿದಾಯ್(7) ಹಾಗೂ ಮುಶ್ಫಿಕುರ್ರಹೀಂ(2 ರನ್) ಹಾಗೂ ಮಹ್ಮೂದುಲ್ಲಾ(4 ರನ್)ವಿಕೆಟ್ಗಳನ್ನು ಉರುಳಿಸಿದ ಬ್ರೆಸ್ವೆಲ್ ಬಾಂಗ್ಲಾದೇಶದ ಬ್ಯಾಟಿಂಗ್ ಬೆನ್ನ್ನಲುಬು ಮುರಿದರು.
ಅಗ್ರ ಸ್ಕೋರರ್ ನಜ್ಮುಲ್ ಹಾಗೂ ಮೆಹಿದಿ ಹಸನ್(13 ರನ್) ವಿಕೆಟ್ಗಳನ್ನು ಉರುಳಿಸಿದ ವೇಗದ ಬೌಲರ್ ವಿಲ್ ಒ’ರೂರ್ಕಿ(2-48)ಬ್ರೆಸ್ವೆಲ್ಗೆ ಸಾಥ್ ನೀಡಿದರು. ಜಮೀಸನ್(1-48) ಹಾಗೂ ಮ್ಯಾಟ್ ಹೆನ್ರಿ(1-57)ತಲಾ ಒಂದು ವಿಕೆಟ್ಗಳನ್ನು ಪಡೆದರು.
ಜಾಕರ್ ಅಲಿ(45 ರನ್, 55 ಎಸೆತ)ಹಾಗೂ ರಿಶಾದ್ ಹುಸೈನ್(26 ರನ್, 25 ಎಸೆತ) ಕೆಳ ಕ್ರಮಾಂಕದಲ್ಲಿ ಒಂದಷ್ಟು ಕೊಡುಗೆ ನೀಡಿ ಬಾಂಗ್ಲಾದೇಶ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.
ಬಾಂಗ್ಲಾದೇಶ ತಂಡವು ಇಂದು 178 ಡಾಟ್ ಬಾಲ್ಗಳನ್ನು ಎದುರಿಸಿತು. ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವೊಂದರ ಕಳಪೆ ಪ್ರದರ್ಶನವಾಗಿದೆ. ಬಾಂಗ್ಲಾವು 2012ರ ನಂತರ 50 ಓವರ್ ಪಂದ್ಯದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎದುರಿಸಿತು.
ಬ್ರೆಸ್ವೆಲ್(4-26) ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಝಿಲ್ಯಾಂಡ್ ಪರ ಶ್ರೇಷ್ಠ ಬೌಲಿಂಗ್ ಮಾಡಿದ ನ್ಯೂಝಿಲ್ಯಾಂಡ್ ಸ್ಪಿನ್ನರ್ ಎನಿಸಿಕೊಂಡರು. ಬ್ರೆಸ್ವೆಲ್ ಬಾಂಗ್ಲಾದೇಶದ ಅಗ್ರ ಆರು ಆಟಗಾರರ ಪೈಕಿ ನಾಲ್ವರನ್ನು ಔಟ್ ಮಾಡಿದರು.
ನ್ಯೂಝಿಲ್ಯಾಂಡ್ ತಂಡವು 22 ವೈಡ್ಗಳ ಸಹಿತ 25 ಎಕ್ಸ್ಟ್ರಾ ರನ್ ಬಿಟ್ಟುಕೊಟ್ಟಿತು. ಕಿವೀಸ್ ಪಡೆ ಪುರುಷರ ಏಕದಿನ ಕ್ರಿಕೆಟ್ನಲ್ಲಿ ಎರಡನೇ ಗರಿಷ್ಠ ಸಂಖ್ಯೆಯ ವೈಡ್ಗಳನ್ನು ಎಸೆದಿದೆ. ನಾಗ್ಪುರದಲ್ಲಿ 2011ರ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಕಿವೀಸ್ ವೈಡ್ಗಳ ಮೂಲಕ 29 ರನ್ ಸೋರಿಕೆ ಮಾಡಿತ್ತು.
►ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ತಂಡ: 236/9
(ನಜ್ಮುಲ್ ಹುಸೈನ್ 77, ಜಾಕರ್ ಅಲಿ 45, ಮೈಕಲ್ ಬ್ರೆಸ್ವೆಲ್ 4-26, ವಿಲ್ ಒ’ರೂರ್ಕಿ 2-48)
ನ್ಯೂಝಿಲ್ಯಾಂಡ್: 46.1 ಓವರ್ಗಳಲ್ಲಿ 240/5
(ರಚಿನ ರವೀಂದ್ರ 112, ಲ್ಯಾಥಮ್ 55, ಕಾನ್ವೆ 30, ಫಿಲಿಪ್ಸ್ ಔಟಾಗದೆ 21, ಟಸ್ಕಿನ್ ಅಹ್ಮದ್ 1-28)
ಪಂದ್ಯಶ್ರೇಷ್ಠ: ಮೈಕಲ್ ಬ್ರೆಸ್ವೆಲ್.