×
Ad

6.8 ಕೋಟಿ ರೂ.ಗೆ ಸನ್ರೈಸರ್ಸ್ ಪಾಲಾದ ಏಕದಿನ ವಿಶ್ವಕಪ್ ಹೀರೊ ಟ್ರಾವಿಸ್ ಹೆಡ್

Update: 2023-12-19 23:12 IST

 ಟ್ರಾವಿಸ್ ಹೆಡ್| Photo: NDTV 

ದುಬೈ: ಆಸ್ಟ್ರೇಲಿಯದ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ಐಪಿಎಲ್-2024ರ ಹರಾಜಿನಲ್ಲಿ 6.8 ಕೋಟಿ ರೂ.ಗೆ ಹೈದರಾಬಾದ್ ಸನ್ರೈಸರ್ಸ್ ತಂಡದ ಪಾಲಾದರು.

ಹೆಡ್ರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ನಡುವೆ ಬಿರುಸಿನ ಬಿಡ್ ನಡೆಯಿತು.

ಏಕದಿನ ವಿಶ್ವಕಪ್ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಹೆಡ್ ಗಾಗಿ ಸನ್ರೈಸರ್ಸ್ ಆರಂಭದಲ್ಲಿ ಬಿಡ್ ಸಲ್ಲಿಸಿತು. ಆ ನಂತರ ಸಿಎಸ್ಕೆ ಸೇರಿಕೊಂಡಿತು. ತೀವ್ರ ಪೈಪೋಟಿಯ ನಂತರ ಸನ್ರೈಸರ್ಸ್ ಆಸೀಸ್ ನ ಪವರ್ ಹಿಟ್ಟರ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

ಈ ವರ್ಷದ ವಿಶ್ವಕಪ್ ನ ಫೈನಲ್ನಲ್ಲಿ ಭಾರತದ ವಿರುದ್ಧ 120 ಎಸೆತಗಳಲ್ಲಿ 137 ರನ್ ಗಳಿಸಿದ್ದ ಹೆಡ್ರನ್ನು ಸೆಳೆಯಲು ಐಪಿಎಲ್ ತಂಡಗಳು ಪೈಪೋಟಿ ನಡೆಸಿದವು. ಹೆಡ್ ವಿಶ್ವಕಪ್ ಟೂರ್ನಿಯಲ್ಲಿ 6 ಇನಿಂಗ್ಸ್ ಗಳಲ್ಲಿ ಒಟ್ಟು 329 ರನ್ ಗಳಿಸಿದ್ದರು.

ಹೆಡ್ ಕಳೆದ ವರ್ಷ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು. ಆಗ ಅವರ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದರು. ಹೆಡ್ 2016 ಹಾಗೂ 2017ರಲ್ಲಿ ಆರ್ಸಿಬಿ ಪರ ಆಡಿದ್ದರು. ಆರಂಭಿಕ ಬ್ಯಾಟರ್ ಹೆಡ್ ಆಸ್ಟ್ರೇಲಿಯದ ಪರ 23 ಟಿ-20 ಪಂದ್ಯಗಳಲ್ಲಿ 29.15ರ ಸರಾಸರಿಯಲ್ಲಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News