×
Ad

ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಫಖರ್ ಝಮಾನ್

Update: 2025-02-20 20:43 IST

ಫಖರ್ ಝಮಾನ್ | PC : PTI  

ಕರಾಚಿ: ಭಾರತ ಕ್ರಿಕೆಟ್ ತಂಡದ ವಿರುದ್ಧ ನಿರ್ಣಾಯಕ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕಿಂತ ಮೊದಲು ಪಾಕಿಸ್ತಾನ ತಂಡ ತೀವ್ರ ಹಿನ್ನಡೆ ಅನುಭವಿಸಿದ್ದು, ಆರಂಭಿಕ ಬ್ಯಾಟರ್ ಫಖರ್ ಝಮಾನ್ ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದಲೇ ಹೊರಗುಳಿದಿದ್ದಾರೆ.

72 ಏಕದಿನ ಪಂದ್ಯಗಳನ್ನಾಡಿರುವ ಇಮಾಮ್ ವುಲ್ ಹಕ್‌ರನ್ನು ಬದಲಿ ಆಟಗಾರನಾಗಿ ನೇಮಿಸಲಾಗಿದೆ. ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಝಮಾನ್ ಬದಲಿಗೆ ಇಮಾಮ್‌ವುಲ್ ಹಕ್‌ರನ್ನು ಸೇರ್ಪಡೆ ಮಾಡಲಾಗಿದೆ ಎಂದು ಐಸಿಸಿ ದೃಢಪಡಿಸಿದೆ.

ನ್ಯೂಝಿಲ್ಯಾಂಡ್ ವಿರುದ್ಧ ಬುಧವಾರ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಫೀಲ್ಡಿಂಗ್ ನಿರತರಾಗಿದ್ದಾಗ ಫಖರ್ ಮಣಿಕಟ್ಟಿಗೆ ಗಾಯವಾಗಿತ್ತು. ಶಾಹೀನ್ ಅಫ್ರಿದಿ ಎಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ವಿಲ್ ಯಂಗ್ ಬಾರಿಸಿದ ಚೆಂಡನ್ನು ತಡೆಯಲು ಹೋದ ಝಮಾನ್ ಗಾಯಗೊಂಡಿದ್ದರು. ತಕ್ಷಣವೇ ಮೈದಾನವನ್ನು ತೊರೆದ ಝಮಾನ್ ಬದಲಿಗೆ ಕಮ್ರಾನ್ ಗುಲಾಮ್ ಬದಲಿ ಫೀಲ್ಡರ್ ಆಗಿ ಮೈದಾನಕ್ಕಿಳಿದಿದ್ದರು. ಝಮಾನ್ ಪಾಕ್ ತಂಡದ ರನ್ ಚೇಸ್ ವೇಳೆ ಆರಂಭಿಕ ಆಟಗಾರನಾಗಿ ಆಡದೆ 4ನೇ ಕ್ರಮಾಂಕದಲ್ಲಿ 10ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದರು.ವಿಕೆಟ್ ನಡುವೆ ಓಡಲು ಪರದಾಡಿದ ಝಮಾನ್ 41 ಎಸೆತಗಳಿಂದ ಕೇವಲ 24 ರನ್ ಗಳಿಸಿ ಔಟಾದರು.

ಗಾಯದ ಸಮಸ್ಯೆಯಿಂದಾಗಿ ಫಖರ್ ಝಮಾನ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಐಸಿಸಿ ಗುರುವಾರದಂದು ಅಧಿಕೃತವಾಗಿ ಪ್ರಕಟಿಸಿದೆ. ತಂಡದಲ್ಲಿ ಯಾವುದೇ ಆಟಗಾರನನ್ನು ಸೇರ್ಪಡೆಗೊಳಿಸಬೇಕಾದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸ್ಪರ್ಧೆಯ ತಾಂತ್ರಿಕ ಸಮಿತಿಯ ಅನುಮೋದನೆಯ ಅಗತ್ಯವಿದೆ.

ಫಖರ್ ಝಮಾನ್ ಅವರು ಗಾಯಾಳು ಸಯೀಮ್ ಅಯ್ಯೂಬ್ ಬದಲಿಗೆ ಇತ್ತೀಚೆಗಷ್ಟೇ ಪಾಕ್ ತಂಡವನ್ನು ಸೇರಿದ್ದರು.

29ರ ಹರೆಯದ ಇಮಾಮ್ 2023ರ ನಂತರ ಅಂತರ್‌ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಲು ಸಜ್ಜಾಗಿದ್ದಾರೆ. ಪಾಕ್ ತಂಡವು ಫೆ.23ರಂದು ದುಬೈನಲ್ಲಿ ನಡೆಯಲಿರುವ ಭಾರತ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಹೊಸ ಆರಂಭಿಕ ಜೋಡಿಯನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ. ನ್ಯೂಝಿಲ್ಯಾಂಡ್ ವಿರುದ್ಧ ಎ ಗುಂಪಿನ ಮೊದಲ ಪಂದ್ಯವನ್ನು 60 ರನ್‌ಗಳಿಂದ ಸೋತಿರುವ ಪಾಕಿಸ್ತಾನಕ್ಕೆ ಭಾರತ ವಿರುದ್ದ ಗೆಲ್ಲಲೇಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News