×
Ad

ಉಭಯ ತಂಡಗಳಿಗೆ ಪಂದ್ಯವೊಂದನ್ನು ಗೆದ್ದು ಹೊರಹೋಗುವ ಅವಕಾಶ; ನಾಳೆ ಪಾಕಿಸ್ತಾನ Vs ಬಾಂಗ್ಲಾದೇಶ

Update: 2025-02-26 21:38 IST

PC :  PTI 

ರಾವಲ್ಪಿಂಡಿ: ತವರಿನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾದ ಬಳಿಕ, ಪಾಕಿಸ್ತಾನ ಗುರುವಾರ ‘ಎ’ ಗುಂಪಿನ ಪಂದ್ಯವೊಂದರಲ್ಲಿ ಸಮಾನ ದುಃಖಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಈ ಗುಂಪಿನಿಂದ ಈಗಾಗಲೇ ಭಾರತ ಮತ್ತು ನ್ಯೂಝಿಲ್ಯಾಂಡ್ ಸೆಮಿಫೈನಲ್ ತಲುಪಿರುವುದರಿಂದ ರಾವಲ್ಪಿಂಡಿಯಲ್ಲಿ ನಡೆಯುವ ಈ ಪಂದ್ಯಕ್ಕೆ ಸ್ಪರ್ಧೆಯ ದೃಷ್ಟಿಯಿಂದ ಯಾವುದೇ ಮಹತ್ವವಿಲ್ಲ. ಆದರೆ, ಪಂದ್ಯಾವಳಿಯಲ್ಲಿ ಒಂದಾದರೂ ಪಂದ್ಯವನ್ನು ಗೆದ್ದು ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಪಾಕಿಸ್ತಾನಕ್ಕೆ ಇರುವುದರಿಂದ ಅದಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.

ನ್ಯೂಝಿಲ್ಯಾಂಡ್ ಮತ್ತು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ತನ್ನ ಮೊದಲೆರಡು ಪಂದ್ಯಗಳನ್ನು ಪಾಕಿಸ್ತಾನವು ಭಾರೀ ಅಂತರದಿಂದ ಸೋತಿದೆ. ಇದರಿಂದ ಹತಾಶೆಗೊಂಡಿರುವ ಅಭಿಮಾನಿಗಳು ದೇಶದ ಕ್ರಿಕೆಟ್ ವ್ಯವಸ್ಥೆಯಲ್ಲಿ ತುದಿಯಿಂದ ಆರಂಭಿಸಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂಬುದಾಗಿ ಒತ್ತಾಯಿಸುತ್ತಿದ್ದಾರೆ.

ಜಾಗತಿಕ ಬಿಳಿ ಚೆಂಡಿನ ಪಂದ್ಯಾವಳಿಗಳ ಗುಂಪು ಹಂತಗಳಿಂದಲೇ ಪಾಕಿಸ್ತಾನ ಹೊರಬೀಳುತ್ತಿರುವುದು ಇದು ಸತತ ಮೂರನೇ ಬಾರಿಯಾಗಿದೆ. ಇದಕ್ಕೂ ಮೊದಲು, ಅದು 2024ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್‌ಗಳಲ್ಲೂ ಅದು ಗುಂಪು ಹಂತಗಳಲ್ಲೇ ಹೊರಬಿದ್ದಿತ್ತು.

ತಂಡಗಳು ಆಕ್ರಮಣಕಾರಿ ನಿಲುವುಗಳನ್ನು ಅಳವಡಿಸಿಕೊಳ್ಳುತ್ತಿರುವ ಈ ಕಾಲ ಘಟ್ಟದಲ್ಲಿ, ಪಾಕಿಸ್ತಾನವು ತನ್ನ ಹಳೆಯ ತಂತ್ರಗಾರಿಕೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿರುವಂತೆ ಕಾಣುತ್ತಿದೆ. ಅದರ ಅಗ್ರ ಕ್ರಮಾಂಕವು ಜಡವಾಗಿದೆ. ಅದು ಒಂದು ನಿರ್ದಿಷ್ಟ ಉದ್ದೇಶವಿಲ್ಲದೆ, ಮುಂದಿನ ಚೆಂಡುಗಳ ಮೇಲೆ ಭರವಸೆ ಇಟ್ಟು ಬ್ಯಾಟಿಂಗ್‌ಮಾಡುತ್ತಿದೆ. ರನ್ ಗತಿಯನ್ನು ಹೆಚ್ಚಿಸಲು ಅದು 35ನೇ ಓವರ್‌ವರೆಗೂ ಕಾಯುತ್ತದೆ.

ಪಾಕ್ ಆಟಗಾರರು ಪರದಾಡುವುದು ಎದ್ದು ಕಾಣುತ್ತದೆ, ಅವರು ಯಾವುದೇ ಅವಸರವನ್ನು ತೋರಿಸುವುದಿಲ್ಲ. ರಾವಲ್ಪಿಂಡಿಯಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 161 ಮತ್ತು ದುಬೈನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ 147 ಡಾಟ್ ಬಾಲ್‌ಗಳನ್ನು ಅವರು ಆಡಿದರು.

ತಾರಾ ಬ್ಯಾಟರ್ ಬಾಬರ್ ಅಝಮ್ ಮತ್ತು ನಾಯಕ ಮುಹಮ್ಮದ್ ರಿಝ್ವಾನ್ ನಿರೀಕ್ಷೆಯ ಮಟ್ಟಕ್ಕೆ ಏರಿಲ್ಲ. ಎದುರಾಳಿ ಬೌಲರ್‌ಗಳಿಗೆ ಹೆಚ್ಚಿನ ಪ್ರತಿರೋಧವನ್ನೇ ತೋರಿಸಿಲ್ಲ.

ಪಾಕಿಸ್ತಾನವು ತನ್ನ ಪಂದ್ಯಗಳನ್ನು ಗೆಲ್ಲಲು ಬಲಿಷ್ಠ ವೇಗದ ಬೌಲಿಂಗ್ ದಾಳಿಯನ್ನೇ ನೆಚ್ಚಿಕೊಂಡು ಬಂದಿದೆ. ಆದರೆ, ಮುಂಚೂಣಿ ಬೌಲರ್‌ಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹಾರಿಸ್ ರವೂಫ್‌ರ ಎಸೆತಗಳು ಪರಿಣಾಮಕಾರಿಯಾಗಿರಲಿಲ್ಲ.

ಪಾಕಿಸ್ತಾನದಂತೆಯೇ, ಹಿಂದಿನ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್‌ನಲ್ಲಿ ಆಡಿರುವ ಬಾಂಗ್ಲಾದೇಶವೂ ಭಾರತ ಮತ್ತು ನ್ಯೂಝಿಲ್ಯಾಂಡ್‌ಗಳ ಎದುರು ಸೋಲುಗಳನ್ನು ಅನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದಿದೆ.

ಅಲ್ಲೊಮ್ಮೆ ಇಲ್ಲೊಮ್ಮೆ ತೌಹೀದ್ ಹೃದಯ್, ನಾಯಕ ನಜ್ಮುಲ್ ಹುಸೈನ್ ಮತ್ತು ಜಾಕಿರ್ ಅಲಿ ಮಿಂಚುವುದನ್ನು ಹೊರತುಪಡಿಸಿದರೆ, ಅದರ ಬ್ಯಾಟಿಂಗ್ ಸರದಿ ಸಂಪೂರ್ಣವಾಗಿ ವಿಫಲವಾಗಿದೆ.

ಆದರೆ, ಕಳಪೆ ಫಾರ್ಮ್‌ ನಲ್ಲಿರುವ ಪಾಕಿಸ್ತಾನದ ವಿರುದ್ಧ ಗೆಲ್ಲುವ ಅವಕಾಶವೊಂದನ್ನು ಬಾಂಗ್ಲಾದೇಶ ಎದುರು ನೋಡುತ್ತಿದೆ. ಆ ಮೂಲಕ ನಿರಾಶಾದಾಯಕ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ವಿಜಯದೊಂದಿಗೆ ಮುಗಿಸಲು ಅದು ಮುಂದಾಗಿದೆ.

ತಂಡಗಳು

ಪಾಕಿಸ್ತಾನ: ಮುಹಮ್ಮದ್ ರಿಝ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪ ನಾಯಕ), ಬಾಬರ್ ಅಝಮ್, ಫಖರ್ ಝಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹಾರಿಸ್ ರವೂಫ್, ಮುಹಮ್ಮದ್ ಹಸ್ನೈನ್, ನಸೀಮ್ ಶಾ ಮತ್ತು ಶಾಹೀನ್ ಶಾ ಅಫ್ರಿದಿ.

ಬಾಂಗ್ಲಾದೇಶ: ನಝ್ಮುಲ್ ಹುಸೈನ್ (ನಾಯಕ), ಸೌಮ್ಯ ಸರ್ಕಾರ್, ತಂಝೀದ್ ಹಸನ್, ತೌಹೀದ್ ಹೃದಯ್, ಮುಶ್ಫೀಕುರ‌್ರಹೀಮ್ (ವಿಕೆಟ್‌ಕೀಪರ್), ಎಮ್.ಡಿ. ಮಹ್ಮೂದುಲ್ಲಾ, ಜಾಕಿರ್ ಅಲಿ ಅನಿಕ್, ಮೆಹಿದಿ ಹಸನ್ ಮಿರಝ್, ರಿಶಾದ್ ಹುಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಝುರ‌್ರಹ್ಮಾನ್, ಪರ್ವೇಝ್ ಹುಸೈನ್ ಎಮೋನ್, ನಸುಮ್ ಅಹ್ಮದ್, ತಂಝೀಮ್ ಹಸನ್ ಸಾಕಿಬ್ ಮತ್ತು ನಹೀದ್ ರಾಣಾ.

ಪಂದ್ಯ ಆರಂಭ: ಅಪರಾಹ್ನ 2:30

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News