ಭಾರತದಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಿಂದ ಹಿಂದೆ ಸರಿದ ಪಾಕಿಸ್ತಾನ
Photo Credit : thehindu.com
ಹೊಸದಿಲ್ಲಿ, ಅ.24: ಭಾರತದಲ್ಲಿ ಈ ವರ್ಷದ ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಹಾಕಿ ತಂಡ ಹಿಂದೆ ಸರಿದಿದೆ ಎಂದು ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್‌ಐಎಚ್)ಶುಕ್ರವಾರ ದೃಢಪಡಿಸಿದೆ.
ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿ ಹಾಗೂ ಭಾರತದ ಆಪರೇಶನ್ ಸಿಂಧೂರ ಕಾರ್ಯಾಚರಣೆಯ ನಂತರ ಉಭಯ ದೇಶಗಳ ಕ್ರೀಡಾ ಸಂಬಂಧ ಹದಗೆಟ್ಟಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಚೆನ್ನೈ ಹಾಗೂ ಮಧುರೈನಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿಯಲ್ಲಿ ಬದಲಿ ತಂಡವನ್ನು ಎಫ್‌ಐಎಚ್ ಶೀಘ್ರವೇ ಘೋಷಿಸಲಿದೆ.
ಈ ವರ್ಷ ಆಗಸ್ಟ್ 29ರಿಂದ ಸೆಪ್ಟಂಬರ್ 7ರ ತನಕ ಬಿಹಾರದ ರಾಜ್‌ಗಿರ್‌ನಲ್ಲಿ ನಡೆದಿದ್ದ ಏಶ್ಯಕಪ್‌ನಿಂದ ಹೊರಗುಳಿದಿದ್ದ ಪಾಕಿಸ್ತಾನ ತಂಡ ಇದೀಗ ಭಾರತದಲ್ಲಿ ನಡೆಯಲಿರುವ ಮತ್ತೊಂದು ಪ್ರಮುಖ ಟೂರ್ನಿಯಿಂದಲೂ ಹಿಂದೆ ಸರಿದಿದೆ.
ನ.28ರಿಂದ ಡಿ.28ರ ತನಕ ನಿಗದಿಯಾಗಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ‘ಬಿ’ ಗುಂಪಿನಲ್ಲಿ ಭಾರತ, ಚಿಲಿ ಹಾಗೂ ಸ್ವಿಟ್ಸರ್‌ಲ್ಯಾಂಡ್ ತಂಡಗಳೊಂದಿಗೆ ಸ್ಥಾನ ಪಡೆದಿತ್ತು.
ಇತ್ತೀಚೆಗೆ ಹೊಸ ನೀತಿಯನ್ನು ಅನುಷ್ಠಾನಗೊಳಿಸಿದ್ದ ಭಾರತ ಸರಕಾರವು, ಪಾಕಿಸ್ತಾನ ತಂಡದೊಂದಿಗೆ ದ್ವಿಪಕ್ಷೀಯ ಕ್ರೀಡಾ ಸ್ಪರ್ಧೆಗಳನ್ನು ನಿರ್ಬಂಧಿಸಿದ್ದು, ಬಹುರಾಷ್ಟ್ರಗಳ ಪಂದ್ಯಾವಳಿಯಲ್ಲಿ ಭಾಗವಹಿಸುವುದಕ್ಕೆ ಅನುಮತಿ ನೀಡಿತ್ತು.
ತಮಿಳುನಾಡಿನಲ್ಲಿ ನಡೆಯಲಿರುವ 2025ರ ಆವೃತ್ತಿಯ ಎಫ್‌ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್‌ಗೆ ಈ ಹಿಂದೆ ಅರ್ಹತೆ ಪಡೆದಿದ್ದ ಪಾಕಿಸ್ತಾನ ಹಾಕಿ ಒಕ್ಕೂಟವು ಮುಂಬರುವ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟಕ್ಕೆ ತಿಳಿಸಿದೆ ಎಂದು ಎಫ್‌ಐಎಚ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಹಾಕಿ ಒಕ್ಕೂಟವು ತಟಸ್ಥ ತಾಣದಲ್ಲಿ ವಿಶ್ವಕಪ್ ಆಡಲು ಆಸಕ್ತಿ ವ್ಯಕ್ತಪಡಿಸಿದ್ದು, ಈ ಕುರಿತು ಮಾತನಾಡಿರುವ ಪಿಎಚ್‌ಎಫ್ ಪ್ರಧಾನ ಕಾರ್ಯದರ್ಶಿ ರಾಣಾ ಮುಜಾಹಿದ್, ‘‘ಪ್ರಮುಖ ಪಂದ್ಯಾವಳಿಗಳು ಭಾರತದಲ್ಲಿ ನಡೆಯುತ್ತಿರುವ ಕಾರಣ ನಾವು ಅದರಿಂದ ವಂಚಿತವಾಗುತ್ತಿದ್ದೇವೆ. ಜೂನಿಯರ್ ವಿಶ್ವಕಪ್ ಟೂರ್ನಿಯ ನಮ್ಮ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಆಯೋಜಿಸಿ ನಮಗೆ ಭಾಗವಹಿಸಲು ಅವಕಾಶ ನೀಡಬೇಕೆಂದು ಎಫ್‌ಐಎಚ್‌ಗೆ ವಿನಂತಿಸುತ್ತೇನೆ’’ಎಂದರು.
ಪಾಕಿಸ್ತಾನ ತಂಡವು ಭುವನೇಶ್ವರದಲ್ಲಿ 2021ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು, 11ನೇ ಸ್ಥಾನ ಪಡೆದಿತ್ತು.