4ನೇ ಟೆಸ್ಟ್ ನಲ್ಲಿ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಪಂತ್ ಆಡಬಾರದು: ರವಿ ಶಾಸ್ತ್ರಿ
ರಿಷಭ್ ಪಂತ್ | PTI
ಲಂಡನ್, ಜು.18: ದೀರ್ಘಕಾಲದ ಗಾಯದ ಸಮಸ್ಯೆಯೊಂದಿಗೆ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮುಂದಿನ ವಾರ ಮ್ಯಾಂಚೆಸ್ಟರ್ ನಲ್ಲಿ ಆರಂಭವಾಗಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಆಡಬಾರದು ಎಂದು ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಕಿವಿ ಮಾತು ಹೇಳಿದ್ದಾರೆ.
ಕಳೆದ ವಾರ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ನ ವೇಳೆ ವಿಕೆಟ್ ಕೀಪಿಂಗ್ ನಿರತರಾಗಿದ್ದಾಗ ಪಂತ್ ಅವರ ತೋರುಬೆರಳಿಗೆ ಗಾಯವಾಗಿತ್ತು.
ಜಸ್ ಪ್ರಿತ್ ಬುಮ್ರಾ ಅವರ ಎಸೆತವನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಪಂತ್ ಅವರ ಎಡ ತೋರುಬೆರಳಿಗೆ ಗಾಯವಾಗಿದೆ. ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರು ಪಂತ್ ಬದಲಿಗೆ ಕೀಪಿಂಗ್ ಮಾಡಿದ್ದರು. ಆದರೆ ಪಂತ್ ಅವರು ಭಾರತವು 22 ರನ್ ನಿಂದ ಸೋತಿರುವ 3ನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ಮಾಡಿದ್ದರು. ಮೊದಲ ಇನಿಂಗ್ಸ್ ನಲ್ಲಿ 74 ರನ್ ಹಾಗೂ 2ನೇ ಇನಿಂಗ್ಸ್ ನಲ್ಲಿ 5 ರನ್ ಗಳಿಸಿ ಔಟಾಗಿದ್ದರು.
ಸರಣಿಯಲ್ಲಿ 1-2ರಿಂದ ಹಿನ್ನಡೆಯಲ್ಲಿರುವ ಭಾರತ ತಂಡವು 4ನೇ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೆ ತಯಾರಿ ಆರಂಭಿಸಿದೆ. ಮುಂಬರುವ ಟೆಸ್ಟ್ ಪಂದ್ಯದಲ್ಲಿ ಪಂತ್ ಅವರು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡಲಿದ್ದಾರೆ ಎಂದು ಭಾರತದ ಸಹಾಯಕ ಕೋಚ್ ರಿಯಾನ್ ಡೊಶೆಟ್ ಗುರುವಾರ ಸುಳಿವು ನೀಡಿದ್ದರು.
‘‘ರಿಷಭ್ ಪಂತ್ಗೆ ಕೀಪಿಂಗ್ ಮಾಡಲು ಸಾಧ್ಯವಾಗದಿದ್ದರೆ ಅವರು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುತ್ತಾರೆಂದು ನನಗನಿಸುತ್ತಿಲ್ಲ. ಅವರು ಫೀಲ್ಡಿಂಗ್ ಮಾಡಿದರೂ ಕಷ್ಟವಾಗುತ್ತದೆ. ಕನಿಷ್ಠ ಪಕ್ಷ ಗ್ಲೌಸ್ ಗಳಿದ್ದರೆ ಅವರಿಗೆ ಸ್ವಲ್ಪ ರಕ್ಷಣೆ ಸಿಗುತ್ತದೆ. ಗ್ಲೌಸ್ ಗಳಿಲ್ಲದೆ ಅವರಿಗೆ ಏನಾದರೂ ನೋವಾದರೆ ಅದು ಒಳ್ಳೆಯದಲ್ಲ. ಪಂತ್ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುವ ಮೊದಲು ಟೀಮ್ ಮ್ಯಾನೇಜ್ ಮೆಂಟ್ ಅವರ ಗಾಯದ ಪ್ರಮಾಣವನ್ನು ಪರಿಶೀಲಿಸಬೇಕು’’ ಎಂದು ‘ಐಸಿಸಿ ರಿವೀವ್ ಪೋಡ್ಕಾಸ್ಟ್’ಗೆ ಶಾಸ್ತ್ರಿ ತಿಳಿಸಿದರು.
ಪ್ರಸಕ್ತ ಇಂಗ್ಲೆಂಡ್ ಪ್ರವಾಸದಲ್ಲಿ ಪಂತ್ ಅವರು ಭಾರತದ ಅತ್ಯಂತ ಯಶಸ್ವಿ ಬ್ಯಾಟರ್ ಗಳ ಪೈಕಿ ಒಬ್ಬರಾಗಿದ್ದಾರೆ. 6 ಇನಿಂಗ್ಸ್ ಗಳಲ್ಲಿ 70.83ರ ಸರಾಸರಿಯಲ್ಲಿ ಒಟ್ಟು 425 ರನ್ ಗಳಿಸಿದ್ದರು.
‘‘ಪಂತ್ ಚೇತರಿಸಿಕೊಳ್ಳಲು ಸಾಧ್ಯವಾದಷ್ಟು ಸಮಯವನ್ನು ನೀಡುವ ಗುರಿಯನ್ನು ಭಾರತ ತಂಡದ ಹೊಂದಿದೆ’’ ಎಂದು ಸಹಾಯಕ ಕೋಚ್ ಟೆನ್ ಡೊಶಾಟ್ ದೃಢಪಡಿಸಿದ್ದಾರೆ.