×
Ad

‘ಐತಿಹಾಸಿಕ ಪ್ರದರ್ಶನ’ : ಭಾರತದ ಪ್ಯಾರಾ ಅತ್ಲೀಟ್‌ಗಳನ್ನು ಪ್ರಶಂಶಿಸಿದ ಪ್ರಧಾನಿ ಮೋದಿ

Update: 2025-10-06 20:40 IST

 ನರೇಂದ್ರ ಮೋದಿ |Photo Credit : PTI

ಹೊಸದಿಲ್ಲಿ, ಅ.6: ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ನೀಡಿದ್ದು, 6 ಚಿನ್ನ, 9 ಬೆಳ್ಳಿ ಹಾಗೂ 7 ಕಂಚಿನ ಪದಕಗಳ ಸಹಿತ ಒಟ್ಟು 22 ಪದಕಗಳನ್ನು ಗೆದ್ದುಕೊಂಡಿದೆ. ಐತಿಹಾಸಿಕ ಸಾಧನೆಗೈದಿರುವ ಭಾರತೀಯ ಪ್ಯಾರಾ ಅತ್ಲಿಟ್‌ಗಳನ್ನು ಪ್ರಶಂಶಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 104 ದೇಶಗಳ 2,000 ಕ್ರೀಡಾಪಟುಗಳು ಭಾಗವಹಿಸಿರುವ ಪಂದ್ಯಾವಳಿಯ ಆತಿಥ್ಯವನ್ನು ವಹಿಸಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.

ಭಾರತೀಯ ತಂಡವು 2024ರಲ್ಲಿ ಕೋಬೆಯಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ನಿರ್ಮಿಸಿದ್ದ 17 ಪದಕಗಳ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. ಕಳೆದ ವರ್ಷ ಭಾರತ ತಂಡವು 6 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಜಯಿಸಿತ್ತು.

ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ರವಿವಾರ ಭಾರತೀಯ ಅತ್ಲೀಟ್‌ಗಳು ಪದಕಪಟ್ಟಿಗೆ ಇನ್ನೂ 4 ಪದಕಗಳನ್ನು ಸೇರಿಸಿದರು. ಸಿಮ್ರಾನ್ ಶರ್ಮಾ ಮಹಿಳೆಯರ 100 ಮೀ. ಟಿ12ರಲ್ಲಿ ಬೆಳ್ಳಿ ಪದಕ ಜಯಿಸಿದರು. ಪ್ರೀತಿ ಪಾಲ್ ಮಹಿಳೆಯರ 100 ಮೀ. ಟಿ35 ಸ್ಪರ್ಧೆಯಲ್ಲಿ ಹಾಗೂ ನವದೀಪ್ ಕೂಡ ಪುರುಷರ ಜಾವೆಲಿನ್ ಥ್ರೋ ಟಿ10 ಸ್ಪರ್ಧೆಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದರು. ಸಂದೀಪ್ ಪುರುಷರ 200 ಮೀ. ಟಿ44 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.

‘‘ನಮ್ಮ ಪ್ಯಾರಾ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ವರ್ಷದ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ ಅತ್ಯಂತ ವಿಶೇಷವಾಗಿತ್ತು. ಭಾರತೀಯ ತಂಡವು 6 ಚಿನ್ನದ ಪದಕ ಸಹಿತ ಒಟ್ಟು 22 ಪದಕಗಳನ್ನು ಜಯಿಸಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದೆ. ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಅವರ ಯಶಸ್ಸು ಹಲವು ಜನರಿಗೆ ಸ್ಫೂರ್ತಿಯಾಗಿದೆ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ದಿಲ್ಲಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಿದ್ದು ಕೂಡ ಭಾರತಕ್ಕೆ ಸಂದ ಗೌರವ. ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸುಮಾರು 100 ದೇಶಗಳ ಅತ್ಲೀಟ್‌ಗಳು ಹಾಗೂ ಸಹಾಯಕ ಸಿಬ್ಬಂದಿಗೆ ಆಭಾರಿಯಾಗಿರುವೆ’’ ಎಂದು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದಿದ್ದ 12ನೇ ಆವೃತ್ತಿಯ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 186 ಸ್ಪರ್ಧೆಗಳಿದ್ದವು. ಭಾರತವು 54 ಪುರುಷರು ಹಾಗೂ 19 ಮಹಿಳೆಯರ ಸಹಿತ 73 ಸದಸ್ಯರ ತಂಡವನ್ನು ಕಣಕ್ಕಿಳಿಸಿತ್ತು.

ಹೊಸದಾಗಿ ರಚಿಸಲ್ಪಟ್ಟ ಮೊಂಡೊ ಟ್ರ್ಯಾಕ್‌ನಲ್ಲಿ 35 ವಿಶ್ವ ದಾಖಲೆಗಳು ಹಾಗೂ 104 ಚಾಂಪಿಯನ್‌ಶಿಪ್ ದಾಖಲೆಗಳಿಗೆ ಪಂದ್ಯಾವಳಿಯು ಸಾಕ್ಷಿಯಾಯಿತು. ಹಲವು ವಿಶ್ವ ದಾಖಲೆಗಳು 2023ರ ಪ್ಯಾರಿಸ್‌ನಲ್ಲಿ ನಿರ್ಮಿಸಲ್ಪಟ್ಟ ದಾಖಲೆಯನ್ನು ಸರಿಗಟ್ಟಿದ್ದವು. ಇನ್ನೂ ಕೆಲವು ಕಳೆದ ವರ್ಷದ ಚಾಂಪಿಯನ್‌ಶಿಪ್ ದಾಖಲೆಯನ್ನು ಮೀರಿದವು.

ಚಾಂಪಿಯನ್‌ಶಿಪ್‌ನಲ್ಲಿ 44 ದೇಶಗಳು ಕನಿಷ್ಠ ಒಂದು ಚಿನ್ನದ ಪದಕ ಗೆದ್ದಿವೆೆ. ಪಂದ್ಯಾವಳಿಯ ವೇಳೆ ಒಟ್ಟು 63 ದೇಶಗಳು ಕನಿಷ್ಠ ಒಂದು ಪದಕ ಗೆದ್ದುಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News