×
Ad

ನೇಷನ್ಸ್ ಲೀಗ್ ಫೈನಲ್: ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್ ಅನ್ನು ಮಣಿಸಿದ ಪೋರ್ಚುಗಲ್

Update: 2025-06-09 13:44 IST

Photo credit: X/@Cristiano

ಮ್ಯೂನಿಕ್ (ಜರ್ಮನಿ): ರವಿವಾರ ಇಲ್ಲಿ ನಡೆದ ನೇಷನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ತಂಡವನ್ನು ಮಣಿಸುವ ಮೂಲಕ ಪೋರ್ಚುಗಲ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪೋರ್ಚುಗಲ್ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಪೋರ್ಚುಗಲ್‌ನ ದಂತಕತೆ ಫುಟ್‌ಬಾಲ್‌ ಪಟು ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು. ಅಲಿಯಾನ್ಝ್ ಅರೇನಾ ಮೈದಾನದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ, ಪೋರ್ಚುಗಲ್ ತಂಡ ಎರಡನೆ ಬಾರಿ ನೇಷನ್ಸ್ ಲೀಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಹೆಚ್ಚುವರಿ ಅವಧಿಯ ನಂತರ ಉಭಯ ತಂಡಗಳು 2-2 ಅಂತರದಲ್ಲಿ ಸಮಬಲ ಸಾಧಿಸಿದ್ದವು. ನಂತರ, ಪೆನಾಲ್ಟಿ ಶೂಟೌಟ್‌ನಲ್ಲಿ ಎಲ್ಲ ಐದು ಕಿಕ್‌ಗಳನ್ನೂ ಗೋಲಾಗಿ ಪರಿವರ್ತಿಸಿದ ಪೋರ್ಚುಗಲ್ ತಂಡ, ಪಂದ್ಯದ ಅಂತ್ಯದಲ್ಲಿ 5-3 ಅಂತರದ ಗೆಲುವು ದಾಖಲಿಸಿತು.

ಪಂದ್ಯವು ಹೆಚ್ಚುವರಿ ಅವಧಿಗೆ ವಿಸ್ತರಣೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕ್ರಿಸ್ಟಿಯಾನೊ ರೊನಾಲ್ಡೊ, ತಮ್ಮ ತಂಡ ನೇಷನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರಿಟ್ಟರು.

ಬಲಿಷ್ಠ ಸ್ಪೇನ್ ತಂಡವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಪರಿಗಣಿಸಲಾಗಿತ್ತು. ಆದರೆ, ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಮಹತ್ವದ ಗೋಲು ಪಂದ್ಯದ ದಿಕ್ಕನ್ನೇ ಬದಲಿಸಿತು. ಪೋರ್ಚುಗಲ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆ ಗೋಲು, ಕ್ರಿಸ್ಟಿಯಾನೊ ರೊನಾಲ್ಡೊರ ವೃತ್ತಿಜೀವನದ 138ನೇ ಅಂತಾರಾಷ್ಟ್ರೀಯ ಗೋಲಾಗಿದೆ.

ಈ ಗೋಲಿನೊಂದಿಗೆ ಅತ್ಯಧಿಕ ಗೋಲು ಗಳಿಸಿರುವ ದಾಖಲೆಯನ್ನು ಕ್ರಿಸ್ಟಿಯಾನೊ ರೊನಾಲ್ಡೊ ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದಾರೆ. ಅತ್ಯಧಿಕ ಗೋಲು ಗಳಿಕೆಯಲ್ಲಿ ಅವರು ತಮ್ಮ ಪ್ರತಿಸ್ಪರ್ಧಿಗಳಾದ ಲಿಯೋನೆಲ್ ಮೆಸ್ಸಿ ಹಾಗೂ ಸುನೀಲ್ ಚೆಟ್ರಿಗಿಂತ ಸಾಕಷ್ಟು ಮುಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News