ಫ್ರೀಸ್ಟೈಲ್ ಚೆಸ್ ಗ್ರ್ಯಾನ್ ಸ್ಲಾಮ್ ಟೂರ್| ಅರ್ಜುನ್ ಸೆಮಿ ಫೈನಲ್ ಗೆ, ಪ್ರಜ್ಞಾನಂದಗೆ ಸೋಲು
ಅರ್ಜುನ್ | PC : @airnewsalerts
ನೆವಾಡಾ, ಜು.18: ಲಾಸ್ ವೇಗಸ್ ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾನ್ ಸ್ಲಾಮ್ ಟೂರ್ ನಲ್ಲಿ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಸೆಮಿ ಫೈನಲ್ ತಲುಪಿದ ಭಾರತದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
ಆದರೆ ಪ್ರಜ್ಞಾನಂದ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧದ ತೀವ್ರ ಹಣಾಹಣಿಯಲ್ಲಿ 3-4 ಅಂತರದಿಂದ ಸೋಲನುಭವಿಸಿ 750,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಸ್ಪರ್ಧೆಯಿಂದ ಹೊರ ನಡೆದರು.
ವಿನ್ ಕ್ಯಾಸಿನೊ ಹೋಟೆಲ್ನಲ್ಲಿ ಶುಕ್ರವಾರ ನಡೆದ ಎರಡು ಪಂದ್ಯಗಳ ನೇರ ಸ್ಪರ್ಧೆಯಲ್ಲಿ ಉಝ್ಬೇಕಿಸ್ತಾನದ ಅಬ್ದುಲ್ ಸತ್ತಾರ್ರನ್ನು 1.5-0.5 ಅಂತರದಿಂದ ಸೋಲಿಸಿದ ನಂತರ ಅರ್ಜುನ್ ಕೊನೆಯ 4ರ ಸುತ್ತಿಗೆ ಪ್ರವೇಶಿಸಿದರು.
ಜುಲೈ 19ರಂದು ನಡೆಯಲಿರುವ ಸೆಮಿ ಫೈನಲ್ನಲ್ಲಿ ಅರ್ಜುನ್ ಅವರು ಅರೋನಿಯನ್ರನ್ನು ಎದುರಿಸಲಿದ್ದಾರೆ. ಅರ್ಜುನ್ ಅವರು ರೌಂಡ್ ರಾಬಿನ್ ಹಂತದಲ್ಲಿ 7 ಪಂದ್ಯಗಳಲ್ಲಿ 3ರಲ್ಲಿ ಜಯ ಹಾಗೂ 2ರಲ್ಲಿ ಡ್ರಾ ಸಾಧಿಸಿ 4 ಅಂಕ ಕಲೆ ಹಾಕಿ ಪ್ರಬಲ ಪ್ರದರ್ಶನ ನೀಡಿದ್ದರು.
ಅರ್ಜುನ್ ಜೊತೆಗೆ ಫ್ಯಾಬಿಯಾನೊ ಕರುವಾನಾ, ಲೆವೊನ್ ಅರೋನಿಯನ್ ಹಾಗೂ ಹ್ಯಾನ್ಸ್ ನೀಮನ್ ಕೂಡ ಸೆಮಿ ಫೈನಲ್ ಗೆ ತಲುಪಿದ್ದಾರೆ.
ಅರೋನಿಯನ್ ಹಾಗೂ ನೀಮಾನ್ ಅವರು ಕ್ವಾರ್ಟರ್ ಫೈನಲ್ ಹಂತದಲ್ಲಿ ಕ್ರಮವಾಗಿ ಹಿಕಾರು ನಕಮುರಾ ಹಾಗೂ ಜಾವೊಖಿರ್ ಸಿಂಡಾರೊವ್ ರನ್ನು 2.5-1.5 ಹಾಗೂ 4-2 ಅಂತರದಿಂದ ಸೋಲಿಸಿದ್ದರು.