ರಾವಲ್ಪಿಂಡಿಯಲ್ಲಿ ಮತ್ತೆ ಮಳೆಯದ್ದೇ ಆಟ: ಒಂದೂ ಗೆಲುವು ದಾಖಲಿಸದೆ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ, ಬಾಂಗ್ಲಾದೇಶ
ರಾವಲ್ಪಿಂಡಿ: ನಿರಂತರ ಮಳೆಯಿಂದಾಗಿ ಆತಿಥೇಯ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ಗುರುವಾರ ನಡೆಯಬೇಕಾಗಿದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಗಿದೆ.
29 ವರ್ಷಗಳ ನಂತರ ಇದೇ ಮೊದಲ ಬಾರಿ ತಾಯ್ನಾಡಿನಲ್ಲಿ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸಿದ್ದ ಪಾಕಿಸ್ತಾನ ತಂಡದ ಅಭಿಯಾನವು ನಿರಾಶಾದಾಯಕವಾಗಿ ಅಂತ್ಯಗೊಂಡಿದ್ದು, ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ.
ಮತ್ತೊಂದೆಡೆ ಬಾಂಗ್ಲಾದೇಶ ತಂಡಕ್ಕೆ ಕೂಡ ಒಂದೂ ಗೆಲುವು ದಕ್ಕಿಲ್ಲ. ಅದು ಕೂಡ ಬರಿಗೈಯಲ್ಲಿ ಸ್ವದೇಶಕ್ಕೆ ವಾಪಸಾಗಲಿದೆ.
ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.
ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧ ಆರು ವಿಕೆಟ್ ಅಂತರದ ಸೋಲು ಸಹಿತ ಪಂದ್ಯಾವಳಿಯಲ್ಲಿ ಆಡಿರುವ ಎರಡೂ ಗ್ರೂಪ್ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನ ತಂಡವು ತೀವ್ರ ಟೀಕೆಗೆ ಗುರಿಯಾಗಿದೆ.
ಪ್ರಸಕ್ತ ಪಂದ್ಯಾವಳಿಯಲ್ಲಿ ಎರಡನೇ ಬಾರಿ ರಾವಲ್ಪಿಂಡಿಯಲ್ಲಿ ಪಂದ್ಯವು ಮಳೆಗಾಹುತಿಯಾಗಿದೆ. ಮಂಗಳವಾರ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡಗಳ ನಡುವಿನ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಗಿತ್ತು.
ಪಾಕಿಸ್ತಾನ ತಂಡವು ಸತತ ಮೂರನೇ ಐಸಿಸಿ ಪಂದ್ಯಾವಳಿಯಲ್ಲಿ ಮೊದಲ ಸುತ್ತು ದಾಟುವಲ್ಲಿ ವಿಫಲವಾಗಿದೆ. 2023ರ ಏಕದಿನ ವಿಶ್ವಕಪ್ ಹಾಗೂ ಕಳೆದ ವರ್ಷ ನಡೆದಿದ್ದ ಟಿ-20 ವಿಶ್ವಕಪ್ ಟೂರ್ನಿಗಳಲ್ಲೂ ಪಾಕಿಸ್ತಾನ ತಂಡವು ಬೇಗನೆ ನಿರ್ಗಮಿಸಿತ್ತು.
‘‘ಐಸಿಸಿ ಪಂದ್ಯಾವಳಿಗಳಲ್ಲಿ ನಾವು ಉತ್ತಮವಾಗಿ ಆಡದೇ ಇರುವುದು ನಮಗೆ ಆಘಾತ ತಂದಿದೆ’’ ಎಂದು ಪಾಕಿಸ್ತಾನ ತಂಡದ ಸಹಾಯಕ ಕೋಚ್ ಅಝರ್ ಮಹ್ಮೂದ್ ಹೇಳಿದ್ದಾರೆ.
‘‘ಆರಂಭಿಕ ಬ್ಯಾಟರ್‌ಗಳಾದ ಫಖರ್ ಝಮಾನ್ ಹಾಗೂ ಸಯೀಮ್ ಅಯ್ಯೂಬ್ ಗಾಯಗೊಂಡಿರುವುದು ತಂಡದ ಫಲಿತಾಂಶದ ಮೇಲೆ ಭಾರೀ ಪ್ರಭಾವಬೀರಿದೆ’’ ಎಂದು ಮಹ್ಮೂದ್ ಬೆಟ್ಟು ಮಾಡಿದರು.
ಭಾರತ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧದ ಗ್ರೂಪ್ ಹಂತದ ಪಂದ್ಯಗಳಲ್ಲಿ ಪಾಕಿಸ್ತಾನದ ಬ್ಯಾಟರ್‌ಗಳು 308 ಡಾಟ್ ಬಾಲ್‌ಗಳನ್ನು ಆಡಿದ್ದರು.
‘‘ಏಕದಿನ ಮಾದರಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೆವು. ಆದರೆ ಈ ಪಂದ್ಯಾವಳಿಯಲ್ಲಿ ಗಾಯದ ಸಮಸ್ಯೆಯ ಕಾರಣ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಭಾರತ ವಿರುದ್ಧದ ಪಂದ್ಯದಲ್ಲಿ ನಾವು ಸ್ವತಃ ಸಾಕಷ್ಟು ಒತ್ತಡಕ್ಕೀಡಾದೆವು.ನಾವು ಎಲ್ಲಿ ಸುಧಾರಿಸಿಕೊಳ್ಳಬೇಕೆಂದು ನಮಗೆ ಗೊತ್ತಿದೆ. ಹೊಂದಿಕೊಂಡು, ಜವಾಬ್ದಾರಿವಹಿಸಿಕೊಳ್ಳಬೇಕಾಗಿದೆ’’ ಎಂದು ಮಹ್ಮೂದ್ ಹೇಳಿದರು.