ರಣಜಿ ಟ್ರೋಫಿ ಫೈನಲ್ | ಕೇರಳ 342 ರನ್‌ಗೆ ಆಲೌಟ್, ವಿದರ್ಭ ತಂಡಕ್ಕೆ ಮುನ್ನಡೆ
PC : PTI
ನಾಗ್ಪುರ: ನಾಯಕ ಸಚಿನ್ ಬೇಬಿ(98 ರನ್, 235 ಎಸೆತ, 10 ಬೌಂಡರಿ)ಹಾಗೂ ಆದಿತ್ಯ ಸರ್ವಾಟೆ(79 ರನ್, 185 ಎಸೆತ, 10 ಬೌಂಡರಿ)ಅರ್ಧಶತಕಗಳ ಕೊಡುಗೆಯ ಹೊರತಾಗಿಯೂ ಕೇರಳ ಕ್ರಿಕೆಟ್ ತಂಡ ಆತಿಥೇಯ ವಿದರ್ಭ ವಿರುದ್ಧದ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಕಂಡಿದೆ.
ಮೂರನೇ ದಿನದಾಟವಾದ ಶುಕ್ರವಾರ 3 ವಿಕೆಟ್‌ಗಳ ನಷ್ಟಕ್ಕೆ 131 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಕೇರಳ ತಂಡವು ದಿನದಾಟದಂತ್ಯಕ್ಕೆ 125 ಓವರ್‌ಗಳಲ್ಲಿ 342 ರನ್ ಗಳಿಸಿ ಆಲೌಟಾಯಿತು. ವಿದರ್ಭ ತಂಡಕ್ಕೆ 37 ರನ್ ಮುನ್ನಡೆ ಬಿಟ್ಟುಕೊಟ್ಟಿತು.
ವಿದರ್ಭ ತಂಡದ ಪರ ದರ್ಶನ್ ನಾಲ್ಕಾಂಡೆ(3-52), ಪಾರ್ಥ್ ರೆಖಾಡೆ(3-65) ಹಾಗೂ ಹರ್ಷ ದುಬೆ(3-88) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಯಶ್ ಠಾಕೂರ್‌ಗೆ ಒಂದು ವಿಕೆಟ್ ಲಭಿಸಿತು.
ಔಟಾಗದೆ 7 ರನ್ ಗಳಿಸಿದ್ದ ಸಚಿನ್ ಬೇಬಿ 3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಔಟಾಗದೆ 66 ರನ್ ಗಳಿಸಿದ್ದ ನಾಗ್ಪುರದ ಆಟಗಾರ ಆದಿತ್ಯ ಸರ್ವಾಟೆಯೊಂದಿಗೆ ಬ್ಯಾಟಿಂಗ್ ಮುಂದುವರಿಸಿದರು. ಈ ಹಿಂದೆ ವಿದರ್ಭ ಪರ ಎರಡು ಬಾರಿ ರಣಜಿ ಟ್ರೋಫಿ ಜಸಿದ್ದ ಸರ್ವಾಟೆ 79 ರನ್ ಗಳಿಸಿ ದುಬೆಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು ಸಚಿನ್ ಜೊತೆಗೆ 4ನೇ ವಿಕೆಟ್‌ಗೆ 63 ರನ್ ಸೇರಿಸಿದ್ದರು.
235 ಎಸೆತಗಳಲ್ಲಿ 98 ರನ್ ಗಳಿಸಿ ತಾಳ್ಮೆಯ ಇನಿಂಗ್ಸ್ ಆಡಿದ್ದ ಸಚಿನ್ ಬೇಬಿ ಅವರು ಸಲ್ಮಾನ್ ನಿಝಾರ್(21 ರನ್) ಹಾಗೂ ಮುಹಮ್ಮದ್ ಅಝರುದ್ದೀನ್(34 ರನ್) ಅವರೊಂದಿಗೆ ಕ್ರಮವಾಗಿ 5ನೇ ಹಾಗೂ 6ನೇ ವಿಕೆಟ್‌ಗೆ 49 ಹಾಗೂ 59 ರನ್ ಜೊತೆಯಾಟದಲ್ಲಿ ಭಾಗಿಯಾದರು. ಸಲ್ಮಾನ್ ಹಾಗೂ ಅಝರ್ ಔಟಾದ ನಂತರ ಜಲಜ್ ಸಕ್ಸೇನ(28 ರನ್) ಅವರೊಂದಿಗೆ 77 ಎಸೆತಗಳಲ್ಲಿ 46 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
98 ರನ್ ಗಳಿಸಿದ್ದಾಗ ಪಾರ್ಥ ರೆಖಾಡೆಗೆ ವಿಕೆಟ್ ಒಪ್ಪಿಸಿದ ಸಚಿನ್ ತನ್ನ 100ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಶತಕ ವಂಚಿತರಾದರು. ಸಚಿನ್ ಔಟಾದ ನಂತರ ಜಲಜ್ ಸಕ್ಸೇನ, ನಿದೀಶ್(1), ಈಡೆನ್ ಆ್ಯಪಲ್ ಟಾಮ್(10) ಬೆನ್ನುಬೆನ್ನಿಗೆ ವಿಕೆಟ್ ಕೈಚೆಲ್ಲಿದರು. ಕೊನೆಯ 3 ವಿಕೆಟ್‌ಗಳನ್ನು ಬೇಗನೆ ಉರುಳಿಸಿದ ವಿದರ್ಭ ತಂಡವು ಮೊದಲ ಇನಿಂಗ್ಸ್‌ನಲ್ಲಿ 37 ರನ್ ಮುನ್ನಡೆ ಪಡೆಯಿತು.
ಎಡಗೈ ಸ್ಪಿನ್ನರ್‌ಗಳಾದ ಹರ್ಷ ದುಬೆ ಹಾಗೂ ಪಾರ್ಥ ರೆಖಾಡೆ ತಲಾ 3 ವಿಕೆಟ್‌ಗಳನ್ನು ಪಡೆದರು. 88 ರನ್‌ಗೆ 3 ವಿಕೆಟ್‌ಗಳನ್ನು ಪಡೆದಿರುವ ಹರ್ಷ ದುಬೆ ಒಂದೇ ರಣಜಿ ಋತುವಿನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದು ಬಿಹಾರದ ಅಶುತೋಷ್ ಅಮನ್ ದಾಖಲೆಯನ್ನು ಮುರಿದರು. ದುಬೆ ಇದೀಗ 69 ವಿಕೆಟ್‌ಗಳನ್ನು ಪಡೆದು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
►ಸಂಕ್ಷಿಪ್ತ ಸ್ಕೋರ್
ವಿದರ್ಭ ಮೊದಲ ಇನಿಂಗ್ಸ್: 379 ರನ್
ಕೇರಳ ಮೊದಲ ಇನಿಂಗ್ಸ್: 342 ರನ್
(ಸಚಿನ್ ಬೇಬಿ 98, ಆದಿತ್ಯ ಸರ್ವಾಟೆ 79, ಅಹ್ಮದ್ ಇಮ್ರಾನ್ 37, ಮುಹಮ್ಮದ್ ಅಝರುದ್ದೀನ್ 34, ಜಲಜ್ ಸಕ್ಸೇನ 28, ದರ್ಶನ್ 3-52, ಪಾರ್ಥ ರೆಖಾಡೆ 3-65, ಹರ್ಷ ದುಬೆ 3-88)