×
Ad

ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಅಪರೂಪದ ಅತಿಥಿ ಆಗಮನ, ಸ್ವಲ್ಪ ಕಾಲ ಪಂದ್ಯ ಸ್ಥಗಿತ

Update: 2023-07-31 23:26 IST

ಕೊಲಂಬೊ: ಲಂಕಾ ಪ್ರೀಮಿಯರ್ ಲೀಗ್ (ಎಲ್ ಪಿಎಲ್ ) ನಲ್ಲಿ ಸೋಮವಾರ ಗಾಲೆ ಟೈಟಾನ್ಸ್ ಹಾಗೂ ದಂಬುಲ್ಲಾ ಔರಾ ನಡುವಿನ ಮುಖಾಮುಖಿಯ ಸಮಯದಲ್ಲಿ ಅಪರೂಪದ ಅತಿಥಿಯೊಂದು ಮೈದಾನಕ್ಕೆ ಆಗಮಿಸಿತು. ಅದು ಪಂದ್ಯವನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಿತು.

ಸ್ಪರ್ಧೆಯ ವೇಳೆ ಮೈದಾನದಲ್ಲಿ  ಹಾವು ಕಾಣಿಸಿಕೊಂಡಿದ್ದು, ಆಟಗಾರರು ಗಾಬರಿಗೊಂಡರು.

ಪ್ರಮುಖ ಆಲ್ರೌಂಡರ್ ಶಾಕೀಬ್ ಅಲ್ ಹಸನ್ ಎರಡನೇ ಇನಿಂಗ್ಸ್ನಲ್ಲಿ ಐದನೇ ಓವರ್ ಬೌಲ್ ಮಾಡಲು ತಯಾರಾಗುತ್ತಿದ್ದಾಗ ಈ ಘಟನೆ ನಡೆದಿದೆ. ಆದರೆ, ಬೌಂಡರಿಯ ಹಗ್ಗದ ಬಳಿ ಕಾಣಿಸಿಕೊಂಡಿದ್ದ ಹಾವನ್ನು ಹೊರ ಹಾಕಲು ಸಿಬ್ಬಂದಿ ಪ್ರಯತ್ನಿಸಿದ್ದರಿಂದ ಸ್ವಲ್ಪ ಸಮಯ ಪಂದ್ಯ ನಿಂತುಹೋಯಿತು.

ಈ ಕ್ಷಣದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಪ್ರಸ್ತುತ ಆ್ಯಶಸ್ ಸರಣಿಯಲ್ಲಿ ಕಾಮೆಂಟರಿ ಪ್ಯಾನೆಲ್ ನ ಭಾಗವಾಗಿರುವ ಭಾರತದ ವಿಕೆಟ್ ಕೀಪರ್ -ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

“ನಾಗಿನಿ ಹಿಂತಿರುಗಿದೆ. ಇದು ಬಾಂಗ್ಲಾದೇಶದಲ್ಲಿದೆ ಎಂದು ನಾನು ಭಾವಿಸಿದ್ದೇನೆ" ಎಂದು ಕಾರ್ತಿಕ್ ಟ್ವೀಟ್ ಮಾಡಿದ್ದು, ಅದರಲ್ಲಿ 'ನಾಗಿನ್ ಡ್ಯಾನ್ಸ್' ಹಾಗೂ 'ನಿದಾಸ್ ಟ್ರೋಫಿ' ಎಂಬ ಹ್ಯಾಶ್ ಟ್ಯಾಗ್ಗಳನ್ನು ಸೇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News