×
Ad

"ನಾನು ಕೋಚ್ ಆಗಿದ್ದರೆ ಸೋಲಿನ ಹೊಣೆ ಮೊದಲು ನಾನು ಹೊರುತ್ತಿದ್ದೆ": ಗೌತಮ್ ಗಂಭೀರ್ ವಿರುದ್ಧ ರವಿ ಶಾಸ್ತ್ರಿ ವಾಗ್ದಾಳಿ

Update: 2025-12-02 17:18 IST

  ರವಿ ಶಾಸ್ತ್ರಿ ,  ಗೌತಮ್ ಗಂಭೀರ್ | Photo Credit : BCCI 

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು 0-2 ಅಂತರದಲ್ಲಿ ಪರಾಭವಗೊಂಡ ಬೆನ್ನಿಗೇ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ, "ನಾನು ಕೋಚ್‌ ಆಗಿದ್ದರೆ ಈ ಸೋಲಿನ ಹೊಣೆಯನ್ನು ನಾನು ಮೊದಲು ಹೊರುತ್ತಿದ್ದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಪರಾಭವಗೊಂಡ ಬೆನ್ನಿಗೇ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ, "ಪ್ರಥಮ ಇನಿಂಗ್ಸ್‌ ಬ್ಯಾಟಿಂಗ್‌ನಲ್ಲಿ ದಯನೀಯವಾಗಿ ವಿಫಲವಾದ ಹೊಣೆಯನ್ನು ಬ್ಯಾಟರ್‌ಗಳು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ದಕ್ಷಿಣ ಆಫ್ರಿಕಾದ 489 ರನ್‌ಗಳಿಗೆ ಪ್ರತಿಯಾಗಿ, ಭಾರತ ತಂಡ ಕೇವಲ 201 ರನ್‌ಗಳಿಗೆ ಆಲೌಟಾಯಿತು" ಎಂದು ʼಪ್ರಭಾತ್ ಖಬರ್ʼ ಸುದ್ದಿ ಸಂಸ್ಥೆಯೊಂದಿಗೆ ನಡೆಸಿರುವ ಪಾಡ್‌ಕಾಸ್ಟ್‌ನ ಟೀಸರ್‌ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

"ನೀವು ಗೌತಮ್ ಗಂಭೀರ್ ಅವರನ್ನು ರಕ್ಷಿಸುತ್ತಿದ್ದೀರಾ?" ಎಂಬ ಸಂದರ್ಶಕರ ಪ್ರಶ್ನೆಗೆ, "ನಾನು ಅವರನ್ನು ರಕ್ಷಿಸುತ್ತಿಲ್ಲ. ಶೇ. 100ರಷ್ಟು ಅವರೂ ಹೊಣೆಗಾರರು. ನಾನು ಬೇರೆ ಏನಾದರೂ ಹೇಳುತ್ತಿದ್ದೇನೆಯೆ? ಇದು ನನ್ನ ವಿಷಯದಲ್ಲಿ ಆಗಿದ್ದರೆ, ಅದರ ಹೊಣೆಯನ್ನು ಹೊರುತ್ತಿದ್ಧ ಮೊದಲ ವ್ಯಕ್ತಿ ನಾನೇ ಆಗಿರುತ್ತಿದ್ದೆ. ಆದರೆ, ಬಳಿಕ ನಡೆಯುತ್ತಿದ್ದ ತಂಡದ ಸಭೆಯಲ್ಲಿ ನಾನು ಆಟಗಾರರನ್ನೂ ಸುಮ್ಮನೆ ಬಿಡುತ್ತಿರಲಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಗುವಾಹಟಿ ಪಂದ್ಯದಲ್ಲಿ ಒಂದು ವಿಕೆಟ್‌ಗೆ 100 ರನ್ ಗಳಿಸಿದ್ದ ಭಾರತ ತಂಡ, ದಿಢೀರನೆ ಏಳು ವಿಕೆಟ್ ನಷ್ಟಕ್ಕೆ 130 ರನ್‌ಗೆ ಕುಸಿಯಿತು. ತಂಡ ಕೂಡಾ ಕೆಟ್ಟದಾಗಿರಲಿಲ್ಲ. ಅವರಲ್ಲಿ ಸಾಕಷ್ಟು ಪ್ರತಿಭೆಯಿತ್ತು. ಹೀಗಾಗಿ, ಸೋಲಿನ ಹೊಣೆಯನ್ನು ಆಟಗಾರರೂ ತೆಗೆದುಕೊಳ್ಳಲೇಬೇಕು. ನೀವು ಬಾಲ್ಯ ಕಾಲದಿಂದಲೂ ಸ್ಪಿನ್ ಬೌಲಿಂಗ್‌ಗೆ ಆಡಿದ್ದೀರಿ" ಎಂದು ಅವರು ಬೊಟ್ಟು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News