ಮಿಶ್ರ ಡಬಲ್ಸ್: ರೋಹನ್ ಬೋಪಣ್ಣ-ಶುಐ ಝಾಂಗ್ ಶುಭಾರಂಭ
ರೋಹನ್ ಬೋಪಣ್ಣ | PC : ANI
ಮೆಲ್ಬರ್ನ್: ಭಾರತದ ಸ್ಟಾರ್ ಆಟಗಾರ ರೋಹನ್ ಬೋಪಣ್ಣ ತನ್ನ ಚೀನಾದ ಜೊತೆಗಾರ್ತಿ ಶುಐ ಝಾಂಗ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ನಲ್ಲಿ 2ನೇ ಸುತ್ತಿಗೆ ಪ್ರವೇಶಿಸಿ ಶುಭಾರಂಭ ಮಾಡಿದ್ದಾರೆ.
ಶುಕ್ರವಾರ 72 ನಿಮಿಷಗಳಲ್ಲಿ ಕೊನೆಗೊಂಡಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಝಾಂಗ್ ಜೋಡಿ ಫ್ರಾನ್ಸ್ನ ಕ್ರಿಸ್ಟಿನಾ ಮ್ಲಾಡೆನೊವಿಕ್ ಹಾಗೂ ಕ್ರೊಯೇಶಿಯದ ಇವಾನ್ ಡೊಡಿಗ್ರನ್ನು 6-4, 6-4 ನೇರ ಸೆಟ್ಗಳಿಂದ ಮಣಿಸಿದರು.
ಇಂಡೋ-ಚೈನೀಸ್ ಜೋಡಿ ರವಿವಾರ ನಡೆಯಲಿರುವ 2ನೇ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಅಮೆರಿಕದ ಟೇಲರ್ ಟೌನ್ಸೆಂಡ್ ಹಾಗೂ ಮೊನಾಕೊದ ಹ್ಯೂಗೊ ನೈಸ್ರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ ಸ್ಪರ್ಧೆಯಿಂದ ಈಗಾಗಲೇ ನಿರ್ಗಮಿಸಿರುವ ಮಾಜಿ ವಿಶ್ವದ ನಂ.1 ಆಟಗಾರ ಬೋಪಣ್ಣ ಅವರು ಝಾಂಗ್ ಜೊತೆಗೂಡಿ ಪುಟಿದೇಳುವ ಪ್ರಯತ್ನ ನಡೆಸಿದರು.
ಮೊದಲ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡಿರುವ ಇಂಡೋ-ಚೀನಾ ಜೋಡಿ ಉತ್ತಮ ಆರಂಭ ಪಡೆಯಿತು. 2ನೇ ಸೆಟ್ನಲ್ಲಿ 3-4 ಹಿನ್ನಡೆಯಲ್ಲಿದ್ದ ಬೋಪಣ್ಣ ಜೋಡಿ ಮ್ಲಾಡೆನೋವಿಕ್ ಹಾಗೂ ಡೊಡಿಗ್ ಅವರ ತಪ್ಪಿನ ಲಾಭ ಪಡೆದು 2ನೇ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡರು.
2024ರಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ತನ್ನ ಚೊಚ್ಚಲ ಪ್ರಮುಖ ಡಬಲ್ಸ್ ಚಾಂಪಿಯನ್ಶಿಪ್ನ್ನು ಗೆದ್ದ ನಂತರ ಬೋಪಣ್ಣ ಅವರು ವಿಶ್ವ ರ್ಯಾಂಕಿಂಗ್ನಲ್ಲಿ ಡಬಲ್ಸ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದರು. ತನ್ನ 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಹಿರಿಯ ಆಟಗಾರನಾಗಿದ್ದರು.
ಶ್ರೀರಾಮ್ ಬಾಲಾಜಿ ಪುರುಷರ ಡಬಲ್ಸ್ನಲ್ಲಿ 2ನೇ ಸುತ್ತಿಗೆ ಏರಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದ್ದಾರೆ.
ಬಾಲಾಜಿ ಹಾಗೂ ಮೆಕ್ಸಿಕೊ ಮಿಗುಯೆಲ್ ರೆಯೆಸ್-ವರೆಲಾ ಶನಿವಾರ ನಡೆಯಲಿರುವ 2ನೇ ಸುತ್ತಿನ ಪಂದ್ಯದಲ್ಲಿ ಪೋರ್ಚುಗೀಸ್ ಜೋಡಿ ನುನೊ ಬೊರ್ಗೆಸ್ ಹಾಗೂ ಫ್ರಾನ್ಸಿಸ್ಕೊ ಕ್ಯಾಬ್ರಾಲ್ರನ್ನು ಎದುರಿಸಲಿದ್ದಾರೆ.