×
Ad

ಸ್ಯಾಫ್ ಚಾಂಪಿಯನ್ ಶಿಪ್: ದಾಖಲೆ 9ನೇ ಬಾರಿ ಪ್ರಶಸ್ತಿ ಗೆದ್ದ ಭಾರತ

Update: 2023-07-04 22:41 IST

ಬೆಂಗಳೂರು, ಜು.4: ಸ್ಯಾಫ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಕುವೈತ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 5-4 ಅಂತರದಿಂದ ಮಣಿಸಿದ ಭಾರತ ಫುಟ್ಬಾಲ್ ತಂಡ 9ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದು ದಾಖಲೆ ನಿರ್ಮಿಸಿತು.

ಮಂಗಳವಾರ ನಗರದ ಶ್ರೀಕಂಠೀರವ ಸ್ಟೇಡಿಯಮ್ ನಲ್ಲಿ ತೀವ್ರ ಪೈಪೋಟಿಯಿಂದ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಿಗದಿತ ಸಮಯದ ಅಂತ್ಯಕ್ಕೆ ಎರಡೂ ತಂಡಗಳು ತಲಾ 1 ಗೋಲು ಗಳಿಸಿದವು. ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಮುನ್ನಡೆ ಪಡೆಯುವ ನಿಟ್ಟಿನಲ್ಲಿ ಬಿರುಸಿನ ಸ್ಪರ್ಧೆಗೆ ಇಳಿದವು. 120 ನಿಮಿಷಗಳ ಆಟದ ನಂತರವೂ ವಿಜೇತ ತಂಡ ನಿರ್ಧಾರವಾಗಲಿಲ್ಲ. ಆಗ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಪೆನಾಲ್ಟಿ ಶೂಟೌಟ್ನಲ್ಲೂ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸಿದ್ದು ಒಂದು ಹಂತದಲ್ಲಿ 4-4ರಿಂದ ಸಮಬಲ ಸಾಧಿಸಿದವು. ಮಹೇಶ್ ಸಿಂಗ್ ಭಾರತಕ್ಕೆ 5-4 ಮುನ್ನಡೆ ಒದಗಿಸಿಕೊಟ್ಟರು. ಕುವೈತ್ನ ನಿರ್ಣಾಯಕ ಸ್ಪಾಟ್ ಕಿಕ್ ನ ಗುರುಪ್ರೀತ್ ವಿಫಲಗೊಳಿಸುವುದರೊಂದಿಗೆ ಹಾಲಿ ಚಾಂಪಿಯನ್ ಭಾರತ ರೋಚಕ ಜಯ ಸಾಧಿಸಿ ಪ್ರಶಸ್ತಿ ಉಳಿಸಿಕೊಂಡಿತು.

ಮೊದಲಾರ್ಧದ ಅಂತ್ಯದಲ್ಲಿ ಭಾರತ ಹಾಗೂ ಕುವೈತ್ ತಲಾ ಒಂದು ಗೋಲು ಗಳಿಸಿ 1-1ರಿಂದ ಸಮಬಲ ಸಾಧಿಸಿದ್ದವು. ಕುವೈತ್ ಉತ್ತಮ ಆರಂಭ ಪಡೆದಿತ್ತು. ಅಲ್ ಫೆನೀನಿ 14ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಕುವೈತ್ 1-0 ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಭಾರತದ ಪರ 38ನೇ ನಿಮಿಷದಲ್ಲಿ ಗೋಲು ಗಳಿಸಿದ ಲಾಲ್ ಚಾಂಗ್ಟೆ ಸ್ಕೋರನ್ನು ಸಮಬಲಗೊಳಿಸಿದರು.

ಉಭಯ ತಂಡಗಳು ಹಲವು ಬಾರಿ ತಪ್ಪೆಸಗಿದವು. ಕುವೈತ್ ಹೆಚ್ಚುವರಿ ಸಮಯದಲ್ಲಿ ಸತತ ಮೂರು ಬಾರಿ ತಪ್ಪು ಮಾಡಿತ್ತು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News