ರಾಜಸ್ಥಾನ ರಾಯಲ್ಸ್ ನ ಸ್ಪಿನ್ ಕೋಚ್ ಆಗಿ ಸಾಯಿರಾಜ್ ಬಹುತುಳೆ
Photo - ETV Bharat
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ರಾಜಸ್ಥಾನ ರಾಯಲ್ಸ್, ಮಾಜಿ ಭಾರತೀಯ ಕ್ರಿಕೆಟಿಗ ಸಾಯಿರಾಜ್ ಬಹುತುಳೆ ಅವರನ್ನು ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಗುರುವಾರ ನೇಮಿಸಿದೆ.
ಈ ನೇಮಕಾತಿಯ ಬಗ್ಗೆ ಕಳೆದ ವಾರವೇ ಸುದ್ದಿ ಹರಡಿತ್ತು. ಈಗ ಅದನ್ನು ಖಚಿತಪಡಿಸಲಾಗಿದೆ.
52 ವರ್ಷದ ಬಹುತುಳೆ 2018-21ರ ಅವಧಿಯಲ್ಲಿ ತಂಡದ ಭಾಗವಾಗಿದ್ದರು. ಈಗ ಮತ್ತೆ ತಂಡಕ್ಕೆ ಮರಳಿದ್ದಾರೆ. ಅವರು ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಹುತುಳೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 630ಕ್ಕೂ ಅಧಿಕ ವಿಕೆಟ್ ಗಳನ್ನು ಉರುಳಿಸಿದ್ದಾರೆ ಮತ್ತು 6,000ಕ್ಕೂ ಅಧಿಕ ರನ್ ಗಳನ್ನು ಗಳಿಸಿದ್ದಾರೆ. ಅವರು ಎರಡು ಟೆಸ್ಟ್ಗಳು ಮತ್ತು 8 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಬಳಿಕ ಕೋಚ್ ವೃತ್ತಿಯಲ್ಲಿ ಯಶಸ್ಸು ಕಂಡ ಅವರು, ಮುಂಬೈ, ಬಂಗಾಳ, ಕೇರಳ ಮತ್ತು ಭಾರತೀಯ ರಾಷ್ಟ್ರೀಯ ಪುರುಷರ ತಂಡಕ್ಕೆ ತರಬೇತಿ ನೀಡಿದ್ದರು.
‘‘ಸ್ಪಿನ್ ಬೌಲಿಂಗ್ ನಲ್ಲಿ ಸಾಯಿರಾಜ್ರ ಆಳ ಪರಿಣತಿ ಮತ್ತು ಅವರ ವಿಸ್ತೃತ ಕೊಂಚಿಂಗ್ ಅನುಭವವು ನಮ್ಮ ತಂಡಕ್ಕೆ ಮೌಲಿಕ ಕೊಡುಗೆಯನ್ನು ನೀಡುತ್ತದೆ. ಯುವ ಬೌಲರ್ಗಳನ್ನು ರೂಪಿಸುವ ಅವರ ಸಾಮರ್ಥ್ಯವು ರಾಜಸ್ಥಾನ ರಾಯಲ್ಸ್ ನಲ್ಲಿ ನಾವು ಹೊಂದಿರುವ ಮುನ್ನೋಟಕ್ಕೆ ಪರಿಪೂರ್ಣವಾಗಿ ಹೊಂದುತ್ತದೆ. ಅವರೊಂದಿಗೆ ನಾನು ಹಿಂದೆ ಕೆಲಸ ಮಾಡಿರುವುದರಿಂದ, ಅವರ ಯೋಚನೆಗಳು ಮತ್ತು ಮಾರ್ಗದರ್ಶನವು ನಮ್ಮ ಆಟಗಾರರಿಗೆ ಭಾರೀ ಉಪಯುಕ್ತವಾಗಲಿದೆ ಎಂದು ನಾನು ಭಾವಿಸಿದ್ದೇನೆ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಹೇಳಿದರು.