ಭಾರತದ ಟೇಬಲ್ ಟೆನಿಸ್ ಚಾಂಪಿಯನ್ ಶರತ್ ಕಮಲ್ ವಿದಾಯ
ಎ.ಶರತ್ ಕಮಲ್ | PTI
ಹೊಸದಿಲ್ಲಿ: ಭಾರತದ ಟೇಬಲ್ ಟೆನಿಸ್ ಚಾಂಪಿಯನ್ ಎ.ಶರತ್ ಕಮಲ್ ಮುಂಬರುವ ಮಾ.25ರಿಂದ 30ರ ತನಕ ಚೆನ್ನೈನಲ್ಲಿ ನಿಗದಿಯಾಗಿರುವ ಡಬ್ಲ್ಯುಟಿಟಿ ಕಂಟೆಂಡರ್ ಟೂರ್ನಿಯ ವೇಳೆ ತನ್ನ ವೃತ್ತಿಪರ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
‘‘ನಾನು ನನ್ನ ಮೊದಲ ಅಂತರ್‌ರಾಷ್ಟ್ರೀಯ ಟೂರ್ನಮೆಂಟ್ ಅನ್ನು ಚೆನ್ನೈನಲ್ಲಿ ಆಡಿದ್ದೆ. ನನ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಚೆನ್ನೈನಲ್ಲಿಯೇ ಆಡುವೆ. ವೃತ್ತಿಪರ ಕ್ರೀಡಾಪಟುವಾಗಿ ಇದು ನನ್ನ ಕೊನೆಯ ಪಂದ್ಯಾವಳಿಯಾಗಿದೆ’’ ಎಂದು 42ರ ಹರೆಯದ ಕಮಲ್ ಹೇಳಿದ್ದಾರೆ.
20 ವರ್ಷಕ್ಕೂ ಅಧಿಕ ಸಮಯದ ತನ್ನ ವೃತ್ತಿಜೀವನದಲ್ಲಿ ಆರು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಹಾಗೂ ಎರಡು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕಗಳ ಸಹಿತ ಹಲವಾರು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಕಳೆದ ವರ್ಷ ಪ್ಯಾರಿಸ್ ಗೇಮ್ಸ್‌ನಲ್ಲಿ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಪ್ರತಿಷ್ಠಿತ ಗೇಮ್ಸ್‌ನಲ್ಲಿ 5ನೇ ಬಾರಿ ಭಾಗವಹಿಸಿದ್ದರು.
‘‘ನನ್ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕಗಳು ಹಾಗೂ ಏಶ್ಯನ್ ಕ್ರೀಡಾಕೂಟದ ಪದಕಗಳಿವೆ. ಒಲಿಂಪಿಕ್ಸ್ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಮುಂಬರುವ ಯುವ ಪ್ರತಿಭೆಗಳ ಮೂಲಕ ನನ್ನ ಆ ಕನಸು ನನಸಾಗಬಹುದೆಂದು ಭಾವಿಸುತ್ತೇನೆ’’ ಎಂದು ಕಮಲ್ ಹೇಳಿದರು.
ಸದ್ಯ ಜಾಗತಿಕ ಮಟ್ಟದಲ್ಲಿ 42ನೇ ರ‍್ಯಾಂಕಿನಲ್ಲಿರುವ ಶರತ್ ಅಂತರ್‌ರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ ರ‍್ಯಾಂಕಿಂಗ್ ನಲ್ಲಿ ಭಾರತದ ಗರಿಷ್ಠ ರ‍್ಯಾಂಕಿನ ಆಟಗಾರನಾಗಿ ಗುರುತಿಸಿಕೊಂಡಿದ್ದರು.