ಸ್ಕಾಟ್‌ಲ್ಯಾಂಡ್, ಇಂಗ್ಲೆಂಡ್ ವಿರುದ್ಧ ಟಿ20 ಸರಣಿ | ಆಸ್ಟ್ರೇಲಿಯದ ವೇಗದ ಬೌಲರ್ ಸ್ಪೆನ್ಸರ್ ಜಾನ್ಸನ್ ಅಲಭ್ಯ
PC : X
ಮೆಲ್ಬರ್ನ್ : ಆಸ್ಟ್ರೇಲಿಯದ ವೇಗದ ಬೌಲರ್ ಸ್ಪೆನ್ಸರ್ ಜಾನ್ಸನ್ ಗಾಯದ ಸಮಸ್ಯೆಯ ಕಾರಣಕ್ಕೆ ಮುಂಬರುವ ಬ್ರಿಟನ್‌ನಲ್ಲಿ ನಡೆಯಲಿರುವ ಸ್ಕಾಟ್‌ಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಜಾನ್ಸನ್ ಅವರು ಹಂಡ್ರೆಡ್ ಟೂರ್ನಮೆಂಟ್ ವೇಳೆ ಗಾಯಗೊಂಡಿದ್ದರು.
ಕ್ರಿಕೆಟ್ ಆಸ್ಟ್ರೇಲಿಯವು ಗಾಯಾಳು ಜಾನ್ಸನ್ ಬದಲಿಗೆ ಸೀನ್ ಅಬಾಟ್‌ರನ್ನು ಆಸ್ಟ್ರೇಲಿಯ ತಂಡಕ್ಕೆ ಸೇರಿಸಿಕೊಂಡಿದೆ. ಅಬಾಟ್ ಅವರು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದರು.
ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿದ ನಂತರ ಜಾನ್ಸನ್ ಅವರು 5 ಟಿ20 ಹಾಗೂ ಒಂದು ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದರು. ಯುವ ವೇಗದ ಬೌಲರ್ ಜಾನ್ಸನ್ ಬಿಬಿಎಲ್‌ನಲ್ಲಿ ಬ್ರಿಸ್ಬೇನ್ ಹೀಟ್ ಪರ ಆಡುವ ಮೂಲಕ ಪ್ರಸಿದ್ದಿಗೆ ಬಂದಿದ್ದರು. ಟಿ20 ತಂಡದಲ್ಲಿ ಮಿಚೆಲ್ ಸಾರ್ಕ್ಟ್ ಸ್ಥಾನ ತುಂಬಬಲ್ಲ ಪ್ರಬಲ ಸ್ಪರ್ಧಿಯಾಗಿದ್ದರು.
ಸ್ಟಾರ್ಕ್ ಅವರು ಸ್ಕಾಟ್‌ಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಿಂದ ವಿರಾಮ ಪಡೆದಿದ್ದು, ಏಕದಿನ ಪಂದ್ಯಗಳಿಗೆ ಲಭ್ಯವಿದ್ದಾರೆ. ಮತ್ತೊಂದೆಡೆ ಪ್ಯಾಟ್ ಕಮಿನ್ಸ್ ಇಡೀ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಟಿ20 ಹಾಗೂ ಏಕದಿನ ತಂಡಗಳಲ್ಲಿ ಜೋಶ್ ಹೇಝಲ್‌ವುಡ್‌ರನ್ನು ಆಯ್ಕೆ ಮಾಡಲಾಗಿದೆ.
ಸ್ಕಾಟ್‌ಲ್ಯಾಂಡ್, ಇಂಗ್ಲೆಂಡ್ ವಿರುದ್ಧ ಸರಣಿಗೆ ಆಸ್ಟ್ರೇಲಿಯ ಟಿ20 ತಂಡ: ಮಿಚೆಲ್ ಮಾರ್ಷ್(ನಾಯಕ),ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲ್ಲಿ, ಟಿಮ್ ಡೇವಿಡ್, ನಥಾನ್ ಎಲ್ಲಿಸ್, ಜೇಕ್ ಫ್ರೆಸರ್-ಮೆಕ್‌ಗುರ್ಕ್, ಕ್ಯಾಮರೂನ್ ಗ್ರೀನ್, ಆ್ಯರೊನ್ ಹಾರ್ಡಿ, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್(ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಆಡಮ್ ಝಂಪಾ.