ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತವೇ ಫೇವರಿಟ್: ಶಾಹಿದ್ ಅಫ್ರಿದಿ
ಶಾಹಿದ್ ಅಫ್ರಿದಿ | PC ; PTI
ದುಬೈ: ಮುಂಬರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ತಂಡ ಭಾರತವಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
‘‘ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತ ತಂಡದಲ್ಲಿ ಪಂದ್ಯಗಳನ್ನು ಗೆಲ್ಲಿಸಬಲ್ಲ ಆಟಗಾರರು ಹೆಚ್ಚಿದ್ದಾರೆ. ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಲು ಗೊತ್ತಿರುವವರೇ ಮ್ಯಾಚ್-ವಿನ್ನರ್‌ಗಳು. ಸದ್ಯಕ್ಕೆ ಪಾಕಿಸ್ತಾನ ತಂಡದಲ್ಲಿ ಅಂತಹ ಆಟಗಾರರಿಲ್ಲ’’ ಎಂದು ಜಿಯೋ ಹಾಟ್‌ಸ್ಟಾರ್‌ನ ‘ಗ್ರೇಟೆಸ್ಟ್ ರೈವಲ್ರಿ ರಿಟರ್ನ್ಸ್’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಅವರು ಹೇಳಿದರು.
‘‘ಭಾರತದ ಶಕ್ತಿ ಇರುವುದು ಅದರ ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ. ಅದರಿಂದಾಗಿ ಭಾರತವು ಪಂದ್ಯಗಳನ್ನು ಗೆಲ್ಲುತ್ತಿದೆ. ತುಂಬಾ ಸಮಯದಿಂದ ನಾವು ಆಟಗಾರರಿಗೆ ಅವಕಾಶಗಳನ್ನು ಕೊಡುತ್ತಾ ಬಂದಿದ್ದೇವೆ. ಆದರೆ, ಯಾರಿಗೂ ಸ್ಥಿರ ನಿರ್ವಹಣೆಯನ್ನು ನೀಡಲು ಸಾಧ್ಯವಾಗಿಲ್ಲ. ಕೆಲವರು ಕೆಲವು ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಆದರೆ, ಒಂದು ವರ್ಷ, ಎರಡು ವರ್ಷ ಅಥವಾ 50-60 ಪಂದ್ಯಗಳಲ್ಲಿ ಸ್ಥಿರ ನಿರ್ವಹಣೆ ನೀಡಿದ ಆಟಗಾರರು ನಮ್ಮಲ್ಲಿಲ್ಲ. ಹಾಗಾಗಿ, ಭಾರತಕ್ಕೆ ಹೋಲಿಸಿದರೆ ನಾವು ಸ್ವಲ್ಪ ದುರ್ಬಲರಾಗಿದ್ದೇವೆ. ಈ ಕ್ಷೇತ್ರದಲ್ಲಿ ಭಾರತವು ಬಲಿಷ್ಠವಾಗಿದೆ. ಆದರೆ, ಭಾರತದ ವಿರುದ್ಧದ ಗೆಲುವಿಗೆ ಮುಖ್ಯವಾಗಿ ಬೇಕಾಗಿರುವುದು ಸಾಮೂಹಿಕ ನಿರ್ವಹಣೆ. ಬ್ಯಾಟರ್ ಆಗಲಿ, ಬೌಲರ್ ಆಗಲಿ ಅಥವಾ ಸ್ಪಿನ್ನರ್ ಆಗಲಿ, ಪ್ರತಿಯೊಬ್ಬರ ಕೊಡುಗೆಯೂ ಮುಖ್ಯವಾಗಿದೆ’’ ಎಂದು ಶಾಹಿದ್ ಅಫ್ರಿದಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ದುಬೈಯಲ್ಲಿ ರವಿವಾರ ನಡೆಯಲಿದೆ. ಈಗಾಗಲೇ ಬಾಂಗ್ಲಾದೇಶ ವಿರುದ್ಧದ ಪಂದ್ಯಾವಳಿಯ ತನ್ನ ಮೊದಲ ಪಂದ್ಯವನ್ನು ಭಾರತ ಗೆದ್ದರೆ, ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲನುಭವಿಸಿದೆ.