ಚಾಂಪಿಯನ್ಸ್ ಟ್ರೋಫಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಲು ನಾವು ಸಮರ್ಥರು: ಬಾಂಗ್ಲಾದೇಶ ತಂಡದ ನಾಯಕ ನಝ್ಮುಲ್ ಹುಸೈನ್ ಶಾಂಟೊ
Photo - icc
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ನಝ್ಮುಲ್ ಹುಸೈನ್ ಶಾಂಟೊ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮುನ್ನ ತನ್ನ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ. ಅಚ್ಚರಿಯ ಫಲಿತಾಂಶವೊಂದನ್ನು ನೀಡುವ ಮತ್ತು ತನ್ನ ಪ್ರಪ್ರಥಮ ಐಸಿಸಿ ಪ್ರಶಸ್ತಿಯೊಂದನ್ನು ಗೆಲ್ಲುವ ಇರಾದೆಯೊಂದಿಗೆ ಬಾಂಗ್ಲಾದೇಶವು ಈ ಪಂದ್ಯಾವಳಿಯನ್ನು ಪ್ರವೇಶಿಸುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಪ್ರಕಟನೆಯೊಂದು ತಿಳಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ಫೆಬ್ರವರಿ 19ರಂದು ಆರಂಭಗೊಳ್ಳಲಿದೆ.
2023ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಬಾಂಗ್ಲಾದೇಶವು ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಅದೂ ಅಲ್ಲದೆ, ಕಳೆದ ವರ್ಷದ ಮಾರ್ಚ್ನಲ್ಲಿ ತಾಯ್ನೆಲದಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧದ ಏಕದಿನ ಸರಣಿಯನ್ನು 2-1ರಿಂದ ಗೆದ್ದ ಬಳಿಕ, ಕೇವಲ ಒಂದು ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಗೆದ್ದಿದೆ.
ಆದರೆ, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ತನ್ನಲ್ಲಿದೆ ಎಂಬುದಾಗಿ ಈ ಬಾಂಗ್ಲಾದೇಶಿ ತಂಡ ಭಾವಿಸಿದೆ ಎಂದು ಶಾಂಟೊ ಹೇಳಿದ್ದಾರೆ.
‘‘ನಾವು ಚಾಂಪಿಯನ್ ಗಳಾಗಲು ಚಾಂಪಿಯನ್ಸ್ ಟ್ರೋಫಿಗೆ ಹೋಗುತ್ತಿದ್ದೇವೆ’’ ಎಂದು ಶಾಂಟೊ ಹೇಳಿರುವುದಾಗಿ ಐಸಿಸಿಯ ಪ್ರಕಟನೆಯೊಂದು ತಿಳಿಸಿದೆ.
‘‘ಈ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗುವ ಅರ್ಹತೆಯು ಎಲ್ಲಾ ಎಂಟು ತಂಡಗಳಲ್ಲಿದೆ. ಅವುಗಳೆಲ್ಲವೂ ಉತ್ತಮ ಗುಣಮಟ್ಟದ ತಂಡಗಳು. ನಮ್ಮ ತಂಡವು ಸಾಮರ್ಥ್ಯ ಹೊಂದಿದೆ ಎಂದು ನಾನು ಭಾವಿಸುತ್ತೇನೆ. ತಂಡದ ಯಾರಲ್ಲೂ ಹೆಚ್ಚುವರಿ ಒತ್ತಡವಿಲ್ಲ. ಚಾಂಪಿಯನ್ ಗಳಾಗಲು ಪ್ರತಿಯೊಬ್ಬರೂ ಬಯಸುತ್ತಾರೆ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಹೊಂದಿದ್ದಾರೆ’’ ಎಂದು ಬಾಂಗ್ಲಾದೇಶ ತಂಡದ ನಾಯಕ ನುಡಿದರು.
► ಮೊದಲ ಪಂದ್ಯ ಭಾರತದ ವಿರುದ್ಧ
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅದು ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20ರಂದು ದುಬೈನಲ್ಲಿ ಭಾರತದ ವಿರುದ್ಧ ಆಡಲಿದೆ. ಉಳಿದಂತೆ, ಅದು ರಾವಲ್ಪಿಂಡಿಯಲ್ಲಿ ಫೆಬ್ರವರಿ 24ರಂದು ನ್ಯೂಝಿಲ್ಯಾಂಡ್ ವಿರುದ್ಧ ಮತ್ತು ಫೆಬ್ರವರಿ 27ರಂದು ಅದೇ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿದೆ.