ವಿಶ್ವ ಆರ್ಚರಿ ಚಾಂಪಿಯನ್‌ಶಿಪ್ : ಕೈಗಳಿಲ್ಲದ 18ರ ವಯಸ್ಸಿನ ಶೀತಲ್ ದೇವಿ ವಿಶ್ವ ಚಾಂಪಿಯನ್
ಶೀತಲ್ ದೇವಿ (Photo:X/@ArcherSheetal)
ಹೊಸದಿಲ್ಲಿ, ಸೆ.27: ಭಾರತದ ಕೈಗಳೇ ಇಲ್ಲದ ಬಿಲ್ಲುಗಾರ್ತಿ 18ರ ವಯಸ್ಸಿನ ಶೀತಲ್ ದೇವಿ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕೊರಿಯಾದ ಗ್ವಾಂಗ್ಜುವಿನಲ್ಲಿ ಶನಿವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಶೀತಲ್ ದೇವಿ ಅವರು ತುರ್ಕಿಯಾದ ವಿಶ್ವದ ನಂ.1 ಬಿಲ್ಲುಗಾರ್ತಿ ಓಝ್ನೂರ್ ಕ್ಯೂರ್ ಗಿರ್ಡಿ ಅವರನ್ನು 146-143 ಅಂಕಗಳ ಅಂತರದಿಂದ ಸೋಲಿಸಿದರು.
ಶೀತಲ್ ಸ್ಪರ್ಧಾವಳಿಯಲ್ಲಿದ್ದ ಕೈಗಳಿಲ್ಲದ ಏಕೈಕ ಬಿಲ್ಲುಗಾರ್ತಿಯಾಗಿದ್ದು, ಕೇವಲ ತನ್ನ ಕಾಲು ಹಾಗೂ ಕೆನ್ನೆಯನ್ನು ಬಳಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಈ ಗೆಲುವಿನ ಮೂಲಕ ಶೀತಲ್ ಅವರು ಚಾಂಪಿಯನ್‌ಶಿಪ್‌ನಲ್ಲಿ ತನ್ನ 3ನೇ ಪದಕವನ್ನು ತನ್ನದಾಗಿಸಿಕೊಂಡರು.
ಶೀತಲ್ ಈ ಮೊದಲು ಟೋಮನ್ ಕುಮಾರ್ ಜೊತೆಗೂಡಿ ಕಾಂಪೌಂಡ್ ಸ್ಪರ್ಧೆಯಲ್ಲಿ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಶೀತಲ್-ಟೋಮನ್ ಜೋಡಿ ಬ್ರಿಟನ್‌ನ ಗ್ರಿನ್‌ಹ್ಯಾಮ್ ಹಾಗೂ ನಾಥನ್ ಮೆಕ್‌ಕ್ವೀನ್‌ರನ್ನು 152-149 ಅಂಕಗಳ ಅಂತರದಿಂದ ಮಣಿಸಿದರು.
ಮತ್ತೊಂದು ಶ್ರೇಷ್ಠ ಪ್ರದರ್ಶನದಲ್ಲಿ ಶೀತಲ್ ಹಾಗೂ ಸರಿತಾ ಕಾಂಪೌಂಡ್ ಮಹಿಳೆಯರ ಓಪನ್ ಟೀಮ್ ಸ್ಪರ್ಧೆಯ ಫೈನಲ್‌ನಲ್ಲಿ ಟರ್ಕಿಯಾದ ಓಝ್ನೂರ್ ಗಿರ್ಡಿ ಹಾಗೂ ಬುರ್ಸಾ ಫಾತ್ಮಾ ವಿರುದ್ಧ 148-152 ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದರು.
ಶೀತಲ್ ಹಾಗೂ ಗಿರ್ಡಿ ನಡುವಿನ ವೈಯಕ್ತಿಕ ವಿಭಾಗದ ಫೈನಲ್ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲ ಸೆಟ್ 29-29ರಿಂದ ಟೈನಲ್ಲಿ ಕೊನೆಗೊಂಡರೆ, ಎರಡನೇ ಸೆಟ್‌ನಲ್ಲಿ 30-27ರಿಂದ ಮುನ್ನಡೆ ಸಾಧಿಸಿದರು.
3ನೇ ಸೆಟ್ ಕೂಡ 29-29ರಿಂದ ಟೈಆಗಿದ್ದು, 4ನೇ ಸೆಟ್‌ನಲ್ಲಿ ಸ್ವಲ್ಪ ಹಿನ್ನಡೆ ಕಂಡಿದ್ದರೂ 28 ಅಂಕ ಗಳಿಸಿದರು. ಅಂತಿಮವಾಗಿ ಶೀತಲ್ 116-114ರಿಂದ 2 ಅಂಕ ಮುನ್ನಡೆ ಪಡೆದರು. ಅಂತಿಮ ಸುತ್ತಿನಲ್ಲಿ ಎಲ್ಲ 30 ಅಂಕವನ್ನು ಗಳಿಸಿದ ಶೀತಲ್ ತನ್ನ ಚೊಚ್ಚಲ ಚಿನ್ನದ ಪದಕ ಜಯಿಸಿದರು.
ಸೆಮಿ ಫೈನಲ್‌ನಲ್ಲಿ ಜಮ್ಮು-ಕಾಶ್ಮೀರದ ಬಿಲ್ಲುಗಾರ್ತಿ ಬ್ರಿಟನ್‌ನ ಗ್ರಿನ್‌ಹ್ಯಾಮ್ ವಿರುದ್ಧ ಪ್ರಾಬಲ್ಯ ಸಾಧಿಸಿ 145-140 ಅಂತರದಿಂದ ಜಯಶಾಲಿಯಾದರು.
2023ರ ಪಿಲ್ಸೆನ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಶೀತಲ್ ಹಾಗೂ ಗಿರ್ಡಿ ಮುಖಾಮುಖಿಯಾಗಿದ್ದರು. ಆಗ ಗಿರ್ಡಿ ಅವರು ಶೀತಲ್‌ರನ್ನು 140-138 ಅಂತರದಿಂದ ಮಣಿಸಿದ್ದರು. ಈ ಬಾರಿ ಶೀತಲ್ ಜಯಭೇರಿ ಬಾರಿಸಿದರು.
ಬಂಗಾರ ಗೆದ್ದ ಟೋಮನ್ ಕುಮಾರ್
ಕೊರಿಯಾದ ಗ್ವಾಂಗ್ಜುವಿನಲ್ಲಿ ಶನಿವಾರ ನಡೆದ ವಿಶ್ವ ಆರ್ಚರಿ ಪ್ಯಾರಾ ಚಾಂಪಿಯನ್‌ಶಿಪ್‌ನಲ್ಲಿ ಕಾಂಪೌಂಡ್ ಪುರುಷರ ಓಪನ್ ಫೈನಲ್‌ನಲ್ಲಿ ಸಹ ಸ್ಪರ್ಧಿ ರಾಕೇಶ್ ಕುಮಾರ್‌ರನ್ನು ಮಣಿಸಿದ ಭಾರತದ ಟೋಮನ್ ಕುಮಾರ್ ಚಿನ್ನದ ಪದಕ ಜಯಿಸಿದ್ದಾರೆ.
ರಾಕೇಶ್ ಅವರ ಉಪಕರಣದ ಅಸಮರ್ಪಕ ಕಾರ್ಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಟೋಮನ್ ಕುಮಾರ್ ಚಾಂಪಿಯನ್‌ಪಟ್ಟ ಅಲಂಕರಿಸಿದರು.
ಇದಕ್ಕೂ ಮೊದಲು ಟೋಮನ್ ಅವರು ಸೆಮಿ ಫೈನಲ್‌ನಲ್ಲಿ ಶ್ಯಾಮ್ ಸುಂದರ್ ಸ್ವಾಮಿ ಅವರನ್ನು 144-143 ಅಂತರದಿಂದ ರೋಚಕವಾಗಿ ಮಣಿಸಿದರು. ಫೈನಲ್‌ನಲ್ಲಿ ರಾಕೇಶ್ ವಿರುದ್ಧ ಆಡಲು ಅರ್ಹತೆ ಪಡೆದರು. ರಾಕೇಶ್ ಬ್ರಿಟನ್‌ನ ನಾಥನ್‌ಮೆಕ್‌ಕ್ವೀನ್ ವಿರುದ್ಧ 147-143 ಅಂತರದಿಂದ ಜಯ ಸಾಧಿಸಿದರು.