×
Ad

ಪ್ರಥಮ ಟೆಸ್ಟ್ : ಸಿರಾಜ್, ಬುಮ್ರಾ ಮಾರಕ ಬೌಲಿಂಗ್, 162 ರನ್‌ಗೆ ಆಲೌಟಾದ ವೆಸ್ಟ್‌ಇಂಡೀಸ್

Update: 2025-10-02 21:03 IST

 ಸಿರಾಜ್, ಬುಮ್ರಾ | Photo Credit: PTI  

ಅಹ್ಮದಾಬಾದ್, ಅ.2: ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನವಾದ ಗುರುವಾರ ವೆಸ್ಟ್‌ಇಂಡೀಸ್ ತಂಡವನ್ನು 162 ರನ್‌ಗೆ ನಿಯಂತ್ರಿಸಿರುವ ಟೀಮ್ ಇಂಡಿಯಾವು ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್(ಔಟಾಗದೆ 53 ರನ್, 114 ಎಸೆತ, 6 ಬೌಂಡರಿ) ಅರ್ಧಶತಕದ ಕೊಡುಗೆಯ ನೆರವಿನಿಂದ 2 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಿ ದಿಟ್ಟ ಉತ್ತರ ನೀಡಲಾರಂಭಿಸಿದೆ. ಇದೀಗ 41 ರನ್ ಹಿನ್ನಡೆಯಲ್ಲಿರುವ ಭಾರತವು ಇನ್ನೂ 8 ವಿಕೆಟ್‌ಗಳನ್ನು ಹೊಂದಿದೆ.

ಪ್ರವಾಸಿ ತಂಡವನ್ನು 44.1 ಓವರ್‌ನೊಳಗೆ ಸರ್ವಪತನಗೊಳಿಸಿರುವ ಭಾರತ ತಂಡದ ಪರ ಮೊದಲ ವಿಕೆಟ್‌ನಲ್ಲಿ 68 ರನ್ ಸೇರಿಸಿದ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್(36 ರನ್, 54 ಎಸೆತ, 7 ಬೌಂಡರಿ)ಉತ್ತಮ ಆರಂಭ ಒದಗಿಸಿದರು. ಜೈಸ್ವಾಲ್ ನಂತರ ಸಾಯಿ ಸುದರ್ಶನ್(7 ರನ್,19 ಎಸೆತ)ಕೂಡ ಬೇಗನೆ ಔಟಾದರು. ಆಗ ಜೊತೆಯಾದ ರಾಹುಲ್(ಔಟಾಗದೆ 53 ರನ್)ಹಾಗೂ ನಾಯಕ ಶುಭಮನ್ ಗಿಲ್(ಔಟಾಗದೆ 18, 42 ಎಸೆತ)ತಂಡವನ್ನು ಆಧರಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ವೆಸ್ಟ್‌ಇಂಡೀಸ್ ತಂಡದ ನಿರ್ಧಾರ ಕೈಕೊಟ್ಟಿತು. ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದಾಗಿ ವಿಂಡೀಸ್‌ನ ಅಗ್ರ ಕ್ರಮಾಂಕವು ಒತ್ತಡಕ್ಕೆ ಸಿಲುಕಿ ಭೋಜನ ವಿರಾಮಕ್ಕೆ ಮೊದಲೇ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಮಧ್ಯಮ ಸರದಿಯಲ್ಲಿ ಜಸ್ಟಿನ್ ಗ್ರೀವ್ಸ್ (32 ರನ್,48 ಎಸೆತ), ರೋಸ್ಟನ್ ಚೇಸ್(24 ರನ್, 43 ಎಸೆತ)ಹಾಗೂ ಶೈ ಹೋಪ್(26 ರನ್, 36 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರು. ಆದರೆ ಉಳಿದವರು ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ವಿಂಡೀಸ್ ತಂಡವು ಟೀ ವಿರಾಮದ ವೇಳೆಗೆ 44.1 ಓವರ್‌ಗಳಲ್ಲಿ 162 ರನ್ ಗಳಿಸಿ ಆಲೌಟಾಯಿತು.

ವಿಂಡೀಸ್ ತಂಡವು ಭಾರತದಲ್ಲಿ ನಡೆದ ಟೆಸ್ಟ್ ಕ್ರಿಕೆಟಿನ ಮೊದಲ ಇನಿಂಗ್ಸ್‌ನಲ್ಲಿ 2ನೇ ಕನಿಷ್ಠ ಓವರ್‌ಗಳಲ್ಲಿ ಆಲೌಟಾಗಿದೆ. ಬಾಂಗ್ಲಾದೇಶ ತಂಡವು 2019ರಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ 30.3 ಓವರ್‌ಗಳಲ್ಲಿ ಸರ್ವಪತನಗೊಂಡಿತ್ತು.

ವೆಸ್ಟ್‌ಇಂಡೀಸ್ ತಂಡವು ಉತ್ತಮ ಆರಂಭದ ಕೊರತೆ ಎದುರಿಸುತ್ತಿದ್ದು, 12 ಇನಿಂಗ್ಸ್‌ಗಳಲ್ಲಿ ಆರಂಭಿಕ ಆಟಗಾರರು 50 ರನ್ ಜೊತೆಯಾಟ ನಡೆಸಿಲ್ಲ. ಆರಂಭಿಕ ಆಟಗಾರರಾದ ಟಿ.ಚಂದರ್‌ಪಾಲ್(0) ಹಾಗೂ ಜಾನ್ ಕ್ಯಾಂಪ್‌ಬೆಲ್(8)ಏಳನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಸೇರಿಕೊಂಡರು. ಬ್ರೆಂಡನ್ ಕಿಂಗ್(13 ರನ್),ಅಲಿಕ್ ಅಥನಾಝ್(12 ರನ್),ಖಾರಿ ಪೀಯೆರ್(11 ರನ್), ಜೊಮೆಲ್ ವಾರಿಕನ್(8 ರನ್)ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದರು.

ವೇಗಿಗಳಾದ ಮುಹಮ್ಮದ್ ಸಿರಾಜ್(4-40) ಹಾಗೂ ಜಸ್‌ಪ್ರಿತ್ ಬುಮ್ರಾ(3-42) ತಮ್ಮೊಳಗೆ 7 ವಿಕೆಟ್‌ಗಳನ್ನು ಹಂಚಿಕೊಂಡರು. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್(2-25)ಹಾಗೂ ವಾಶಿಂಗ್ಟನ್ ಸುಂದರ್(1-9) ಕೆರಿಬಿಯನ್ ಬ್ಯಾಟಿಂಗ್ ಸರದಿಯನ್ನು ಕಾಡಿದರು. ಬುಮ್ರಾ ಸ್ವದೇಶದಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದರು. ಮುಹಮ್ಮದ್ ಶಮಿಗಿಂತ ವೇಗವಾಗಿ ಈ ಸಾಧನೆ ಮಾಡಿದರು.

ಬೌಲರ್‌ಗಳ ಪ್ರಯತ್ನದಿಂದ ಬ್ಯಾಟರ್‌ಗಳು ಸಾಧಾರಣ ಗುರಿ ಪಡೆದಿದ್ದು, ಮೊದಲ ದಿನದಾಟದಂತ್ಯಕ್ಕೆ ಭಾರತವು ಹಿಡಿತ ಸಾಧಿಸಿದೆ.

ಇಂಗ್ಲೆಂಡ್‌ನಲ್ಲಿನ ಉತ್ತಮ ಪ್ರದರ್ಶನವನ್ನು ಸ್ವದೇಶದಲ್ಲೂ ಮುಂದುವರಿಸಿದ ಸಿರಾಜ್ ಅವರು ವಿಂಡೀಸ್ ಕಳೆದುಕೊಂಡ ಮೊದಲ 5 ವಿಕೆಟ್‌ಗಳ ಪೈಕಿ 4 ಅನ್ನು ಕಬಳಿಸಿದರು. ಸಿರಾಜ್ ಸ್ವದೇಶಿ ಟೆಸ್ಟ್‌ನಲ್ಲಿ ಈ ತನಕ 5 ವಿಕೆಟ್ ಗೊಂಚಲು ಪಡೆದಿಲ್ಲ.

ರಾಹುಲ್ ತನ್ನ 20ನೇ ಅರ್ಧಶತಕ ಗಳಿಸಿದರೆ, ನಾಯಕ ಗಿಲ್ 18 ರನ್ ಗಳಿಸಿದ್ದಾರೆ. ಭಾರತವು ಉತ್ತಮ ಆರಂಭದ ಲಾಭ ಪಡೆಯಲು ಎದುರು ನೋಡುತ್ತಿದ್ದು, 2ನೇ ದಿನದಾಟದಲ್ಲಿ ಆಟ ಮುಂದುವರಿಸಿ ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News