ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಗುವ ಬಯಕೆ ವ್ಯಕ್ತಪಡಿಸಿದ ಸೌರವ್ ಗಂಗುಲಿ
ಸೌರವ್ ಗಂಗುಲಿ | PC : PTI
ಹೊಸದಿಲ್ಲಿ: ಮುಂಬರುವ 2026ರ ಪಶ್ಚಿಮಬಂಗಾಳ ವಿಧಾನ ಸಭಾ ಚುನಾವಣೆಯ ವೇಳಗೆ ರಾಜಕೀಯ ರಂಗಕ್ಕೆ ಪ್ರವೇಶಿಸುವ ಆಕಾಂಕ್ಷೆಯನ್ನು ಸಂಪೂರ್ಣ ತಳ್ಳಿ ಹಾಕಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ, ಟೀಮ್ ಇಂಡಿಯಾದ ಕೋಚ್ ಆಗುವ ಬಯಕೆ ಇದೆ ಎಂದು ಹೇಳಿದ್ದಾರೆ.
ಕೋಲ್ಕತಾದಲ್ಲಿ ಪಿಟಿಐ ಜೊತೆಗಿನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ 52ರ ವಯಸ್ಸಿನ ಬಿಸಿಸಿಐನ ಮಾಜಿ ಅಧ್ಯಕ್ಷ ಈ ಹೇಳಿಕೆಯನ್ನು ನೀಡಿದ್ದಾರೆ.
2018-19ರಿಂದ 2022-24ರ ತನಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟೀಮ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಗಂಗುಲಿ, ಕ್ರಿಕೆಟ್ ಆಡಳಿತ ಹಾಗೂ ಕೋಚಿಂಗ್ ನಲ್ಲಿ ತನ್ನ ಭವಿಷ್ಯದ ಯೋಜನೆಗಳ ಕುರಿತ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ.
‘‘ನಾನು ವಿಭಿನ್ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರಿಂದ ಕೋಚಿಂಗ್ ನೀಡುವ ಕುರಿತು ಎಂದಿಗೂ ಯೋಚಿಸಿರಲಿಲ್ಲ. ನಾನು 2013ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಮಂಡಳಿ(ಬಿಸಿಸಿಐ)ಅಧ್ಯಕ್ಷನಾದೆ. ಬಿಸಿಸಿಐ ಅಧ್ಯಕ್ಷನಾಗಿ ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸಿದ್ದು, ನನ್ನ ದೊಡ್ಡ ಕೊಡುಗೆ’’ ಎಂದು ಬೆಟ್ಟು ಮಾಡಿದರು.
ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡುವ ಬಗ್ಗೆ ಕೇಳಿದಾಗ, ‘‘ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೋಡೋಣ. ನನಗೆ ಈಗ ಕೇವಲ 50(53)ವರ್ಷ. ಹೀಗಾಗಿ ಏನಾಗುತ್ತದೆ ಎಂದು ನೋಡಬೇಕು. ಆ ವಿಚಾರದಲ್ಲಿ ನಾನು ಮುಕ್ತನಾಗಿದ್ದೇನೆ’’ ಎಂದು ಹೇಳಿದ್ದಾರೆ.
ರಾಜಕೀಯ ಪಕ್ಷಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗುಲಿ, ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದರು.
ಪಶ್ಚಿಮಬಂಗಾಳ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಸಾಧ್ಯತೆಯ ಬಗ್ಗೆ ಒತ್ತಡ ಹೇರಿದಾಗಲೂ ಅದೇ ನಿಲುವಿಗೆ ಬದ್ಧರಾಗಿದ್ದರು.
ಪ್ರಸಕ್ತ ಭಾರತೀಯ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಕಾರ್ಯನಿರ್ವಹಣೆ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಗಂಗುಲಿ, ‘‘ಗೌತಮ್(ಗಂಭೀರ್)ಸದ್ಯ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಹಿನ್ನಡೆ ಕಂಡಿದ್ದ ಅವರು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ವೇಳೆ ಹಿಡಿತ ಸಾಧಿಸಿದರು. ಇದೀಗ ಇಂಗ್ಲೆಂಡ್ ವಿರುದ್ಧ ದೊಡ್ಡ ಸರಣಿಯನ್ನಾಡುತ್ತಿದ್ದಾರೆ’’ ಎಂದರು.