ಮುಹಮ್ಮದ್ ಶಮಿ ಎಲ್ಲ ವಿಧದ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳುವಂತಾಗಬೇಕು : ಸೌರವ್ ಗಂಗುಲಿ
ಸೌರವ್ ಗಂಗುಲಿ | PC : PTI
ಹೊಸದಿಲ್ಲಿ: ಮೊನಚಿನ ದಾಳಿಗೆ ಹೆಸರಾದ ವೇಗದ ಬೌಲರ್ ಮುಹಮ್ಮದ್ ಶಮಿ ಎಲ್ಲ ವಿಧದ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳುವಂತಾಗಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಅಭಿಪ್ರಾಯಪಟ್ಟಿದ್ದಾರೆ.
ಶಮಿ ಉತ್ತಮ ಫಾರ್ಮ್‍ನಲ್ಲಿದ್ದು, ಒಳ್ಳೆಯ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಆಯ್ಕೆಗಾರರು 35 ವರ್ಷದ ವೇಗದ ಬೌಲರ್‍ನಿಂದಾಚೆಗೆ ನೋಡುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಗಳ ಸರಣಿಗೆ ಶಮಿ ಆಯ್ಕೆಯಾಗದಿರುವ ಬಗ್ಗೆ ಗಂಗುಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಕಳೆದ ಮಾರ್ಚ್‍ನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿ ಕೊನೆಯದಾಗಿ ಭಾರತ ಪರ ಆಡಿದ್ದರು. "ಶಮಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಸಮರ್ಥರಾಗಿದ್ದು, ನಾವು ಅವರನ್ನು ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ ನೋಡಿದ್ದೇವೆ. ಬಂಗಾಳಕ್ಕೆ ಅವರ ಕೈಚಳಕದಿಂದಾಗಿ ಗೆಲುವು ಒದಗಿಸಿದ್ದಾರೆ" ಎಂದು ಗಂಗೂಲಿ ಗುಣಗಾನ ಮಾಡಿದ್ದಾರೆ.
ಶಮಿ ಮೊದಲ ಎರಡು ರಣಜಿ ಪಂದ್ಯಗಳಲ್ಲಿ 15 ವಿಕೆಟ್ ಕಿತ್ತಿದ್ದಾರೆ. ಮೂರು ಪಂದ್ಯಗಳಲ್ಲಿ 91 ಓವರ್ ಬೌಲಿಂಗ್ ಮಾಡಿರುವ ಅವರು, ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಗಳಿಸಿಲ್ಲ. 2023ರ ಏಕದಿನ ವಿಶ್ವಕಪ್ ಬಳಿಕ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಟೂರ್ನಿಯಲ್ಲಿ 10.70 ಸರಾಸರಿಯಲ್ಲಿ 24 ವಿಕೆಟ್ ಕಿತ್ತಿದ್ದರು ಎಂದು ಹೇಳಿದ್ದಾರೆ.