ಚೊಚ್ಚಲ ಪಂದ್ಯದಲ್ಲೇ 150 ರನ್ ಗಳಿಕೆ: ಪಾಕ್ ಕ್ರಿಕೆಟಿಗನ ದಾಖಲೆ ಮುರಿದ ದಕ್ಷಿಣ ಆಫ್ರಿಕಾದ ಲುಹಾನ್
ಲುಹಾನ್ ಡ್ರೆ ಪ್ರಿಟೋರಿಯಸ್ | PC : X \ @CricCrazyJohns
ಬುಲವಾಯೊ (ಝಿಂಬಾಬ್ವೆ): ತನ್ನ ಚೊಚ್ಚಲ ಪಂದ್ಯದಲ್ಲೇ ಅಮೋಘ ಶತಕ (153) ಬಾರಿಸಿದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ ಲುಹಾನ್ ಡ್ರೆ ಪ್ರಿಟೋರಿಯಸ್, ಪಾದಾರ್ಪಣೆ ಪಂದ್ಯದಲ್ಲೇ 150ಕ್ಕೂ ಹೆಚ್ಚು ರನ್ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ರ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ಆತಿಥೇಯ ಝಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಲುಹಾನ್ ಡ್ರೆ ಪ್ರಿಟೋರಿಯಸ್, ತಾನು ಆಡಿದ ಚೊಚ್ಚಲ ಇನಿಂಗ್ಸ್ ನಲ್ಲೇ ಭರ್ಜರಿ 153 ರನ್ ಗಳಿಸಿದರು.
19 ವರ್ಷ, 93 ದಿನಗಳ ವಯೋಮಾನದಲ್ಲೇ 150ರ ಗಡಿ ದಾಟಿದ ದಾಖಲೆ ಬರೆದಿರುವ ಲುಹಾನ್ ಡ್ರೆ ಪ್ರಿಟೋರಿಯಸ್, ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಪ್ರಪ್ರಥಮ ಬ್ಯಾಟರ್ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ. ಇದುವರೆಗೆ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದ ಪಾಕಿಸ್ತಾನದ ದೈತ್ಯ ಬ್ಯಾಟರ್ ಜಾವೇದ್ ಮಿಯಾಂದಾದ್, 1976ರಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ತಾವಾಡಿದ ಚೊಚ್ಚಲ ಇನಿಂಗ್ಸ್ ನಲ್ಲಿಯೇ 163 ರನ್ ಗಳಿಸಿದ್ದರು. ಆಗ ಜಾವೇದ್ ಮಿಯಾಂದಾದ್ ರ ವಯಸ್ಸು 19 ವರ್ಷ, 119 ದಿನಗಳಾಗಿತ್ತು.