×
Ad

ರಣಜಿ: ಸಕಾರಿಯಾ ಸಾಹಸ, ಕರ್ನಾಟಕ ವಿರುದ್ಧ ಸೌರಾಷ್ಟ್ರಕ್ಕೆ ಅಲ್ಪ ಮುನ್ನಡೆ

ಸ್ಪಿನ್ನರ್ ಶ್ರೇಯಸ್ ಗೋಪಾಲ್‌ಗೆ 8 ವಿಕೆಟ್ ಗೊಂಚಲು

Update: 2025-10-17 21:48 IST

Photo Credit : @BCCIdomestic

ರಾಜ್‌ಕೋಟ್, ಅ.17: ರಣಜಿ ಟ್ರೋಫಿ ಟೂರ್ನಿಯಲ್ಲಿ ಶುಕ್ರವಾರ ನಡೆದ ‘ಬಿ’ ಗುಂಪಿನ ಪಂದ್ಯದ 3ನೇ ದಿನದಾಟದಲ್ಲಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್(8-110)ಅವರ ಅಮೋಘ ಬೌಲಿಂಗ್‌ನ ಹೊರತಾಗಿಯೂ ಚೇತನ್ ಸಕಾರಿಯಾ ಸಾಹಸದಿಂದ ಆತಿಥೇಯ ಸೌರಾಷ್ಟ್ರ ಕ್ರಿಕೆಟ್ ತಂಡವು ಕರ್ನಾಟಕ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ನಿರ್ಣಾಯಕ 4 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಾಲಂಗೋಚಿ ಸಕಾರಿಯಾ (29 ರನ್,72 ಎಸೆತ) ಅವರು ಗೋಪಾಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ಸೌರಾಷ್ಟ್ರ ತಂಡಕ್ಕೆ ಅಲ್ಪ ಮುನ್ನಡೆ ಒದಗಿಸಿಕೊಟ್ಟರು. ಆ ನಂತರ ಶ್ರೇಯಸ್ ಗೋಪಾಲ್‌ಗೆ 8ನೇ ಬಲಿಯಾದರು. ಪ್ರಮುಖ ಇನಿಂಗ್ಸ್ ಆಡಿ ಔಟಾದ ಸಕಾರಿಯಾಗೆ ಸಹ ಆಟಗಾರರು ವೀರೋಚಿತ ಸ್ವಾಗತ ನೀಡಿದರು.

ಸಕಾರಿಯಾ ಹಾಗೂ ಯುವರಾಜ್ ಸಿನ್ಹಾ (ಔಟಾಗದೆ 13) ಕೊನೆಯ ವಿಕೆಟ್‌ನಲ್ಲಿ 34 ರನ್ ಜೊತೆಯಾಟ ನಡೆಸಿದರು. ಈ ಜೋಡಿಯು 14.3 ಓವರ್ ಬ್ಯಾಟಿಂಗ್ ಮಾಡಿದ್ದು, ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದೆ. ಕರ್ನಾಟಕದ ಬೌಲರ್‌ಗಳು ಈ ಇಬ್ಬರನ್ನು ಬೇರ್ಪಡಿಸಲು ಎಲ್ಲ ಪ್ರಯತ್ನ ನಡೆಸಿದರು. ಈ ಇಬ್ಬರು ಒಂದೊಂದು ರನ್ ಗಳಿಸಿದಾಗಲೆಲ್ಲಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಭ್ರಮ ಕಂಡುಬಂತು. ಕ್ರೀಸ್‌ನಲ್ಲಿ ಅಂಟಿಕೊಂಡು ಆಡಿದ ಈ ಜೋಡಿಯು ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ 376 ರನ್ ಗಳಿಸಲು ನೆರವಾದರು.

ಶನಿವಾರ ಕೊನೆಯ ದಿನದಾಟದಲ್ಲಿ ಯಾವುದೇ ತಿರುವು ಲಭಿಸದೆ ಪಂದ್ಯ ಡ್ರಾನಲ್ಲಿ ಕೊನೆಗೊಂಡರೆ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ 3 ಅಂಕ ಗಳಿಸಲಿದೆ.

ಇದಕ್ಕೂ ಮೊದಲು ಸೌರಾಷ್ಟ್ರ ತಂಡವು 4 ವಿಕೆಟ್‌ಗಳ ನಷ್ಟಕ್ಕೆ 200 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು. ಅರ್ಪಿತ್ ವಸವಡ (58 ರನ್, 123 ಎಸೆತ) ಹಾಗೂ ಪ್ರೇರಕ್ ಮಂಕಡ್(27 ರನ್, 65 ಎಸೆತ) ತಂಡದ ಹಿನ್ನಡೆಯನ್ನು ಕುಗ್ಗಿಸಿದರು. ಮಂಕಡ್ ವಿಕೆಟನ್ನು ಉರುಳಿಸಿದ ಶ್ರೇಯಸ್ 5ನೇ ವಿಕೆಟ್‌ಗೆ 66 ರನ್ ಜೊತೆಯಾಟಕ್ಕೆ ತೆರೆ ಎಳೆದರು.

ಸಮ್ಮರ್ ಗುಜ್ಜರ್(45 ರನ್, 122 ಎಸೆತ) ಹಾಗೂ ಅರ್ಪಿತ್ 6ನೇ ವಿಕೆಟ್‌ಗೆ 54 ರನ್ ಸೇರಿಸಿ ತಂಡ ಮೊತ್ತವನ್ನು 291ಕ್ಕೆ ತಲುಪಿಸಿದರು. ಅರ್ಪಿತ್ ವಿಕೆಟನ್ನು ಪಡೆದ ಶ್ರೇಯಸ್ ಮತ್ತೊಮ್ಮೆ ಆಘಾತ ನೀಡಿದರು.

ಭೋಜನ ವಿರಾಮಕ್ಕೆ ಮೊದಲು ಧರ್ಮೇಂದ್ರ ಸಿನ್ಹಾ ಜಡೇಜ(10 ರನ್) ಅವರು ಶ್ರೇಯಸ್‌ಗೆ ವಿಕೆಟ್ ಒಪ್ಪಿಸಿದರು. ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ನಾಯಕ ಜಯದೇವ್ ಉನದ್ಕಟ್(6 ರನ್) ವಿಕೆಟನ್ನು ಉರುಳಿಸಿದರು. ಆಗ ಸೌರಾಷ್ಟ್ರ ತಂಡವು 318 ರನ್‌ಗೆ 8ನೇ ವಿಕೆಟ್ ಕಳೆದುಕೊಂಡಿತ್ತು. ಇನ್ನೂ 54 ರನ್ ಹಿನ್ನಡೆಯಲ್ಲಿತ್ತು.

ಮತ್ತೊಮ್ಮೆ ದಾಳಿಗಿಳಿದ ಶ್ರೇಯಸ್ ಅವರು ಗುಜ್ಜರ್ ಹಾಗೂ ಸಕಾರಿಯಾ ವಿಕೆಟ್‌ಗಳನ್ನು ಕಬಳಿಸಿದರು. ಆದರೆ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್‌ನಲ್ಲಿ ಅಮೂಲ್ಯ ಮುನ್ನಡೆ ಪಡೆಯುವಲ್ಲಿ ಶಕ್ತವಾಯಿತು.

ಕರ್ನಾಟಕ ತಂಡವು 3ನೇ ದಿನದಾಟದಂತ್ಯಕ್ಕೆ ತನ್ನ 2ನೇ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದ್ದು, 85 ರನ್ ಮುನ್ನಡೆಯಲ್ಲಿದೆ. ನಾಯಕ ಮಯಾಂಕ ಅಗರ್ವಾಲ್(31ರನ್)ಹಾಗೂ ದೇವದತ್ತ ಪಡಿಕ್ಕಲ್(18 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ನಿಕಿನ್ ಜೋಸ್ 34 ರನ್ ಗಳಿಸಿ ಗುಜ್ಜರ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

*ಕರ್ನಾಟಕ ಮೊದಲ ಇನಿಂಗ್ಸ್: 372 ರನ್‌ಗೆ ಆಲೌಟ್

*ಸೌರಾಷ್ಟ್ರ ಮೊದಲ ಇನಿಂಗ್ಸ್: 376 ರನ್‌ಗೆ ಆಲೌಟ್

(ಚಿರಾಗ್ ಜಾನಿ 90, ಅರ್ಪಿತ್ 58, ಸಮ್ಮರ್ ಗುಜ್ಜರ್ 45, ಹಾರ್ವಿಕ್ ದೇಸಾಯಿ 41, ಪ್ರೇರಕ್ ಮಂಕಡ್ 27, ಚೇತನ್ ಸಕಾರಿಯಾ 29, ಶ್ರೇಯಸ್ ಗೋಪಾಲ್ 8-110)

*ಕರ್ನಾಟಕ 2ನೇ ಇನಿಂಗ್ಸ್: 28 ಓವರ್‌ಗಳಲ್ಲಿ 89/1

(ನಿಕಿನ್ ಜೋಸ್ 34, ಮಯಾಂಕ್ ಅಗರ್ವಾಲ್ ಔಟಾಗದೆ 31, ಪಡಿಕ್ಕಲ್ ಔಟಾಗದೆ 18)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News