×
Ad

ದೃಷ್ಟಿ ಕಳೆದುಕೊಳ್ಳಲು ಪ್ರಾರಂಭಿಸಿದ್ದೇನೆ: ತಮ್ಮ ನಿವೃತ್ತಿ ಕುರಿತು ಎಬಿಡಿ ವಿಲಿಯರ್ಸ್ ಹೇಳಿಕೆ

Update: 2023-12-08 19:27 IST

@abdevilliers17/instagram

ಜೊಹಾನ್ಸ್ ಬರ್ಗ್: ಕಳೆದ ಎರಡು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ದೃಷ್ಟಿಮಾಂದ್ಯತೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ ಎಂದು ತಾನು ಮುಂಚಿತವಾಗಿ ಯಾಕೆ ನಿವೃತ್ತಿಗೊಂಡೆ ಎಂಬುದರ ಕುರಿತು ದಕ್ಷಿಣ ಆಫ್ರಿಕಾ ತಂಡದ ದಂತಕತೆ ಆಟಗಾರ ಎಬಿ ಡಿ ವಿಲಿಯರ್ಸ್ ಮನಬಿಚ್ಚಿ ಮಾತನಾಡಿದ್ದಾರೆ. ಹರಿಣಗಳ ತಂಡದ ನಾಯಕ ಎಬಿ ಡಿ ವಿಲಿಯರ್ಸ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದರು. ಆದರೆ, ಅವರು ಟಿ-20 ಲೀಗ್ ಪಂದ್ಯಗಳಲ್ಲಿ ಫ್ರಾಂಚೈಸಿ ತಂಡಗಳಿಗೆ ಆಟವಾಡುವುದನ್ನು ಮುಂದುವರಿಸಿದ್ದರು. ಮುಖ್ಯವಾಗಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಅವರ ಆಟ ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತು ನೋಡುತ್ತಾರೆ ಎಂದು ndtv.com ವರದಿ ಮಾಡಿದೆ.

‘Wisden Cricket Monthly’ ಪತ್ರಿಕೆಯೊಂದಿಗೆ ಮಾತನಾಡಿರುವ ಎಬಿ ಡಿ ವಿಲಿಯರ್ಸ್, ತಮ್ಮ ನಿವೃತ್ತಿ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ನನ್ನ ಕಿರಿಯ ಪುತ್ರನು ಆಕಸ್ಮಿಕವಾಗಿ ನನ್ನ ಕಣ್ಣಿಗೆ ಒದ್ದಿದ್ದರಿಂದ ನನ್ನ ಕಣ್ಣು ಗುಡ್ಡೆ ಹೊರ ಬಂದು, ನಾನು ದೃಷ್ಟಿಮಾಂದ್ಯತೆಗೆ ಒಳಗಾಗಿ ಒಂದೇ ಕಣ್ಣಿನಲ್ಲಿ ಆಟವಾಡಬೇಕಾಗಿ ಬಂತು ಎಂದು ಬಹಿರಂಗಗೊಳಿಸಿದ್ದಾರೆ.

“ನನ್ನ ಕಿರಿಯ ಪುತ್ರ ತನ್ನ ಪಾದದಿಂದ ನನ್ನ ಕಣ್ಣಿಗೆ ಆಕಸ್ಮಿಕವಾಗಿ ಒದ್ದ. ಅದರಿಂದ ನಾನು ನಿಜವಾಗಿಯೂ ನನ್ನ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ” ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.

“ನನಗೆ ಶಸ್ತ್ರಚಿಕಿತ್ಸೆ ಮುಗಿದ ನಂತರ, ‘ಈ ಸ್ಥಿತಿಯಲ್ಲಿ ನೀವು ಜಗತ್ತಿನಲ್ಲಿ ಹೇಗೆ ಕ್ರಿಕೆಟ್ ಆಡುತ್ತೀರಿ?’ ಎಂದು ವೈದ್ಯರು ಪ್ರಶ್ನಿಸಿದರು. ಆದರೆ, ಅದೃಷ್ಟವಶಾತ್ ನನ್ನ ಎಡಗಣ್ಣು ಕಳೆದ ಎರಡು ವರ್ಷಗಳ ವೃತ್ತಿ ಜೀವನದಲ್ಲಿ ಯೋಗ್ಯವಾಗಿಯೇ ಕೆಲಸ ಮಾಡಿತು” ಎಂದೂ ಅವರು ತಿಳಿಸಿದ್ದಾರೆ.

ಇದಲ್ಲದೆ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದನ್ನು ಹಿಂಪಡೆಯದಿರುವಲ್ಲಿ ಕೋವಿಡ್ ಕೂಡಾ ಪ್ರಮುಖ ಪಾತ್ರ ವಹಿಸಿತು. 2015ರ ವಿಶ್ವಕಪ್ ಸೆಮಿಫೈನಲ್ ನಲ್ಲಿನ ಸೋಲು ನನಗೆ ಭಾರಿ ನೋವುಂಟು ಮಾಡಿತು ಹಾಗೂ ಅದರಿಂದ ಚೇತರಿಸಿಕೊಳ್ಳಲು ನನಗೆ ಸಾಕಷ್ಟು ಸಮಯ ಹಿಡಿಯಿತು ಎಂದೂ ಅವರು ಬಹಿರಂಗಪಡಿಸಿದ್ದಾರೆ.

ಎಬಿಡಿ ವಿಲಿಯರ್ಸ್ ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾ ತಂಡದ ಪರವಾಗಿ 114 ಟೆಸ್ಟ್ ಪಂದ್ಯಗಳು, 228 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಹಾಗೂ 78 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ಪಂದ್ಯಗಳಲ್ಲಿ 8,765 ರನ್ ಗಳಿಸಿದ್ದರೆ, ಏಕದಿನ ಪಂದ್ಯಗಳಲ್ಲಿ 9577 ರನ್ ಕಲೆ ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News