×
Ad

ಸುಲ್ತಾನ್ ಆಫ್ ಜೊಹೊರ್ ಕಪ್ | ಮಲೇಶ್ಯಕ್ಕೆ ತೆರಳಿದ ಭಾರತದ ಜೂನಿಯರ್ ಪುರುಷರ ಹಾಕಿ ತಂಡ

Update: 2024-10-15 21:07 IST

PC : X 

ಚೆನ್ನೈ : ಹನ್ನೆರಡನೇ ಆವೃತ್ತಿಯ ಸುಲ್ತಾನ್ ಆಫ್ ಜೋಹೊರ್ ಕಪ್‌ನಲ್ಲಿ ಭಾಗವಹಿಸಲು ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವು ಸೋಮವಾರ ತಡರಾತ್ರಿ ಮಲೇಶ್ಯಕ್ಕೆ ಪ್ರಯಾಣ ಬೆಳೆಸಿದೆ.

ಅಕ್ಟೋಬರ್ 19ರಂದು ಆರಂಭವಾಗಿ, ಅ.26ರಂದು ಮುಕ್ತಾಯವಾಗಲಿರುವ ಹಾಕಿ ಸ್ಪರ್ಧಾವಳಿಯಲ್ಲಿ ಭಾರತದ ಹಾಕಿ ತಂಡವು ಆತಿಥೇಯ ಮಲೇಶ್ಯ, ಜಪಾನ್, ಗ್ರೇಟ್ ಬ್ರಿಟನ್, ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ತಂಡಗಳನ್ನು ಎದುರಿಸಲಿದೆ.

ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಪಿ.ಆರ್. ಶ್ರೀಜೇಶ್‌ಗೆ ಇದು ಮೊದಲ ಪ್ರಮುಖ ಪಂದ್ಯಾವಳಿಯಾಗಿದೆ. ಆಮಿರ್ ಅಲಿ ನಾಯಕ ಹಾಗೂ ರೋಹಿತ್ ಉಪ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಅ.19ರಂದು ಜಪಾನ್ ತಂಡವನ್ನು ಎದುರಿಸುವ ಮೂಲಕ ಭಾರತ ಹಾಕಿ ತಂಡವು ತನ್ನ ಅಭಿಯಾನ ಆರಂಭಿಸಲಿದೆ. ಆ ನಂತರ ಅ.20ರಂದು ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ. ಒಂದು ದಿನದ ವಿಶ್ರಾಂತಿಯ ನಂತರ ಭಾರತ ತಂಡವು ಅ.22ರಂದು ಮಲೇಶ್ಯವನ್ನು ಹಾಗೂ ಅ.23ರಂದು ಆಸ್ಟ್ರೇಲಿಯ ತಂಡವನ್ನು ಮುಖಾಮುಖಿಯಾಗಲಿದೆ.

ಅ.25ರಂದು ನಡೆಯಲಿರುವ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ಸವಾಲು ಎದುರಿಸಲಿದೆ. ಭಾರತ ತಂಡವು ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದು ಅ.26ರಂದು ನಡೆಯುವ ಫೈನಲ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ.

ಪಂದ್ಯಾವಳಿಗಳಿಗಿಂತ ಮೊದಲು ತನ್ನ ಆಶಾವಾದ ವ್ಯಕ್ತಪಡಿಸಿದ ನಾಯಕ ಆಮಿರ್, ತಂಡವು ನೂತನ ಕೋಚ್ ಪಿ.ಆರ್.ಶ್ರೀಜೇಶ್ ಮಾರ್ಗದರ್ಶನದಲ್ಲಿ ಉತ್ತಮ ತರಬೇತಿ ನಡೆಸಿದೆ. ಅವರೊಂದಿಗೆ ನಮ್ಮ ಮೊದಲ ಟೂರ್ನಮೆಂಟ್ ಆಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ಕಳೆದ ಬಾರಿ ಜರ್ಮನಿಗೆ ಸೋತು ನಮ್ಮ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದೆವು. ಆದರೆ ಈ ಬಾರಿ ನಾವು ಉತ್ತಮ ತಯಾರಿ ನಡೆಸಿದ್ದೇವೆ. ಸ್ಪರ್ಧಾವಳಿಯಲ್ಲಿ ಯಾವುದೇ ತಂಡವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News