ಅತ್ಯಂತ ವೇಗದ 100 ಸಿಕ್ಸರ್ ಸಿಡಿಸಿ ರೋಹಿತ್ ದಾಖಲೆ ಮುರಿದ ಸೂರ್ಯಕುಮಾರ್
Photo: twitter \ @surya_14kumar
ಗಯಾನ: ಬಲಗೈ ಬ್ಯಾಟರ್ ಸೂರ್ಯಕುಮಾರ್ ಕುಮಾರ್ ಟ್ವೆಂಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟ್ ನ ಲ್ಲಿ ಭಾರತದ ಪರ ಅತಿ ವೇಗದ 100 ಸಿಕ್ಸರ್ ಸಿಡಿಸಿದ ದಾಖಲೆಗೆ ಭಾಜನರಾಗಿದ್ದಾರೆ.
ವೆಸ್ಟ್ಇಂಡೀಸ್ ವಿರುದ್ಧ ಗಯಾನದಲ್ಲಿ ಮಂಗಳವಾರ ನಡೆದ 3ನೇ ಟ್ವೆಂಟಿ-20 ಪಂದ್ಯದಲ್ಲಿ ಸೂರ್ಯ ಈ ಸ್ಮರಣೀಯ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ.
49ನೇ ಟಿ-20 ಇನಿಂಗ್ಸ್ನಲ್ಲಿ ಸೂರ್ಯಕುಮಾರ್ 100 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಇದೇ ಸಾಧನೆಯನ್ನು ರೋಹಿತ್ ಶರ್ಮಾ 84 ಇನಿಂಗ್ಸ್ಗಳಲ್ಲಿ ಮಾಡಿದ್ದರು.
ಒಟ್ಟಾರೆಯಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ವೇಗದ 100 ಸಿಕ್ಸರ್ ಸಿಡಿಸಿದ ದಾಖಲೆ ವೆಸ್ಟ್ಇಂಡೀಸ್ನವರೇ ಆದ ಎವಿನ್ ಲೂಯಿಸ್(42 ಇನಿಂಗ್ಸ್)ಅವರ ಹೆಸರಲ್ಲಿದೆ.
ಸೂರ್ಯಕುಮಾರ್ ಅವರ ಬಿರುಸಿನ ಅರ್ಧಶತಕದ ಕೊಡುಗೆ(83 ರನ್, 44 ಎಸೆತ) ಬಲದಿಂದ ವಿಂಡೀಸ್ ವಿರುದ್ಧ ನಡೆದ 3ನೇ ಟಿ-20 ಪಂದ್ಯದಲ್ಲಿ 7 ವಿಕೆಟ್ ಅಂತರದ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.
ಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಸಿಕ್ಸರ್ ಗಳಿಸುವ ಮೂಲಕ ಸೂರ್ಯಕುಮಾರ್ ಅವರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಧವನ್ ದಾಖಲೆ ಮುರಿದ ಸೂರ್ಯ: ಭಾರತದ ಪರ ಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಶಿಖರ್ ಧವನ್ ದಾಖಲೆಯನ್ನು ಸೂರ್ಯಕುಮಾರ್ ಮುರಿದಿದ್ದಾರೆ. ಈ ಮೂಲಕ ಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.
ವಿರಾಟ್ ಕೊಹ್ಲಿ(4,008), ರೋಹಿತ್ ಶರ್ಮಾ(3,853), ಕೆ.ಎಲ್.ರಾಹುಲ್(2,265), ಸೂರ್ಯಕುಮಾರ್(1,780), ಶಿಖರ್ ಧವನ್(1,759) ಹಾಗೂ ಮಹೇಂದ್ರ ಸಿಂಗ್ ಧೋನಿ(1,617)ಭಾರತದ ಪರ ಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸರದಾರರಾಗಿದ್ದಾರೆ.
ಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ಗಳು
ರೋಹಿತ್ ಶರ್ಮಾ: 182
ವಿರಾಟ್ ಕೊಹ್ಲಿ: 117
ಸೂರ್ಯಕುಮಾರ್ ಯಾದವ್: 101
ಕೆ.ಎಲ್.ರಾಹುಲ್: 99