ಟಿ20 ಕ್ರಿಕೆಟ್: 100 ವಿಕೆಟ್ ಕಬಳಿಸಿದ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ
ವನಿಂದು ಹಸರಂಗ | Photo: NDTV
ಕೊಲಂಬೊ: ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ ಗಳನ್ನು ಕಬಳಿಸಿದ ಶ್ರೀಲಂಕಾದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ತನ್ನ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ತಲುಪಿ ಎಲಿಟ್ ಲಿಸ್ಟ್ಗೆ ಸೇರ್ಪಡೆಯಾದರು.
ಹಸರಂಗ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ ತಲುಪಿದ ವಿಶ್ವದ 11ನೇ ಆಟಗಾರ ಹಾಗೂ ಲಸಿತ್ ಮಾಲಿಂಗ ನಂತರ ಶ್ರೀಲಂಕಾದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಸದ್ಯ ಶ್ರೀಲಂಕಾ ಟಿ20 ತಂಡದ ನಾಯಕನಾಗಿರುವ ಲೆಗ್ ಸ್ಪಿನ್ನರ್ ಹಸರಂಗ ಡಾಂಬಲ್ಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದ ವೇಳೆ ಈ ಸಾಧನೆ ಮಾಡಿದರು. 2019ರಲ್ಲಿ ಪುರುಷರ ಟಿ20 ಕ್ರಿಕೆಟಿಗೆ ಕಾಲಿಟ್ಟ ನಂತರ ಹಸರಂಗ ಇತರ ಎಲ್ಲ ಬೌಲರ್ಗಳಿಗಿಂತ ಹೆಚ್ಚು ವಿಕೆಟ್ಗಳನ್ನು ಉರುಳಿಸಿದ್ದಾರೆ.
ಮಾಲಿಂಗ ಟಿ-20 ಕ್ರಿಕೆಟ್ನಲ್ಲಿ 100ಕ್ಕೂ ಅಧಿಕ ವಿಕೆಟ್ಗಳನ್ನು ಪಡೆದಿರುವ ಮೊದಲ ಬೌಲರ್ ಆಗಿದ್ದಾರೆ. ಮಾಲಿಂಗ ತನ್ನ 76ನೇ ಟಿ-20 ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಹಸರಂಗ ತನ್ನ 63ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ ವೇಗವಾಗಿ 100 ವಿಕೆಟ್ ಪೂರೈಸಿದ ಎರಡನೇ ಆಟಗಾರನಾಗಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ 2021ರಲ್ಲಿ 53 ಪಂದ್ಯಗಳಲ್ಲಿ 100 ವಿಕೆಟ್ಗಳನ್ನು ಪೂರೈಸಿದ್ದರು.
ಸೋಮವಾರ ಡಾಂಬುಲ್ಲಾದಲ್ಲಿ ನಡೆದಿದ್ದ ಟಿ-20 ಪಂದ್ಯದಲ್ಲಿ ಹಸರಂಗ 4 ಓವರ್ಗಳಲ್ಲಿ 19 ರನ್ಗೆ 2 ವಿಕೆಟ್ಗಳನ್ನು ಪಡೆದಿದ್ದರು. ಇದೀಗ ಅವರು 15.36ರ ಸರಾಸರಿ, 6.78ರ ಸ್ಟ್ರೈಕ್ರೇಟ್ನಲ್ಲಿ 63 ಟಿ-20 ಪಂದ್ಯಗಳಲ್ಲಿ ಒಟ್ಟು 101 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿರುವ ಶ್ರೀಲಂಕಾ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.