ಶ್ರೀಲಂಕಾ ಕ್ರಿಕೆಟ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ | ಟಿ20ಗೆ ಸೂರ್ಯಕುಮಾರ್ ಸಾರಥ್ಯ, ಏಕದಿನ ಸರಣಿಗೆ ರೋಹಿತ್, ವಿರಾಟ್ ಲಭ್ಯ
ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ : ಶ್ರೀಲಂಕಾ ವಿರುದ್ಧ ಜುಲೈ 27ರಿಂದ ಅರಂಭವಾಗಲಿರುವ ಮೂರು ಪಂದ್ಯಗಳ ಸರಣಿಗೆ ಭಾರತದ ಟಿ20 ಕ್ರಿಕೆಟ್ ತಂಡಕ್ಕೆ ಬಿಗ್ ಹಿಟ್ಟಿಂಗ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕನಾಗಿ ಗುರುವಾರ ನೇಮಿಸಲಾಗಿದೆ.
ಸೂರ್ಯಕುಮಾರ್ ಅವರು ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿಯಲ್ಲಿ ಭಾರತ 4-1ರಿಂದ ಗೆದ್ದಾಗ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 1-1ರಿಂದ ಡ್ರಾ ಮಾಡಿಕೊಂಡಾಗ ಭಾರತದ ನಾಯಕತ್ವವಹಿಸಿದ್ದರು.
ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ 50 ಓವರ್‌ಗಳ ಸರಣಿಗೆ ಏಕದಿನ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಲಭ್ಯ ಇರಲಿದ್ದಾರೆ. ದೀರ್ಘ ಸಮಯದಿಂದ ಭಾರತದ ವೇಗದ ಬೌಲಿಂಗ್ ಹೊಣೆ ಹೊತ್ತಿರುವ ಜಸ್‌ಪ್ರಿತ್ ಬುಮ್ರಾಗೆ ಎರಡೂ ತಂಡಗಳಿಂದ ವಿಶ್ರಾಂತಿ ನೀಡಲಾಗಿದೆ.
ಎರಡೂ ಪ್ರಕಾರದ ಪಂದ್ಯಗಳಿಗೆ ಶುಭಮನ್ ಗಿಲ್ ಉಪ ನಾಯಕರನ್ನಾಗಿ ನೇಮಿಸಲಾಗಿದೆ.
ವಿಜಯ್ ಹಝಾರೆ ಟ್ರೋಫಿಯಲ್ಲಿ 7 ಅರ್ಧಶತಕಗಳನ್ನು ಗಳಿಸಿದ್ದ ರಿಯಾನ್ ಪರಾಗ್ ಹಾಗೂ ದಿಲ್ಲಿಯ ವೇಗದ ಬೌಲರ್ ಹರ್ಷಿತ್ ರಾಣಾ ಏಕದಿನ ತಂಡದಲ್ಲಿರುವ ಹೊಸ ಮುಖಗಳಾಗಿದ್ದಾರೆ. ಶ್ರೇಯಸ್ ಅಯ್ಯರ್ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ.
ಅಭಿಷೇಕ್ ಶರ್ಮಾ ಹಾಗೂ ಋತುರಾಜ್ ಗಾಯಕ್ವಾಡ್ ಟಿ20 ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭಾರತದ ಝಿಂಬಾಬ್ವೆ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದ ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಮುಹಮ್ಮದ್ ಸಿರಾಜ್, ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಟಿ20 ತಂಡಕ್ಕೆ ಕರೆ ಪಡೆದಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ತಾನು ಲಭ್ಯವಿರುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಆಯ್ಕೆಗಾರರಿಗೆ ಮೊದಲೇ ಮಾಹಿತಿ ನೀಡಿದ್ದರು. ಹೀಗಾಗಿ ನಿರೀಕ್ಷೆಯಂತೆಯೇ ಪಾಂಡ್ಯ ಏಕದಿನ ತಂಡದಲ್ಲಿಲ್ಲ.
2022ರ ಡಿಸೆಂಬರ್‌ನಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಸಿಕೊಂಡ ನಂತರ ಇದೇ ಮೊದಲ ಬಾರಿ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟಿ20 ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿರುವ ಆಲ್‌ರೌಂಡರ್ ರವೀಂದ್ರ ಜಡೇಜಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಕಳೆದ ವರ್ಷ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದ ಸೂರ್ಯಕುಮಾರ್‌ರನ್ನು ಏಕದಿನ ತಂಡಕ್ಕೆ ಪರಿಗಣಿಸಲಾಗಿಲ್ಲ.
ಕಳೆದ ತಿಂಗಳು ವೆಸ್ಟ್‌ಇಂಡೀಸ್‌ನಲ್ಲಿ ಭಾರತ ತಂಡವು ಟಿ20 ವಿಶ್ವಕಪ್‌ನಲ್ಲಿ ವಿಜಯಶಾಲಿಯಾದ ನಂತರ ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿ ಅಂತ್ಯಗೊಂಡಿತ್ತು. ದ್ರಾವಿಡ್‌ರಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡಿರುವ ಗೌತಮ್ ಗಂಭೀರ್‌ಗೆ ಶ್ರೀಲಂಕಾ ವಿರುದ್ಧ ಸರಣಿಯು ಅವರ ಮೊದಲ ಸವಾಲಾಗಿದೆ.
ಟಿ20 ತಂಡ: ಸೂರ್ಯಕುಮಾರ್ ಯಾದವ್(ನಾಯಕ), ಶುಭಮನ್ ಗಿಲ್(ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್(ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮುಹಮ್ಮದ್ ಸಿರಾಜ್.
ಏಕದಿನ ತಂಡ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್(ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್(ವಿಕೆಟ್‌ಕೀಪರ್), ರಿಷಭ್ ಪಂತ್(ವಿಕೆಟ್‌ಕೀಪರ್),ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ವಾಶಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.