ನಾಳೆ(ಜು. 2)ಯಿಂದ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಆರಂಭ; ಪುಟಿದೇಳುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ
PC ; PTI
ಬರ್ಮಿಂಗ್ಹ್ಯಾಮ್: ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಮಿಂಚಿದ್ದರೂ ಗೆಲುವು ದಾಖಲಿಸುವಲ್ಲಿ ವಿಫಲವಾಗಿದ್ದ ಟೀಮ್ ಇಂಡಿಯಾವು ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ಬುಧವಾರ ಆರಂಭವಾಗಲಿರುವ ನಿರ್ಣಾಯಕ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಜಯಭೇರಿ ಬಾರಿಸಿ ಪುಟಿದೇಳುವ ವಿಶ್ವಾಸದಲ್ಲಿದೆ.
ಲೀಡ್ಸ್ನಲ್ಲಿ ಸೋತ ನಂತರ ಭಾರತದ ಟೀಮ್ ಮ್ಯಾನೇಜ್ಮೆಂಟ್ ಆಯ್ಕೆಗೆ ಸಂಬಂಧಿಸಿದ ನಿರ್ಧಾರದಲ್ಲಿ ಗೊಂದಲವನ್ನು ಎದುರಿಸುತ್ತಿದೆ. ಮತ್ತೊಂದು ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ 20 ವಿಕೆಟ್ ಗಳನ್ನು ಉರುಳಿಸುವುದು ಭಾರತ ತಂಡಕ್ಕೆ ಸವಾಲಾಗಿದೆ.
ಮತ್ತೊಂದೆಡೆ ಇಂಗ್ಲೆಂಡ್ ತಂಡವು ತನ್ನ ಆಡುವ 11ರ ಬಳಗವನ್ನು ಬೇಗನೆ ಪ್ರಕಟಿಸಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿರುವ ತಂಡವನ್ನೇ ಕಣಕ್ಕಿಳಿಸಲಿದೆ.
ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ತಂಡವು ಈ ತನಕ ಆಡಿರುವ 8 ಪಂದ್ಯಗಳ ಪೈಕಿ 7ರಲ್ಲಿ ಸೋತಿದ್ದರೆ, 1ರಲ್ಲಿ ಡ್ರಾ ಸಾಧಿಸಿದೆ. 2022ರಲ್ಲಿ ಕೊನೆಯ ಬಾರಿ ಈ ಮೈದಾನದಲ್ಲಿ ಭಾರತ ತಂಡವು ಆಡಿದ್ದಾಗ ಇಂಗ್ಲೆಂಡ್ ತಂಡವು 378 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ತಂಡ ಚೇಸ್ ಮಾಡಿದ್ದ ಗರಿಷ್ಠ ಮೊತ್ತವಾಗಿತ್ತು. ಈ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಜಾನಿ ಬೈರ್ಸ್ಟೋವ್ ಶತಕಗಳನ್ನು ಗಳಿಸಿದ್ದರು.
2011ರಲ್ಲಿ ಎಜ್ಬಾಸ್ಟನ್ನಲ್ಲಿ ಭಾರತವು ಹೀನಾಯ ಸೋಲನುಭವಿಸಿತ್ತು. ಆಗ ಅದು ಇನಿಂಗ್ಸ್ ಹಾಗೂ 242 ರನ್ ಅಂತರದಿಂದ ಸೋತಿತ್ತು. 2018ರಲ್ಲಿ ಎಜ್ಬಾಸ್ಟನ್ ನಲ್ಲಿ ಭಾರತವು ಗೆಲುವಿನ ಸನಿಹ ತಲುಪಿತ್ತು. 4ನೇ ಇನಿಂಗ್ಸ್ ನಲ್ಲಿ 194 ರನ್ ಗುರಿ ಪಡೆದಿದ್ದ ಭಾರತವು 31 ರನ್ ಅಂತರದಿಂದ ಸೋತಿತ್ತು. ಈ ಬಾರಿ ಎಜ್ಬಾಸ್ಟನ್ನಲ್ಲಿ ಮೊದಲ ಬಾರಿ ಗೆಲುವು ದಾಖಲಿಸಿ ಕಳಪೆ ದಾಖಲೆಯಿಂದ ಹೊರಬರುವ ವಿಶ್ವಾಸದಲ್ಲಿದೆ.
ಕೆಲಸದ ಒತ್ತಡವನ್ನು ನಿಭಾಯಿಸುವ ಕಾರ್ಯತಂತ್ರದ ಭಾಗವಾಗಿ ಜಸ್ಪ್ರಿತ್ ಬುಮ್ರಾ ವಿಶ್ರಾಂತಿ ಪಡೆಯುವ ಸಾಧ್ಯತೆಯಿದ್ದು, ಹೀಗಾಗಿ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಾಗಬಹುದು.
ಮುಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ನಿರೀಕ್ಷೆಯಿದ್ದು, ಆಕಾಶ್ ದೀಪ್ ಹಾಗೂ ಪ್ರಸಿದ್ಧ ಕೃಷ್ಣ ಬೆಂಬಲ ನೀಡಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಯಶಸ್ವಿ ಬೌಲರ್ ಆಗಿದ್ದ ಬುಮ್ರಾ ಅವರ ಅನುಪಸ್ಥಿತಿಯಿಂದಾಗಿ ಈ ಮೂವರು ಬೌಲರ್ಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುವ ಸಾಧ್ಯತೆಯಿದೆ.
ಎಜ್ಬಾಸ್ಟನ್ ಕ್ರೀಡಾಂಗಣದ ಪಿಚ್ ಸ್ಪಿನ್ನರ್ಗಳಿಗೆ ಕೂಡ ನೆರವಾಗುವ ಸಾಧ್ಯತೆಯಿದೆ. ಹೀಗಾಗಿ ಭಾರತ ತಂಡವು ಈ ಬಾರಿ ಇಬ್ಬರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ರವೀಂದ್ರ ಜಡೇಜ ತಂಡದಲ್ಲಿ ಸ್ಥಾನ ಪಡೆಯುವುದು ನಿಶ್ಚಿತವಾಗಿದ್ದು, ವಾಶಿಂಗ್ಟನ್ ಸುಂದರ್ ಬ್ಯಾಟಿಂಗ್ ನಲ್ಲಿ ಹಿಡಿತ ಸಾಧಿಸಲು ನೆರವಾಗಬಲ್ಲರು. ಭಾರತವು ಕುಲದೀಪ್ ಯಾದವ್ ರನ್ನು ಆಡಿಸುವತ್ತಲೂ ದೃಷ್ಟಿ ಹರಿಸಿದೆ.
ಆಲ್ರೌಂಡರ್ ಸ್ಥಾನದಲ್ಲಿ ಹೆಡ್ಡಿಂಗ್ಲೆಯಲ್ಲಿ ಪರದಾಟ ನಡೆಸಿದ್ದ ಶಾರ್ದುಲ್ ಠಾಕೂರ್ ಬದಲಿಗೆ ನಿತೀಶ್ ರೆಡ್ಡಿ ಅವಕಾಶ ಪಡೆಯಬಹುದು. ಕೇವಲ 1 ಪಂದ್ಯ ಆಡಿದ ನಂತರ ಠಾಕೂರ್ ರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದ್ದರೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಸರದಿಯನ್ನು ಬಲಿಷ್ಠಗೊಳಿಸುವುದು ಭಾರತ ತಂಡಕ್ಕೆ ಅನಿವಾರ್ಯವಾಗಿದೆ.
ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಆ ನಂತರ ಶುಭಮನ್ ಗಿಲ್, ರಿಷಭ್ ಪಂತ್ ಆಡಲಿದ್ದಾರೆ. ಲೀಡ್ಸ್ ಟೆಸ್ಟ್ನ ಮೂಲಕ 8 ವರ್ಷಗಳ ನಂತರ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದ ಕರುಣ್ ನಾಯರ್ ಎಜ್ ಬಾಸ್ಟನ್ ನಲ್ಲಿ ಭಾರತ ತಂಡವು ಸಮತೋಲಿತವಾಗಿ ಕಾಣಲು ಆಡುವ 11ರ ಬಳಗದಿಂದ ಹೊರಗುಳಿಯವ ಸಾಧ್ಯತೆಯಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್ ತನ್ನ ಸ್ಥಾನ ಉಳಿಸಿಕೊಳ್ಳಬಹುದು.
ಇಂಗ್ಲೆಂಡ್ ತಂಡವು ತನ್ನ ಬೇಝ್ಬಾಲ್ ತಂತ್ರವನ್ನು ಹೆಚ್ಚಿನ ಲೆಕ್ಕಾಚಾರದೊಂದಿಗೆ ಜಾರಿಗೆ ತರಲು ಮುಂದಾಗಿದ್ದು, ತಂಡದ ವೇಗದ ಬೌಲರ್ಗಳು ಆತ್ಮವಿಶ್ವಾಸದಲ್ಲಿದ್ದಾರೆ.
ಇಂಗ್ಲೆಂಡ್ ನ ಅಗ್ರ ಸರದಿಯಲ್ಲಿ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರಿದ್ದಾರೆ. ಜೆಮೀ ಸ್ಮಿತ್ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಕ್ರಿಸ್ ವೋಕ್ಸ್, ಬ್ರೆಂಡನ್ ಕಾರ್ಸ್ ಹಾಗೂ ಜೋಶ್ ಟಂಗ್ ಅವರಿದ್ದಾರೆ. ಇವರಿಗೆ ಸ್ಪಿನ್ನರ್ ಶುಐಬ್ ಬಶೀರ್ ಸಾಥ್ ನೀಡಲಿದ್ದಾರೆ.
ಭಾರತ ತಂಡವು 20 ವಿಕೆಟ್ಗಳನ್ನು ಪಡೆಯುವ ನಿಟ್ಟಿನಲ್ಲಿ ಆಡುವ 11ರ ಬಳಗದ ಆಯ್ಕೆಯ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
►ತಂಡಗಳು
ಇಂಗ್ಲೆಂಡ್ ತಂಡದ ಆಡುವ 11ರ ಬಳಗ: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೆಂಡನ್ ಕಾರ್ಸ್, ಜೋಶ್ ಟಂಗ್, ಶುಐಬ್ ಬಶೀರ್.
ಭಾರತ ತಂಡದ ಆಡುವ 11ರ ಬಳಗ(ಸಂಭಾವ್ಯ): ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್, ಉಪ ನಾಯಕ), ನಿತೀಶ್ ರೆಡ್ಡಿ, ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್.
*ಪಂದ್ಯ ಆರಂಭದ ಸಮಯ: ಮಧ್ಯಾಹ್ನ 3:30
(ಭಾರತೀಯ ಕಾಲಮಾನ)
► ಪಿಚ್ ರಿಪೋರ್ಟ್
ಐತಿಹಾಸಿಕವಾಗಿ ಎಜ್ಬಾಸ್ಟನ್ ಪಿಚ್ ಪಂದ್ಯದ ಆರಂಭದಲ್ಲಿ ವೇಗಿಗಳ ಸ್ನೇಹಿಯಾಗಿರಲಿದೆ. 2000ರ ನಂತರ ವೇಗದ ಬೌಲರ್ಗಳು ಎಜ್ಬಾಸ್ಟನ್ನಲ್ಲಿ 31ರ ಸರಾಸರಿಯಲ್ಲಿ 490 ವಿಕೆಟ್ಗಳನ್ನು ಪಡೆದಿದ್ದಾರೆ. ವೇಗದ ಬೌಲಿಂಗ್ ಪ್ರಮುಖ ಪಾತ್ರವಹಿಸಲಿದೆ. ಸ್ಪಿನ್ನರ್ಗಳು 34ರ ಸರಾಸರಿಯಲ್ಲಿ 153 ವಿಕೆಟ್ಗಳನ್ನು ಪಡೆದಿದ್ದಾರೆ. ಸರಿಯಾದ ವಾತಾವರಣದಲ್ಲಿ ವೇಗ ಹಾಗೂ ಸ್ಪಿನ್ ಬೌಲಿಂಗ್ಗೆ ಸಹಕರಿಸಲಿದೆ. ಪಿಚ್ ಬಿರುಕು ಬಿಟ್ಟರೆ 3ನೇ ದಿನದಾಟದ ಬಳಿಕ ಪಿಚ್ ಟರ್ನ್ ಆಗಲಿದ್ದು, ಸ್ಪಿನ್ನರ್ಗಳಿಗೆ ನೆರವಾಗಲಿದೆ.
ಎಜ್ಬಾಸ್ಟನ್ ಪಿಚ್
ಆಡಿರುವ ಒಟ್ಟು ಪಂದ್ಯ: 56
ಪ್ರತಿ ಓವರ್ಗೆ ರನ್: 3.03
ಬ್ಯಾಟಿಂಗ್ ಸರಾಸರಿ: 31.75
ಮೊದಲ ಇನಿಂಗ್ಸ್ನಲ್ಲಿ ಸರಾಸರಿ ಸ್ಕೋರ್: 302
2ನೇ ಇನಿಂಗ್ಸ್ನಲ್ಲಿ ಸರಾಸರಿ ಸ್ಕೋರ್: 315
3ನೇ ಇನಿಂಗ್ಸ್ನಲ್ಲಿ ಸರಾಸರಿ ಸ್ಕೋರ್: 243
4ನೇ ಇನಿಂಗ್ಸ್ನಲ್ಲಿ ಸರಾಸರಿ ಸ್ಕೋರ್: 157
ಗರಿಷ್ಠ ಸ್ಕೋರ್: 2011ರಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ತಂಡ 710/7
ಕನಿಷ್ಠ ಸ್ಕೋರ್: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 72 ರನ್(2010)
ಎಜ್ ಬಾಸ್ಟನ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ 29 ಬಾರಿ ಹಾಗೂ ಮೊದಲು ಬೌಲಿಂಗ್ ಮಾಡಿರುವ ತಂಡವು 12 ಬಾರಿ ಜಯ ಸಾಧಿಸಿದೆ.
ಎಜ್ ಬಾಸ್ಟನ್ ನಲ್ಲಿ 1902ರ ನಂತರ ನಡೆದಿರುವ 56 ಪಂದ್ಯಗಳಲ್ಲಿ ಇಂಗ್ಲೆಂಡ್ 30ರಲ್ಲಿ ಜಯ ಸಾಧಿಸಿದೆ.
►ಹವಾಮಾನ ಮುನ್ಸೂಚನೆ
ಹವಾಮಾನ ಮುನ್ಸೂಚನೆಯ ಪ್ರಕಾರ ಟೆಸ್ಟ್ ಪಂದ್ಯದ ಆರಂಭದಲ್ಲಿ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಆರಂಭದಲ್ಲಿ ವೇಗಿಗಳು ಪ್ರಾಬಲ್ಯ ಮೆರೆಯಲಿದ್ದು, ಪಂದ್ಯವು ಕೊನೆಯ ಹಂತಕ್ಕೆ ತಲುಪಿದರೆ ಸ್ಪಿನ್ನರ್ಗಳು ಪಾತ್ರವಹಿಸಲಿದ್ದಾರೆ.