×
Ad

ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿ ಫೈನಲ್‌ನಲ್ಲಿ ಗೆಲುವು ನಮ್ಮದೇ: ಟಾಮ್ ಲ್ಯಾಥಮ್

Update: 2025-03-03 21:55 IST

ಟಾಮ್ ಲ್ಯಾಥಮ್ | PC : NDTV 

ದುಬೈ : ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ಲಾಹೋರ್‌ನಲ್ಲಿ ಬುಧವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಕಳೆದ ತಿಂಗಳು ಲಾಹೋರ್‌ನ ಗದ್ದಾಫಿ ಸ್ಟೇಡಿಯಮ್‌ನಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಹರಿಣ ಪಡೆಗೆ ಸೋಲುಣಿಸಿದ್ದ ಕಿವೀಸ್ ಬಳಗ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ವಿರುದ್ಧದ ಸೋಲು ಮುಂಬರುವ ಸೆಮಿ ಫೈನಲ್ ಪ್ರದರ್ಶನದ ಮೇಲೆ ಪರಿಣಾಮಬೀರದು ಎಂದು ನ್ಯೂಝಿಲ್ಯಾಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಟಾಮ್ ಲ್ಯಾಥಮ್ ಅಭಿಪ್ರಾಯಪಟ್ಟಿದ್ದಾರೆ.

ಲಾಹೋರ್‌ನಲ್ಲಿ ನಡೆದಿದ್ದ ಈ ಹಿಂದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವು 305 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಕೇನ್ ವಿಲಿಯಮ್ಸನ್ 133 ರನ್ ಗಳಿಸಿದ್ದರು. ತ್ರಿಕೋನ ಸರಣಿಯಲ್ಲಿ ಆತಿಥೇಯ ಪಾಕಿಸ್ತಾನ ತಂಡಕ್ಕೂ ಸೋಲಿನ ಬರೆ ಎಳೆದಿತ್ತು.

‘‘ನಾವು ಪಾಕಿಸ್ತಾನದಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಅದೃಷ್ಟ ಪಡೆದಿದ್ದೆವು. ಆ ಸರಣಿಯಲ್ಲಿ ಆಡಿದ ಅನುಭವವನ್ನು ಬಳಸಿಕೊಂಡು ಸೆಮಿ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ನಮಗಿದೆ’’ ಎಂದು ಲ್ಯಾಥಮ್ ಹೇಳಿದ್ದಾರೆ.

ನ್ಯೂಝಿಲ್ಯಾಂಡ್ ತಂಡವು ದುಬೈನಲ್ಲಿ ಭಾರತ ವಿರುದ್ಧ ಪಂದ್ಯವನ್ನು ಸೋಲುವ ಮೊದಲೇ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿತ್ತು. ಸೆಮಿ ಫೈನಲ್ ಪಂದ್ಯ ಆಡಲು ಪಾಕಿಸ್ತಾನಕ್ಕೆ ಮರಳಬೇಕಾಗುತ್ತದೆ ಎಂಬ ಅರಿವು ಹೊಂದಿತ್ತು.

ದಕ್ಷಿಣ ಆಫ್ರಿಕಾ ತಂಡ ‘ಬಿ’ ಗುಂಪಿನಲ್ಲಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಆಸ್ಟ್ರೇಲಿಯ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿತ್ತು. ಇದರಲ್ಲಿ ಒಂದು ಪಂದ್ಯ ಮಳೆಗಾಹುತಿಯಾಗಿತ್ತು.

ಸೆಮಿ ಫೈನಲ್ ಪಯಣದುದ್ದಕ್ಕೂ ನ್ಯೂಝಿಲ್ಯಾಂಡ್ ತಂಡದ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ರವಿವಾರ ದುಬೈನಲ್ಲಿ ಗ್ಲೆನ್ ಫಿಲಿಪ್ಸ್ ಅವರು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದರು.

‘‘ಪಂದ್ಯಾವಳಿಯುದ್ದಕ್ಕೂ ನಮ್ಮ ಆಟಗಾರರು ಹಿಡಿದ ಕೆಲವು ಕ್ಯಾಚ್‌ಗಳನ್ನು ನಾವು ನೋಡಿದ್ದೇವೆ. ಇದು ನಮ್ಮ ಮನೋವೃತ್ತಿಯಾಗಿದೆ’’ ಎಂದು ಲ್ಯಾಥಮ್ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News