×
Ad

ಪ್ಯಾರಿಸ್ ಒಲಿಂಪಿಕ್ಸ್ ಪದಕಗಳಿಗೆ ಐಫೆಲ್ ಟವರ್‌ನ ಸ್ಪರ್ಷ

Update: 2024-02-08 21:37 IST

Photo: news18.com

ಹೊಸದಿಲ್ಲಿ : ಈ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗಳಲ್ಲಿ ವಿಜೇತರಿಗೆ ವಿತರಿಸಲಾಗುವ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಐತಿಹಾಸಿಕ ಐಫೆಲ್ ಟವರ್‌ನ ಸ್ಪರ್ಷವನ್ನು ನೀಡಲಾಗಿದೆ.

ಪ್ಯಾರಿಸ್ ಗೇಮ್ಸ್‌ಗಳಲ್ಲಿ ವಿತರಿಸಲಾಗುವ ಎಲ್ಲಾ 5,084 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ಮಧ್ಯ ಭಾಗದಲ್ಲಿ ಮೂಲ ಐಫೆಲ್ ಟವರ್‌ನಿಂದ ಪಡೆಯಲಾಗಿರುವ ಷಟ್ಕೋನಾಕೃತಿಯ ಕಬ್ಬಿಣದ ತುಣುಕನ್ನು ಅಳವಡಿಸಲಾಗುವುದು ಎಂದು ಸಂಘಟಕರು ಗುರುವಾರ ಮಾಹಿತಿ ನೀಡಿದ್ದಾರೆ.

ಈ ಷಟ್ಕೋನಾಕೃತಿಯ ಕಬ್ಬಿಣದ ತುಣುಕುಗಳನ್ನು ಅಮೂಲ್ಯ ರತ್ನದಂತೆ ಪದಕಗಳಿಗೆ ಅಳವಡಿಸಲಾಗುವುದು. ಈ ಪದಕಗಳ ವಿನ್ಯಾಸವನ್ನು ಪ್ರಸಿದ್ಧ ಫ್ರೆಂಚ್ ಆಭರಣ ಮಳಿಗೆ ‘ಶಾಮೆಟ್’ ನಡೆಸುತ್ತದೆ.

‘‘ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗಳಲ್ಲಿ ಪದಕಗಳನ್ನು ಗೆಲ್ಲುವವರಿಗೆ 1889ರ ಐಫೆಲ್ ಟವರ್‌ನ ಒಂದು ತುಣುಕನ್ನು ನೀಡಲು ನಾವು ಬಯಿಸಿದ್ದೇವೆ’’ ಎಂದು ಸ್ಥಳೀಯ ಸಂಘಟನಾ ಸಮಿತಿಯ ಮುಖ್ಯಸ್ಥ ಟೋನಿ ಎಸ್ಟಾಂಗ್ವೆಟ್ ತಿಳಿಸಿದರು.

‘‘ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ಅತ್ಯಂತ ಬೆಲೆಬಾಳುವ ಲೋಹಗಳೊಂದಿಗೆ ನಮ್ಮ ದೇಶದ ಅತ್ಯಂತ ಅಮೂಲ್ಯ ಲೋಹವನ್ನು ಸಂಯೋಜಿಸುತ್ತೇವೆ. ಅದುವೇ ಐಫೆಲ್ ಟವರ್’’ ಎಂದು ಅವರು ನುಡಿದರು.

ಐಫೆಲ್ ಟವರ್‌ನ ಕಬ್ಬಿಣದ ತುಂಡುಗಳನ್ನು ಟವರ್‌ನ ನಿರ್ವಹಣೆ ಮಾಡುವ ಕಂಪೆನಿಯ ಸಂಗ್ರಹಾಗಾರದಿಂದ ಪಡೆಯಲಾಗುತ್ತದೆ. ಈ ಕಂಪೆನಿಯು ನಿರ್ವಹಣೆಯ ವೇಳೆ ಟವರ್‌ನಿಂದ ಕೆತ್ತಿ ತೆಗೆಯುವ ಕಬ್ಬಿಣದ ತುಂಡುಗಳು ಈ ಸಂಗ್ರಹಾಗಾರದಲ್ಲಿ ಲಭ್ಯವಿವೆ.

‘‘ಐಫೆಲ್ ಟವರ್‌ನ ನಿರ್ವಹಣೆ ಮಾಡುವಾಗ, ಮೂಲ ಸ್ಥಾವರದ ಕೆಲವು ಭಾಗಗಳನ್ನು ಕತ್ತರಿಸಿ ತೆಗೆಯಬೇಕಾಗುತ್ತದೆ. ಹಲವು ವರ್ಷಗಳಿಂದ ಹಾಗೆ ಕತ್ತರಿಸಿದ ಕಬ್ಬಿಣದ ತುಂಡುಗಳನ್ನು ಉಗ್ರಾಣದಲ್ಲಿ ಸಂಗ್ರಹಿಸಿಡಲಾಗಿದೆ’’ ಎಂದು ಒಲಿಂಪಿಕ್ಸ್ ಸಮಾರಂಭಗಳ ನಿರ್ದೇಶಕ ತಿಯರಿ ರೆಬೋಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News