×
Ad

ಯುಎಸ್ ಓಪನ್ ಟೆನಿಸ್ ಪಂದ್ಯಾವಳಿ | ಅಲ್ಕರಾಜ್, ಸಬಲೆಂಕ 3ನೇ ಸುತ್ತಿಗೆ

Update: 2025-08-28 20:38 IST

ಕಾರ್ಲೋಸ್ ಅಲ್ಕರಾಝ್ |PC: X @carlosalcaraz

ನ್ಯೂಯಾರ್ಕ್, ಆ. 28: ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಬುಧವಾರ ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಆರ್ಥರ್ ಆ್ಯಶ್ ಸ್ಟೇಡಿಯಮ್‌ನಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಇಟಲಿಯ ಮಟಿಯ ಬೆಲುಕ್ಸಿಯನ್ನು 6-1, 6-0 6-3 ಸೆಟ್‌ಗಳಿಂದ ಸೋಲಿಸಿದರು.

2022ರ ಚಾಂಪಿಯನ್ ಹಾಗೂ ಎರಡನೇ ಸುತ್ತಿನ ಅಲ್ಕರಾಝ್, ಇಟಲಿಯ ಎದುರಾಳಿಯ ವಿರುದ್ಧ ಪ್ರಭಾವಶಾಲಿ ನಿರ್ವಹಣೆ ತೋರಿದರು.

ಮೂರನೇ ಸುತ್ತಿನಲ್ಲಿ ಅವರು ಇಟಲಿಯ ಲೂಸಿಯಾನೊ ಡರ್ಡೆರಿಯನ್ನು ಎದುರಿಸಲಿದ್ದಾರೆ.

► ಹಾಲಿ ಚಾಂಪಿಯನ್ ಸಬಲೆಂಕ 3ನೇ ಸುತ್ತಿಗೆ

’ಹಾಲಿ ಚಾಂಪಿಯನ್ ಬೆಲಾರುಸ್‌ ನ ಅರೈನಾ ಸಬಲೆಂಕ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ರಶ್ಯದ ಪೊಲಿನಾ ಕುದೆರ್‌ ಮೆಟೋವರನ್ನು 7-6(4), 6-2 ಸೆಟ್‌ ಗಳಿಂದ ಮಣಿಸಿದರು.

ಈ ಹಿಂದೆ ಸಬಲೆಂಕ ಮತ್ತು ಶ್ರೇಯಾಂಕರಹಿತ ರಶ್ಯನ್ ಆಟಗಾರ್ತಿ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದಾರೆ. ಜನವರಿಯಲ್ಲಿ ನಡೆದ ಬ್ರಿಸ್ಬೇನ್ ಓಪನ್ ಫೈನಲ್‌ ನಲ್ಲಿ ಅವರು ಪೊಲಿನಾರನ್ನು ಸೋಲಿಸಿದ್ದರು. ಬ್ರಿಸ್ಬೇನ್‌ನಲ್ಲೂ ಅವರು ಆರಂಭಿಕ ಸೆಟ್ಟನ್ನು ಕಳೆದುಕೊಂಡು ಅಂತಿಮವಾಗಿ ಜಯ ಗಳಿಸಿದ್ದರು. ನ್ಯೂಯಾರ್ಕ್‌ ನಲ್ಲೂ ಅವರು ಆರಂಭಿಕ ಸೆಟ್‌ನ ಆರಂಭದಲ್ಲಿ ಅವರು ಹಿನ್ನಡೆ ಅನುಭವಿಸಿದರು.

ಮೂರನೇ ಸುತ್ತಿನಲ್ಲಿ, ಸಬಲೆಂಕ 2021ರ ರನ್ನರ್ಸ್-ಅಪ್ ಕೆನಡದ ಲೈಲಾ ಫೆರ್ನಾಂಡಿಸ್‌ರನ್ನು ಎದುರಿಸಲಿದ್ದಾರೆ.

► ಮೆಡ್ವೆಡೆವ್‌ ಗೆ 37.22 ಲಕ್ಷ ರೂ. ದಂಡ

ಯುಎಸ್ ಓಪನ್ ಪಂದ್ಯಾವಳಿಯಲ್ಲಿ, ಈ ವಾರದ ಆರಂಭದಲ್ಲಿ ಸೋಲನುಭವಿಸಿದ ಬಳಿಕ ತೋರಿದ ದುಂಡಾವರ್ತನೆಗಾಗಿ ಮಾಜಿ ಚಾಂಪಿಯನ್ ರಶ್ಯದ ಡನೀಲ್ ಮೆಡ್ವೆಡೆವ್‌ರಿಗೆ ಸಂಘಟಕರು ಬುಧವಾರ ಒಟ್ಟು 42,500 ಡಾಲರ್ (ಸುಮಾರು 37.22 ಲಕ್ಷ ರೂಪಾಯಿ) ದಂಡ ವಿಧಿಸಿದ್ದಾರೆ.

ರವಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮೆಡ್ವೆಡೆವ್ 3-6, 5-7, 7(5)-6, 6-0, 4-6 ಸೆಟ್‌ಗಳಿಂದ ಸೋತಿದ್ದಾರೆ. ಆ ಪಂದ್ಯದಲ್ಲಿ, 2021ರ ಚಾಂಪಿಯನ್ ಅಂಪೈರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಮತ್ತು ಅಭಿಮಾನಿಗಳನ್ನು ಪ್ರಚೋದಿಸಿದರು. ಹೀಗೆ ಪ್ರಚೋದಿಸಲ್ಪಟ್ಟ ಅಭಿಮಾನಿಗಳು ಅವರ ಎದುರಾಳಿ ಸರ್ವ್ ಮಾಡದಂತೆ ತಡೆದರು.

13ನೇ ಶ್ರೇಯಾಂಕದ ಮೆಡ್ವೆಡೆವ್ ಮ್ಯಾಚ್ ಪಾಯಿಂಟ್ ಎದುರಿಸುತ್ತಿದ್ದರು. ಆಗ ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಮ್‌ಗೆ ಛಾಯಾಗ್ರಾಹಕರೊಬ್ಬರು ಪ್ರವೇಶಿಸಿದರು. ಆಗ ಮೆಡ್ವೆಡೆವ್‌ರ ಎದುರಾಳಿ ಫ್ರಾನ್ಸ್‌ ನ ಬೆಂಜಮಿನ್ ಬೊಂಝಿಯ ಮೊದಲ ಸರ್ವ್‌ನ ಗುರಿ ತಪ್ಪಿತು.

ಆಗ ಅಂಪೈರ್, ಛಾಯಾಗ್ರಾಹಕರ ಅನಧಿಕೃತ ಪ್ರವೇಶಕ್ಕಾಗಿ ಬೊಂಝಿಗೆ ಇನ್ನೊಂದು ಮೊದಲ ಸರ್ವ್ ಹಾಕಲು ಅವಕಾಶ ನೀಡಿದರು. ಇದು ಮೆಡ್ವೆಡೆವ್‌ರನ್ನು ಕೆರಳಿಸಿತು.

ಪಂದ್ಯ ಮುಕ್ತಾಯಗೊಂಡ ಬಳಿಕ, ಮೆಡ್ವೆಡೆವ್ ತನ್ನ ರ್ಯಾಕೆಟನ್ನು ನೆಲಕ್ಕೆ ಅಪ್ಪಿಳಿಸಿದರು.

ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಆಡಿರುವುದಕ್ಕಾಗಿ ಮೆಡ್ವೆಡೆವ್‌ ಗೆ 1,10,000 ಡಾಲರ್ (ಸುಮಾರು 96.33 ಲಕ್ಷ ರೂಪಾಯಿ) ಪಂದ್ಯ ಶುಲ್ಕ ಸಿಕ್ಕಿದೆ. ಈ ಪೈಕಿ ಅವರು ಈಗ 30,000 ಡಾಲರ್ (ಸುಮಾರು 26.27 ಲಕ್ಷ ರೂಪಾಯಿ) ಮೊತ್ತವನ್ನು ಕ್ರೀಡಾಪಟುಗಳಿಗೆ ಹೊಂದದ ವರ್ತನೆಗಾಗಿ ಮತ್ತು 12,500 ಡಾಲರ್ (ಸುಮಾರು 10.94 ಲಕ್ಷ ರೂ.) ಮೊತ್ತವನ್ನು ತನ್ನ ರ್ಯಾಕೆಟ್ ಮೇಲೆ ದಾಂಧಲೆ ನಡೆಸಿರುವುದಕ್ಕಾಗಿ ದಂಡ ಪಾವತಿಸಬೇಕಾಗಿದೆ ಎಂದು ಯುಎಸ್ ಓಪನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News