ಯು.ಎಸ್. ಓಪನ್: ವಿಶ್ವದ ನಂ.1 ಆಟಗಾರ ಸಿನ್ನರ್ ಮೂರನೇ ಸುತ್ತಿಗೆ, ಅಲ್ಕರಾಝ್‌ಗೆ ಆಘಾತಕಾರಿ ಸೋಲು
ಅಲ್ಕರಾಝ್ | PC : PTI
ನ್ಯೂಯಾರ್ಕ್: ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು. ಆದರೆ, ಸ್ಪೇನ್‌ನ ಸೂಪರ್‌ಸ್ಟಾರ್ ಕಾರ್ಲೊಸ್ ಅಲ್ಕರಾಝ್ ಡಚ್‌ನ ವಿಶ್ವದ ನಂ.74ನೇ ಆಟಗಾರ ಬೋಟಿಕ್ ವಿರುದ್ಧ ಆಘಾತಕಾರಿ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದರು.
ಒಂದು ಗಂಟೆ, 39 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸಿನ್ನರ್ ಅವರು ಅಲೆಕ್ಸ್ ಮೈಕಲ್‌ಸನ್‌ರನ್ನು 6-4, 6-0, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಇಟಲಿಯ ಆಟಗಾರ ಈ ಋತುವಿನಲ್ಲಿ 50ನೇ ಗೆಲುವು ದಾಖಲಿಸಿದರು. ಸಿನ್ನರ್ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯದ ಕ್ರಿಸ್ಟೋಫರ್ ಕಾನ್ನೆಲ್‌ರನ್ನು ಎದುರಿಸಲಿದ್ದಾರೆ.
ಸಿನ್ನರ್ ಈ ತಿಂಗಳಲ್ಲಿ ಎರಡನೇ ಬಾರಿ ಮೈಕಲ್‌ಸನ್‌ರನ್ನು ಸೋಲಿಸಿದರು. ಸಿನ್ಸಿನಾಟಿ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಮೈಕಲ್‌ಸನ್‌ಗೆ ಸೋಲಿನ ಕಹಿ ಉಣಿಸಿದ್ದರು.
ಇದೇ ವೇಳೆ ಕೇವಲ 65 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಇಗಾ ಸ್ವಿಯಾಟೆಕ್ ಜಪಾನ್‌ನ ಕ್ವಾಲಿಫೈಯರ್ ಎನಾ ಶಿಬಾಹರಾರನ್ನು 6-0, 6-1 ನೇರ ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೇರಿದರು.
ಇಟಲಿಯ ಆಟಗಾರ್ತಿ ಜಾಸ್ಮಿನ್ ಪಯೋಲಿನಿ ಯು.ಎಸ್. ಓಪನ್‌ನಲ್ಲಿ ಮೊದಲ ಬಾರಿ ಎರಡನೇ ಸುತ್ತು ತಲುಪಿದ್ದಾರೆ. ಪಯೋಲಿನಿ ಎದುರಾಳಿ ಕರೊಲಿನಾ ಪ್ಲಿಸ್ಕೋವಾ ಬಲಗಾಲಿನ ಗಾಯದಿಂದಾಗಿ ಪಂದ್ಯದಿಂದ ಹಿಂದೆ ಸರಿದರು. ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ್ದ 5ನೇ ಶ್ರೇಯಾಂಕಿತೆ ಪಯೋಲಿನಿ ಮುಂದಿನ ಸುತ್ತಿನಲ್ಲಿ 30ನೇ ಶ್ರೇಯಾಂಕದ ಯೂಲಿಯಾ ಪುಟಿಂಟ್‌ಸೇವಾರನ್ನು ಎದುರಿಸಲಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತ ಅಲ್ಕರಾಝ್‌ಗೆ ಸೋಲು:
ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ವಿಶ್ವದ ಮೂರನೇ ರ್ಯಾಂಕಿನ ಆಟಗಾರ ಕಾರ್ಲೊಸ್ ಅಲ್ಕರಾಝ್ ಗುರುವಾರ ನಡೆದ ಯು.ಎಸ್. ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಡಚ್ ಆಟಗಾರ ಬೊಟಿಕ್ ವಿರುದ್ಧ 1-6, 5-7, 4-6 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು.
ಈ ಸೋಲಿನೊಂದಿಗೆ ನವಯುಗದಲ್ಲಿ ಒಂದೇ ಋತುವಿನಲ್ಲಿ ಫ್ರೆಂಚ್ ಓಪನ್, ವಿಂಬಲ್ಡನ್ ಹಾಗೂ ಯು.ಎಸ್. ಓಪನ್ ಪ್ರಶಸ್ತಿ ಜಯಿಸಿದ ಮೂರನೇ ಆಟಗಾರನಾಗುವ ಅವಕಾಶದಿಂದ 2022ರ ಚಾಂಪಿಯನ್ ಅಲ್ಕರಾಝ್ ವಂಚಿತರಾದರು.
ಅಲ್ಕರಾಝ್ ಈ ಹಿಂದೆ ಮೂರು ಬಾರಿ ಯು.ಎಸ್. ಓಪನ್‌ನಲ್ಲಿ ಕನಿಷ್ಠ ಕ್ವಾರ್ಟರ್ ಫೈನಲ್ ತನಕ ತಲುಪಿದ್ದರು. 2021ರಲ್ಲಿ ವಿಂಬಲ್ಡನ್‌ನಲ್ಲಿ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ ನಂತರ ಅಲ್ಕರಾಝ್ ಇದೀಗ ಎರಡನೇ ಬಾರಿ ಟೂರ್ನಿಯಿಂದ ಬೇಗನೆ ಹೊರ ನಡೆದಿದ್ದಾರೆ.
ಅಲ್ಕರಾಝ್ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಕ್ವಾಲಿಫೈಯರ್ ಲಿ ಟು ಅವರನ್ನು ಸೋಲಿಸಲು 4 ಸೆಟ್‌ಗಳ ಪಂದ್ಯ ಆಡಬೇಕಾಯಿತು.
ಬೊಟಿಕ್ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅಗ್ರ-3 ಆಟಗಾರನನ್ನು ಮಣಿಸಿದ ಡಚ್‌ನ ಮೊದಲ ಆಟಗಾರ ಎನಿಸಿಕೊಂಡರು. 1996ರಲ್ಲಿ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ರಿಚರ್ಡ್ ಕ್ರಾಜಿಸೆಕ್ ಅವರು ವಿಶ್ವದ ನಂ.1 ಪೀಟ್ ಸಾಂಪ್ರಾಸ್‌ರನ್ನು ಸೋಲಿಸಿದ್ದರು.