ಚೆಸ್ ವಿಶ್ವಕಪ್: ಮಾಜಿ ವಿಶ್ವ ಚಾಂಪಿಯನ್ ಗೆ ಸೋಲುಣಿಸಿ 3ನೇ ಸುತ್ತಿಗೇರಿದ ವಂತಿಕಾ ಅಗರ್ವಾಲ್
ವಂತಿಕಾ ಅಗರ್ವಾಲ್ | PC : @ChessbaseIndia
ಹೊಸದಿಲ್ಲಿ: ಮಾಜಿ ವಿಶ್ವ ಚಾಂಪಿಯನ್ ಅನ್ನಾ ಉಶೆನಿನಾ ಅವರನ್ನು ಟೈ-ಬ್ರೇಕರ್‌ನಲ್ಲಿ ರೋಚಕವಾಗಿ ಮಣಿಸಿದ 23ರ ವಯಸ್ಸಿನ ಭಾರತೀಯ ಇಂಟರ್‌ನ್ಯಾಶನಲ್ ಮಾಸ್ಟರ್(ಐಎಂ) ವಂತಿಕಾ ಅಗರ್ವಾಲ್ ಜಾರ್ಜಿಯಾದ ಬಟುಮಿಯಲ್ಲಿ ನಡೆದ ಫಿಡೆ ಮಹಿಳೆಯರ ವಿಶ್ವಕಪ್-2025ರಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಶುಕ್ರವಾರ ಟೈ-ಬ್ರೇಕರ್‌ನಲ್ಲಿ ಅಂತ್ಯಗೊಂಡ ಪಂದ್ಯದಲ್ಲಿ ವಂತಿಕಾ ಅವರು ಅನ್ನಾ ಉಶೆನಿನಾರನ್ನು 4.5-3.5 ಅಂಕದ ಅಂತರದಿಂದ ಮಣಿಸಿದರು.
ವಂತಿಕಾ ಹಾಗೂ ಉಶೆನಿನಾ ತಲಾ ಒಂದು ಕ್ಲಾಸಿಕಲ್ ಗೇಮ್ ಜಯಿಸಿದ ನಂತರ ಈ ಇಬ್ಬರ ನಡುವಿನ 2ನೇ ಸುತ್ತಿನ ಪಂದ್ಯವು ಟೈ-ಬ್ರೇಕರ್‌ಗೆ ವಿಸ್ತರಣೆಯಾಯಿತು. ವಂತಿಕಾ ಮೊದಲ ರ‍್ಯಾಪಿಡ್ ಟೈ-ಬ್ರೇಕರ್‌ಅನ್ನು ಜಯಿಸಿದರೆ, ಆದರೆ, 2ನೇ ಟೈ-ಬ್ರೇಕರ್ ಅನ್ನು ಸೋತರು. ಅಂತಿಮವಾಗಿ ವಂತಿಕಾ ಅವರು ಮೊದಲ ಗೇಮ್ ನಲ್ಲಿ ಗೆಲುವು ಹಾಗೂ 2ನೇ ಗೇಮ್ ನಲ್ಲಿ ಡ್ರಾ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದರು.
ವಂತಿಕಾ 3ನೇ ಸುತ್ತು ತಲುಪಿದ ಹಿನ್ನೆಲೆಯಲ್ಲಿ 6,750 ಯು.ಎಸ್. ಡಾಲರ್(ಸುಮಾರು 5.8 ಲಕ್ಷ ರೂ.)ಬಹುಮಾನ ಮೊತ್ತ ಗಳಿಸಿದ್ದಾರೆ. 3ನೇ ಸುತ್ತಿನಲ್ಲಿ ಮಾಜಿ ವಿಶ್ವ ರ‍್ಯಾಪಿಡ್ ಹಾಗೂ 3 ಬಾರಿಯ ವಿಶ್ವ ಬ್ಲಿಝ್ ಮಹಿಳೆಯರ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ಕಟೆರಿನ ಲಾಗ್ನೊರನ್ನು ಎದುರಿಸಲಿದ್ದಾರೆ.
2ನೇ ಸುತ್ತಿನಲ್ಲಿ ಸ್ವಿಸ್ ನ ಮಾಜಿ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟೆನಿಕ್‌ಗೆ ಶರಣಾದ ಇಂಟರ್ ನ್ಯಾಶನಲ್ ಮಾಸ್ಟರ್ ಪದ್ಮಿನಿ ರಾವತ್ ಟೂರ್ನಿಯಿಂದ ನಿರ್ಗಮಿಸಿದರು.
ಇಂಟರ್‌ನ್ಯಾಶನಲ್ ಮಾಸ್ಟರ್ ಪ್ರಿಯಾಂಕಾ ಕೆ. ಕೂಡ ಪೋಲ್ಯಾಂಡ್ ನ ಕ್ಲೌಡಿಯಾ ಕುಲೋನ್ ಎದುರು ಎರಡೂ ರ‍್ಯಾಪಿಡ್ ಟೈ-ಬ್ರೇಕ್ ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರ ನಡೆದರು.
ಭಾರತದ ಇತರ ನಾಲ್ವರು ಚೆಸ್ ತಾರೆಯರು ಈಗಾಗಲೇ ಟೂರ್ನಿಯ 3ನೇ ಸುತ್ತಿಗೆ ತಲುಪಿದ್ದಾರೆ. ಕೊನೆರು ಹಂಪಿ ಪೋಲ್ಯಾಂಡ್‌ನ ಕ್ಲೌಡಿಯಾ ಕುಲೋನ್‌ರನ್ನು, ಹರಿಕಾ ಅವರು ಗ್ರೀಸ್ ನ ಸ್ಟಾವ್ರೌಲಾ ಸೋಲಾಕಿಡೌ ಅವರನ್ನು ಎದುರಿಸಲಿದ್ದಾರೆ. ಆರ್. ವೈಶಾಲಿ ಅವರು ಅಮೆರಿಕದ ಕಾರಿಸಾ ಯಿಪ್‌ರನ್ನು, ದಿವ್ಯಾ ದೇಶ್‌ಮುಖ್ ಅವರು ಸರ್ಬಿಯದ ಟೆಯೊಡೊರಾ ವಿರುದ್ಧ 3ನೇ ಸುತ್ತಿನ ಪಂದ್ಯದಲ್ಲಿ ಸೆಣಸಾಡಲಿದ್ದಾರೆ.