×
Ad

ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯ: ವಿರಾಟ್ ಕೊಹ್ಲಿ ಸತತ ಎರಡನೆ ಶತಕ; ಬೃಹತ್ ಮೊತ್ತದತ್ತ ಭಾರತ

ಋತುರಾಜ್ ಗಾಯಕ್ವಾಡ್‌ರಿಂದಲೂ ಆಕರ್ಷಕ ಶತಕ

Update: 2025-12-03 16:57 IST

Photo credit: PTI

ರಾಯ್ಪುರ್: ಇಲ್ಲಿನ ಶಹೀದ್ ವೀರ್ ನಾರಾಯಣ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೆ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸತತ ಎರಡನೆ ಶತಕ (102) ಸಿಡಿಸುವ ಮೂಲಕ, ಭಾರತ ತಂಡವನ್ನು ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ. ಅವರಿಗೆ ಉತ್ತಮ ಸಾಥ್ ನೀಡಿದ ಮಧ್ಯಮ ಕ್ರಮಾಂಕದ ಆಟಗಾರ ಋತುರಾಜ್ ಗಾಯಕ್ವಾಡ್, ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 85 ಬಾಲ್‌ಗಳಲ್ಲಿ 12 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಆಕರ್ಷಕ 105 ರನ್ ಗಳಿಸಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ (22) ಹಾಗೂ ರೋಹಿತ್ ಶರ್ಮ (14) ಜೋಡಿ 40 ರನ್‌ಗಳ ಬಿರುಸಿನ ಆರಂಭವನ್ನೇ ನೀಡಿತು. ಆದರೆ ಕೇವಲ 22 ರನ್‌ಗಳ ಅಂತರದಲ್ಲಿ ಈ ಇಬ್ಬರೂ ಬ್ಯಾಟರ್‌ಗಳು ಪೆವಿಲಿಯನ್‌ಗೆ ಮರಳಿದರು. ಮೊದಲಿಗೆ ನಾಂಡ್ರೆ ಬರ್ಗರ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್‌ಗೆ ಕ್ಯಾಚಿತ್ತು ರೋಹಿತ್ ಶರ್ಮ ನಿರ್ಗಮಿಸಿದರು‌. ಆಗ ತಂಡದ ಮೊತ್ತ 40 ರನ್ ಆಗಿತ್ತು. ಯಶಸ್ವಿ ಜೈಸ್ವಾಲ್ ಕೂಡಾ ತಂಡದ ಮೊತ್ತ 62 ರನ್ ಆಗಿದ್ದಾಗ ಮ್ಯಾಕ್ರೊ ಜಾನ್ಸನ್ ಬೌಲಿಂಗ್‌ನಲ್ಲಿ ಕಾರ್ಬಿನ್ ಬೋಷ್‌ಗೆ ಕ್ಯಾಚಿತ್ತು ಔಟಾದರು.

ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಜೋಡಿ, ಮೂರನೆಯ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 195 ರನ್ ಕಲೆ ಹಾಕಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಋತುರಾಜ್ ಗಾಯಕ್ವಾಡ್, ತಂಡದ ಮೊತ್ತ 257 ರನ್ ಆಗಿದ್ದಾಗ ಮ್ಯಾಕ್ರೊ ಜಾನ್ಸೆನ್ ಬೌಲಿಂಗ್‌ನಲ್ಲಿ ಟೋನಿ ಡಿ ಝಾರ್ಬಿಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು. ಈ ವೇಳೆ ಶತಕದ ಗಡಿಯಲ್ಲಿದ್ದ ವಿರಾಟ್ ಕೊಹ್ಲಿ ಕೂಡಾ ತಮ್ಮ ಶತಕ ಪೂರೈಸುತ್ತಿದ್ದಂತೆಯೇ ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲದೆ ಮ್ಯಾಕ್ರೊ ಜಾನ್ಸನ್ ಬೌಲಿಂಗ್‌ನಲ್ಲಿ ಏಡನ್ ಮರ್ಕರಮ್‌ಗೆ ಕ್ಯಾಚಿತ್ತು ಔಟಾದರು. ಅವರ ನಂತರ ಕ್ರೀಸಿಗೆ ಬಂದ ವಾಷಿಂಗ್ಟನ್ ಸುಂದರ್ ಕೂಡಾ ಹೆಚ್ಚು ಹೊತ್ತು ನಿಲ್ಲದೆ ಕೇವಲ ಒಂದು ರನ್ ಗಳಿಸಿ ರನೌಟಾದರು.

ಇತ್ತೀಚಿನ ವರದಿಗಳ ಪ್ರಕಾರ ಭಾರತ ತಂಡದ ಮೊತ್ತ 44 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 309 ಆಗಿದ್ದು, ಕೆ.ಎಲ್.ರಾಹುಲ್ (ಅಜೇಯ 36) ಹಾಗೂ ರವೀಂದ್ರ ಜಡೇಜಾ (ಅಜೇಯ 8) ಕ್ರೀಸಿನಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News