ವೇಟ್ಲಿಫ್ಟಿಂಗ್ ಸ್ಪರ್ಧೆ: ಪದಕ ವಂಚಿತ ಮೀರಾಬಾಯಿ ಚಾನುಗೆ 4ನೇ ಸ್ಥಾನ
ಮೀರಾಬಾಯಿ ಚಾನು | PC : olympics.com
ಪ್ಯಾರಿಸ್ : ಸತತ ಎರಡನೇ ಒಲಿಂಪಿಕ್ಸ್ ಪದಕ ಗೆಲ್ಲುವ ಮೀರಾಬಾಯಿ ಚಾನು ಅವರ ಕನಸು ಕೈಗೂಡಲಿಲ್ಲ. ಟೋಕಿಯೊ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಚಾನು ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಡೆದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 199 ಕೆಜಿ ತೂಕ ಎತ್ತಿ ಹಿಡಿದು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಚಾನು ಅವರು ಒಟ್ಟು 200 ಕೆಜಿಗೂ ಅಧಿಕ ಭಾರ ಎತ್ತುವಲ್ಲಿ ಸಫಲರಾಗಿದ್ದರೆ ಪದಕ ಖಚಿತಪಡಿಸಬಹುದಿತ್ತು. ಏಶ್ಯನ್ ಗೇಮ್ಸ್ ವೇಳೆ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದಾಗಿ ಚಾನು 4 ತಿಂಗಳು ಸಕ್ರಿಯ ಕ್ರೀಡೆಯಿಂದ ದೂರ ಉಳಿದಿದ್ದರು. ಒಲಿಂಪಿಕ್ಸ್ಗೆ ಉತ್ತಮ ತಯಾರಿ ನಡೆಸಿದ್ದ ಚಾನು ಅವರು 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರು.
ಮೀರಾಬಾಯಿ ತನ್ನ ಮೂರನೇ ಪ್ರಯತ್ನದಲ್ಲಿ ಸ್ನ್ಯಾಚ್ನಲ್ಲಿ 88 ಕೆಜಿ ಎತ್ತಿ ತನ್ನ ಶ್ರೇಷ್ಠ ಪ್ರದರ್ಶನವನ್ನು ಸರಿಗಟ್ಟಿದರು. ತನ್ನ 5ನೇ ಪ್ರಯತ್ನದಲ್ಲಿ ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 111 ಕೆಜಿ ಎತ್ತಿದರು. ಪದಕವನ್ನು ಖಚಿತಪಡಿಸಲು 114 ಕೆಜಿ ಎತ್ತುವ ಚಾನು ಅವರ ಪ್ರಯತ್ನ ಯಶಸ್ಸಾಗಲಿಲ್ಲ.
ಎರಡು ಬಾರಿಯ ಯುರೋಪಿಯನ್ ಚಾಂಪಿಯನ್ ಮಿಹೇಲಾ ಕ್ಯಾಂಬೆ ಅವರನ್ನು ಹಿಮ್ಮೆಟ್ಟಿಸಿದ ಚೀನಾದ ಹೊವ್ ಝಿಹುಯ್ ಒಲಿಂಪಿಕ್ಸ್ ಕ್ಲೀನ್ ಆ್ಯಂಡ್ ಜರ್ಕ್ ದಾಖಲೆ 117 ಕೆಜಿ ಸಹಿತ ಒಟ್ಟು 206 ಕೆಜಿ ಎತ್ತಿ ಹಿಡಿದು ತನ್ನ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮಿಹೇಲಾ ಒಟ್ಟು 205 ಕೆಜಿ ಎತ್ತಿದರು. ಸ್ನ್ಯಾಚ್ನಲ್ಲಿ 93 ಕೆಜಿ ಎತ್ತಿದರು.
ಚಾನು 2023ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 194 ಕೆಜಿ ಎತ್ತಿ ಹಿಡಿದು 6ನೇ ಸ್ಥಾನ ಪಡೆದಿದ್ದರು. ಕೊಲಂಬಿಯಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಾನು ಕೊನೆಯ ಬಾರಿ ಒಟ್ಟು 200 ಕೆಜಿ ಎತ್ತಿ ಹಿಡಿದಿದ್ದರು.