ವಿಂಬಲ್ಡನ್: ಮಾರ್ಕೆಟಾ ವೊಂಡ್ರೊಸೋವಾ ಮಹಿಳೆಯರ ಸಿಂಗಲ್ಸ್ ಚಾಂಪಿಯನ್
ಮಾರ್ಕೆಟಾ ವೊಂಡ್ರೊಸೋವಾ | Photo: PTI
ಲಂಡನ್, ಜು.15: ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್ ಮಹಿಳೆಯರ ಸಿಂಗಲ್ಸ್ ಫೈನಲ್ ಫೈಟ್ ನಲ್ಲಿ ಟ್ಯುನಿಶಿಯದ ಆಟಗಾರ್ತಿ ಉನ್ಸ್ ಜಾಬಿರ್ ರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿದ ಝೆಕ್ ಗಣರಾಜ್ಯದ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೋವಾ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವೊಂಡ್ರೊಸೋವಾ ಅವರು ಜಾಬಿರ್ ನನ್ನು 6-4, 6-4 ಸೆಟ್ ಗಳ ಅಂತರದಿಂದ ಸೋಲಿಸಿದರು.
24ರ ಹರೆಯದ ವೊಂಡ್ರೊಸೋವಾ ವೃತ್ತಿಪರ ಯುಗದಲ್ಲಿ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಮೊದಲ ಶ್ರೇಯಾಂಕರಹಿತ ಆಟಗಾರ್ತಿಯಾಗಿದ್ದಾರೆ. ಕಳೆದ ವರ್ಷ ಮಣಿಕಟ್ಟು ಚಿಕಿತ್ಸೆಗೆ ಒಳಗಾಗಿ ಟೂರ್ನಮೆಂಟ್ನಿಂದ ವಂಚಿತರಾಗಿದ್ದ ವೊಂಡ್ರೊಸೋವಾ ಶ್ರೇಯಾಂಕವಿಲ್ಲದೆ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇದೀಗ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಜಯಿಸಿದ ಮೂರನೇ ಝೆಕ್ ಆಟಗಾರ್ತಿಯಾಗಿದ್ದಾರೆ.
ಜಾಬಿರ್ ಸತತ ಎರಡನೇ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಗೆ ಭಾಜನರಾದರು.
ಜಾಬಿರ್ ಗ್ರಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಮೊದಲ ಅರಬ್ ಆಟಗಾರ್ತಿ ಹಾಗೂ ಆಫ್ರಿಕದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗುವ ವಿಶ್ವಾಸದಲ್ಲಿದ್ದರು.ಈ ನಿಟ್ಟಿನಲ್ಲಿ ಜಾಬಿರ್ ನಡೆಸಿದ ಮೂರನೇ ಪ್ರಯತ್ನವೂ ವಿಫಲವಾಗಿದೆ. ಕಳೆದ ವರ್ಷದ ವಿಂಬಲ್ಡನ್ ಫೈನಲ್ ನಲ್ಲಿ ಜಾಬಿರ್ ಅವರು ಎಲೆನಾ ರೈಬಾಕಿನಾ ವಿರುದ್ಧ ಸೋತಿದ್ದರು. 2022ರಲ್ಲಿ ಯುಎಸ್ ಓಪನ್ ನಲ್ಲಿ ಫೈನಲ್ ಗೆ ತಲುಪಿದ್ದರೂ ಕೂಡ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಗೆ ಸೋತಿದ್ದ ಜಾಬಿರ್ ರನ್ ನರ್ಸ್ ಅಪ್ ಗೆ ತೃಪ್ತಿಪಟ್ಟಿದ್ದರು. ಇದೀಗ ಮೂರನೇ ಬಾರಿಯೂ 28ರ ಹರೆಯದ ಜಾಬಿರ್ಗೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಒಲಿಯಲಿಲ್ಲ.