×
Ad

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ | ನೀರಜ್ ಚೋಪ್ರಾಗೆ 8ನೇ ಸ್ಥಾನ; ಪದಕವಿಲ್ಲದೆ ಹಿಂತಿರುಗಿದ ಸ್ಟಾರ್ ಅಥ್ಲೀಟ್

ಮೆಚ್ಚುಗೆಗೆ ಪಾತ್ರವಾದ ಸಚಿನ್ ಯಾದವ್ ಪ್ರದರ್ಶನ; 4ನೇ ಸ್ಥಾನ ► ವೆಸ್ಟ್‌ಇಂಡೀಸ್‌ನ ವಾಲ್ಕಟ್ ಚಾಂಪಿಯನ್

Update: 2025-09-18 18:24 IST

 ಸಚಿನ್ ಯಾದವ್ , ನೀರಜ್ ಚೋಪ್ರಾ | PC :  X 

ಟೋಕಿಯೊ: ಪುರುಷರ ಜಾವೆಲಿನ್ ಸ್ಪರ್ಧೆಯ ಫೈನಲ್‌ನಲ್ಲಿ 8ನೇ ಸ್ಥಾನ ಪಡೆದಿರುವ ಭಾರತದ ನೀರಜ್ ಚೋಪ್ರಾ ಅವರು ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಸ ಪ್ರದರ್ಶನ ನೀಡಿದರು.

ವೆಸ್ಟ್‌ಇಂಡೀಸ್‌ನ ಅತ್ಲೀಟ್ ಕೆಶಾರ್ನ್ ವಾಲ್ಕಾಟ್(88.16 ಮೀ.)ಚಿನ್ನದ ಪದಕ ಜಯಿಸಿದರೆ, ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್(87.38 ಮೀ.)ಹಾಗೂ ಅಮೆರಿಕದ ಕರ್ಟಿಸ್ ಥಾಂಪ್ಸನ್(86.67)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ, 2020ರಲ್ಲಿ ಜಪಾನಿನಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಚೋಪ್ರಾ ಗುರುವಾರ ನಡೆದ ಸ್ಪರ್ಧೆಯಲ್ಲಿ ಹಿಂದಿನ ತನ್ನ ಶ್ರೇಷ್ಠ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ವಿಫಲರಾದರು. ಚೋಪ್ರಾ 2023ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿದ್ದರು.

ಗುರುವಾರ 84.65 ಮೀ.ದೂರಕ್ಕೆ ಜಾವೆಲಿನ್ ಎಸೆದು ತನ್ನ ಅಭಿಯಾನ ಆರಂಭಿಸಿದ ಚೋಪ್ರಾ ತನ್ನ 2ನೇ ಪ್ರಯತ್ನದಲ್ಲಿ 83.03 ಮೀ.ದೂರ ಜಾವೆಲಿನ್ ಎಸೆದರು. 3ನೇ ಪ್ರಯತ್ನ ಫೌಲ್ ಆಯಿತು. 4ನೇ ಪ್ರಯತ್ನದಲ್ಲಿ 82.86 ಮೀ.ದೂರ ಎಸೆದರು.

ಯಾವ ಸ್ಪರ್ಧಾಳುಗಳು 90 ಮೀ.ದೂರವನ್ನು ದಾಟಲಿಲ್ಲ. ಐದನೇ ಸುತ್ತಿನಲ್ಲಿ 84.03 ಮೀ.ದೂರ ಜಾವೆಲಿನ್ ಎಸೆದಿರುವ ಚೋಪ್ರಾ 12 ಸ್ಪರ್ಧಿಗಳಿದ್ದ ಫೈನಲ್ ಸುತ್ತಿನಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಈ ಹಿಂದೆ 2024ರ ಮೇನಲ್ಲಿ ಫೆಡರೇಶನ್ ಕಪ್‌ನಲ್ಲಿ 82.27 ಮೀ.ದೂರ ಜಾವೆಲಿನ್ ಎಸೆದಿದ್ದ ಚೋಪ್ರಾ ತನ್ನ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಆಗ ಅವರು ಚಿನ್ನ ಗೆದ್ದಿದ್ದರು. ಈ ವರ್ಷ ಮೇನಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀ.ದೂರ ಜಾವೆಲಿನ್ ಎಸೆದಿದ್ದ ಚೋಪ್ರಾ ಮೊದಲ ಬಾರಿ 90 ಮೀ.ಕ್ರಮಿಸಿದ್ದರು.

ಸಚಿನ್ ಯಾದವ್ ವೈಯಕ್ತಿಕ ಶ್ರೇಷ್ಠ ಪ್ರದರ್ಶನ:

ಚೋಪ್ರಾ ಅವರ ಸಹಪಾಠಿ ಸಚಿನ್ ಯಾದವ್ ತನ್ನ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿ 4ನೇ ಸ್ಥಾನ ಪಡೆದರು. 86.27 ಮೀ.ದೂರ ಜಾವೆಲಿನ್ ಎಸೆದಿರುವ ಯಾದವ್ ಸ್ವಲ್ಪದರಲ್ಲೆ ಪದಕ ವಂಚಿತರಾದರು.

ಕೇವಲ ಅಗ್ರ-6 ಅತ್ಲೀಟ್‌ಗಳು ಮಾತ್ರ ಆರನೇ ಹಾಗೂ ಅಂತಿಮ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಅಚ್ಚರಿಯೆಂಬಂತೆ ಯಾದವ್ ಅವರು ಅಗ್ರ-6ರಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಕ್ರೀಡಾಪಟುವಾಗಿದ್ದರು.

ಫೈನಲ್ ಸುತ್ತಿನಲ್ಲಿ ಯಾದವ್ ತನ್ನ ಮೊದಲ ಪ್ರಯತ್ನದಲ್ಲೇ ಜೀವನಶ್ರೇಷ್ಠ ಪ್ರದರ್ಶನ(86.27 ಮೀ.)ನೀಡಿದರು. ಈ ಮೂಲಕ ಖ್ಯಾತನಾಮರಾದ ಚೋಪ್ರಾ, ಜುಲಿಯನ್ ವೆಬೆರ್(86.11) ಹಾಗೂ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಂ(82.75 ಮೀ.)ಅವರಿಗಿಂತಲೂ ಉತ್ತಮ ಪ್ರದರ್ಶನ ನೀಡಿದರು.

ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನದೀಂ 4ನೇ ಸುತ್ತಿನ ನಂತರ ಸ್ಪರ್ಧೆಯಿಂದ ನಿರ್ಗಮಿಸಿದರು. ಅಂತಿಮವಾಗಿ 10ನೇ ಸ್ಥಾನ ಪಡೆದರು.

ಬೆಲ್ಟ್ ತೆಗೆದು, ಮುಖ ಮುಚ್ಚಿಕೊಂಡು ನಿರಾಶೆ ವ್ಯಕ್ತಪಡಿಸಿದ ನೀರಜ್ ಚೋಪ್ರಾ:

ಜಪಾನ್ ರಾಜಧಾನಿಯಲ್ಲಿ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎಂದಿನಂತೆ ತನ್ನ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ವಿಫಲರಾದ ನೀರಜ್ ಚೋಪ್ರಾ ಗುರುವಾರ ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ 8ನೇ ಸ್ಥಾನ ಪಡೆದರು.

ಮಾಜಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಚೋಪ್ರಾ ಇಂದು 84.03 ಮೀ. ದೂರ ಜಾವೆಲಿನ್ ಎಸೆದು ಶ್ರೇಷ್ಠ ಪ್ರದರ್ಶನ ನೀಡಿದರು. ಇದು ಅವರ ಎಂದಿನ ಪ್ರದರ್ಶನಕ್ಕಿಂತ ನೀರಸವಾಗಿತ್ತು. ಫೈನಲ್ ಸ್ಪರ್ಧೆಯ 5ನೇ ಸುತ್ತಿನಲ್ಲಿ ತನ್ನ ಅಭಿಯಾನ ಕೊನೆಗೊಂಡಾಗ ಚೋಪ್ರಾ ಅವರು ತಮ್ಮ ಬೆಲ್ಟ್ ತೆಗೆದು, ಕಿರುಚುತ್ತಾ, ಮುಖ ಮುಚ್ಚಿಕೊಂಡು ತನ್ನ ತೀವ್ರ ನಿರಾಶೆ ಹೊರಹಾಕಿದರು.

2021ರ ಟೋಕಿಯೊ ಒಲಿಂಪಿಕ್ಸ್ ನಂತರ 27ರ ವಯಸ್ಸಿನ ಚೋಪ್ರಾ ಅವರು ಜಾಗತಿಕ ಕ್ರೀಡಾಕೂಟದಲ್ಲಿ ಮೊದಲ ಎರಡು ಸ್ಥಾನಗಳಿಂದ ಹೊರಗುಳಿದಿರುವುದು ಇದೇ ಮೊದಲು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News