ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್; ಪದಕಪಟ್ಟಿಯಲ್ಲಿ ಭಾರತಕ್ಕೆ 18ನೇ ಸ್ಥಾನ
Photo: twitter/@SportsgramIndia
ಹೊಸದಿಲ್ಲಿ: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನ ಜಯಿಸಿದ ನೀರಜ್ ಚೋಪ್ರಾ ಭಾರತವು ರವಿವಾರ ಕೊನೆಗೊಂಡ ಚಾಂಪಿಯನ್‌ಶಿಪ್‌ನಲ್ಲಿ ಕೇವಲ ಒಂದು ಪದಕ ಜಯಿಸಿ ಅಂಕಪಟ್ಟಿಯಲ್ಲಿ 18ನೇ ಸ್ಥಾನ ಪಡೆಯಲು ನೆರವಾದರು.
ಚಾಂಪಿಯನ್‌ಶಿಪ್ ಆಗಸ್ಟ್ 19ರಿಂದ 27ರ ತನಕ ಹಂಗೇರಿಯದ ಬುಡಾಪೆಸ್ಟ್‌ನಲ್ಲಿ ನಡೆದಿದೆ. ಚೋಪ್ರಾ ಹೊರತುಪಡಿಸಿ ಉಳಿದ ಅತ್ಲೀಟ್‌ಗಳು ಪದಕ ಜಯಿಸದೆ ನಿರಾಸೆಗೊಳಿಸಿದರು.
ಪುರುಷರ ಜಾವೆಲಿನ್ ಎಸೆತದಲ್ಲಿ ಬಂದಿರುವ ಚಿನ್ನವು ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆದ್ದಿರುವ ಏಕೈಕ ಪದಕವಾಗಿದೆ. ನೀರಜ್ ವಿಶ್ವ ಚಾಂಪಿಯನ್ ಆಗಿರುವ ಭಾರತದ ಮೊದಲ ಅತ್ಲೀಟ್ ಆಗಿದ್ದಾರೆ.
ಭಾರತದ ಪುರುಷರ 4-400 ಮೀ.ರಿಲೇ ತಂಡ ನೂತನ ಏಶ್ಯನ್ ದಾಖಲೆ ನಿರ್ಮಿಸಿದರೆ, ಪಾರುಲ್ ಚೌಧರಿ 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಮುರಿದಿರುವುದಲ್ಲದೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.