×
Ad

ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ | ಲಾಂಗ್‌ಜಂಪ್, ಸ್ಟೀಪಲ್‌ ಚೇಸ್, ಹರ್ಡಲ್ಸ್‌ ನಲ್ಲಿ ಭಾರತೀಯರ ಕಳಪೆ ನಿರ್ವಹಣೆ

Update: 2025-09-15 23:42 IST

  ಸಾಂದರ್ಭಿಕ ಚಿತ್ರ 

ಟೋಕಿಯೊ, ಸೆ. 15: ಟೋಕಿಯೊದಲ್ಲಿ ನಡೆಯುತ್ತಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತದ ನಿರಾಶಾದಾಯಕ ನಿರ್ವಹಣೆ ಸೋಮವಾರವೂ ಮುಂದುವರಿಯಿತು.

ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್, ಸ್ಪ್ರಿಂಟ್ ಹರ್ಡ್‌ಲರ್ ತೇಜಸ್ ಶಿರ್ಸೆ ಹಾಗೂ ಸ್ಟೀಪಲ್‌ಚೇಸರ್‌ಗಳಾದ ಪಾರುಲ್ ಚೌಧರಿ ಮತ್ತು ಅಂಕಿತಾ ಧ್ಯಾನಿ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಶ್ರೀಶಂಕರ್ ಗಂಭೀರ ಮಂಡಿ ಗಾಯದಿಂದಾಗಿ ಒಂದು ವರ್ಷಕ್ಕೂ ಅಧಿಕ ಸಮಯ ಹೊರಗಿದ್ದ ಬಳಿಕ, ಜುಲೈಯಲ್ಲಿ ಸ್ಪರ್ಧೆಗೆ ಮರಳಿದ್ದರು. 26 ವರ್ಷದ ಅವರು ರ್ಯಾಂಕಿಂಗ್ ಆಧಾರದಲ್ಲಿ ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಲಭ್ಯವಿದ್ದ ಕೊನೆಯ ಸ್ಥಾನವನ್ನು ಗಳಿಸಿದ್ದರು.

ಟೋಕಿಯೊದಲ್ಲಿ, ಅವರು ಫೈನಲ್ ತಲುಪಲು ಒಂದೋ 8.15 ಮೀ. ದೂರ ಜಿಗಿಯಬೇಕಾಗಿತ್ತು ಅಥವಾ ಅಗ್ರ 12ರಲ್ಲಿ ಒಬ್ಬರಾಗಬೇಕಾಗಿತ್ತು. ಆದರೆ, ಅವರಿಗೆ 7.78 ಮೀ, 7.59 ಮೀ ಮತ್ತು 7.70 ಮೀಟರ್ ದೂರ ಮಾತ್ರ ಜಿಗಿಯಲು ಸಾಧ್ಯವಾಯಿತು. ಅವರು 36 ಸ್ಪರ್ಧಿಗಳ ಪೈಕಿ 25ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಮಹಿಳೆಯರ 3,000 ಮೀ. ಸ್ಟೀಪಲ್‌ಚೇಸ್ ಮೊದಲ ಹೀಟ್‌ನಲ್ಲಿ ಅಂಕಿತಾ 10ನೇ ಸ್ಥಾನ ಗಳಿಸಿದರು. ಒಟ್ಟಾರೆಯಾಗಿ, ಪಾರುಲ್ 20ನೇ ಸ್ಥಾನ ಪಡೆದರೆ, ಅಂಕಿತಾ 35ನೇ ಹಾಗೂ ಕೊನೆಯ ಸ್ಥಾನಕ್ಕೆ ಸೀಮಿತಗೊಂಡರು.

ಪುರುಷರ 110 ಮೀ ಹರ್ಡಲ್ಸ್‌ನಲ್ಲಿ, ತೇಜಸ್ 5ನೇ ಹಾಗೂ ಕೊನೆಯ ಹೀಟ್‌ನಲ್ಲಿ 13.57 ಸೆಕೆಂಡ್‌ನೊಂದಿಗೆ 6ನೇ ಸ್ಥಾನ ಗಳಿಸಿದರು. ಒಟ್ಟಾರೆಯಾಗಿ, ಅವರು ಒಟ್ಟು 42 ಸ್ಪರ್ಧಿಗಳ ಪೈಕಿ 29ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಪ್ರತಿ ಹೀಟ್‌ನಿಂದ ಅಗ್ರ ನಾಲ್ವರು ಮತ್ತು ಎಲ್ಲಾ ಹೀಟ್‌ಗಳಲ್ಲಿ ಸೋತವರ ಪೈಕಿ ನಾಲ್ವರು ವೇಗದ ಸ್ಪರ್ಧಿಗಳು ಸೆಮಿಫೈನಲ್‌ಗಳಿಗೆ ಪ್ರವೇಶ ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News