WPL | ರಾಧಾ ಯಾದವ್ ದಾಳಿಗೆ ಕುಸಿದ ಯುಪಿ ವಾರಿಯರ್ಸ್
Photo : x/@wplt20
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು ಯುಪಿ ವಾರಿಯರ್ಸ್ ತಂಡವು 120ರನ್ ಗಳ ಸವಾಲು ನೀಡಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿತು. ಆರಂಭಿಕ ಬ್ಯಾಟರ್ ಗಳಾದ ನಾಯಕಿ ಅಲಿಸ್ಸಾ ಹೀಲೆ 2 ಬೌಂಡರಿ ಸಿಡಿಸಿ 13 ರನ್ ಗಳಿಸಿಕೊಂಡರೆ, ವೃಂದಾ ದಿನೇಶ್ ಯಾವುದೇ ರನ್ ಗಳಿಸದೇ ಪೆವಿಲಿಯನ್ ಹಾದಿ ಹಿಡಿದರು. ವೃಂದಾ ದಿನೇಶ್ ಶೂನ್ಯ ಸುತ್ತಿದಾಗ ತಂಡವು ಆಘಾತ ಅನುಭವಿಸಿತು. ಟಹ್ಲಿಯಾ ಮೆಗ್ರಾತ್ 8 ಎಸೆತ ಎದುರಿಸಿ ಕೇವಲ 1 ರನ್ ಗಳಿಸಿ ಔಟಾದರು. ಈ 3 ಪ್ರಮುಖ ವಿಕೇಟ್ ಕಬಳಿಸಿಕೊಂಡ ಮರಿಝನ್ನೆ ಕಪ್ಪ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸುವ ಮೂಲಕ ಬ್ಯಾಟರ್ ಗಳ ಪಾಲಿಗೆ ಸಿಂಹಸ್ವಪ್ನವಾದರು.
ತಂಡವು 20 ರನ್ ಗಳಿಸುವಷ್ಟರಲ್ಲಿ ಮೂವರು ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಸೇರಿದರು. ಡೆಲ್ಲಿಯ ಸಂಘಟಿತ ದಾಳಿಯ ಮುಂದೆ ಯುಪಿ ವಾರಿಯರ್ಸ್ ಬ್ಯಾಟರ್ ಗಳು ಮಂಕಾದಾಗ, ಶ್ವೇತಾ ಸೆಹ್ರಾವತ್ ತಂಡಕ್ಕೆ ಆಸರೆಯಾದರು,
ತರಗೆಲೆಗಳಂತೆ ವಿಕೆಟ್ ಗಳು ಉದುರುತ್ತಿದ್ದಾಗ ಕ್ರೀಸ್ ಗೆ ಅಂಟಿಕೊಂಡು ಶ್ವೇತಾ ಸೆಹರಾವತ್ ರಕ್ಷಣಾತ್ಮಕ ಆಟವಾಡಿದರು.
5 ರನ್ ಅಂತರದಲ್ಲಿ ಶ್ವೇತಾ ಶೆರಾವತ್ ಅರ್ಧ ಶತಕ ವಂಚಿತರಾದರು. 42 ಎಸೆತ ಎದುರಿಸಿದ ಅವರು 5 ಬೌಂಡರಿ 1 ಸಿಕ್ಸರ್ ಗಳ ಸಹಿತ 45 ರನ್ ಗಳಿಸಿದರು. ಅರ್ಧ ಶತಕದ ಹೊಸ್ತಿಲಲ್ಲಿ ರಾಧಾ ಯಾದವ್ ಬೌಲಿಂಗ್ ನಲ್ಲಿ ತಾನಿಯಾ ಭಾಟಿಯಾಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಇನ್ನುಳಿದಂತೆ ತಂಡದ ಯಾವ ಬ್ಯಾಟರ್ ಗಳೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಟಗಾರ್ತಿಯರು ಯುಪಿ ಗೆ ಶಾಕ್ ನೀಡಿದರು. ರನ್ ಗಳಿಸಲು ಅವಕಾಶವೇ ನೀಡಲಿಲ್ಲ. ರಾಧಾ ಯಾದವ್ 4 ವಿಕೆಟ್ ಗಳಿಸಿದರು. ಮರಿಝಾನ್ನೆ ಕಪ್ ಒಂದು ಮೇಡನ್ ಓವರ್ ಸಹಿತ 3 ವಿಕೆಟ್ ಪಡೆದರು. ಅನುರಾಧಾ ರೆಡ್ಡಿ, ಅನಬೆಲ್ ಸೌತೆರ್ಲಾಂಡ್ ತಲಾ ಒಂದು ವಿಕೆಟ್ ಪಡೆದರು.