ಭಾರತದ ಕುಸ್ತಿ ಫೆಡರೇಶನ್ ಚುನಾವಣೆ: ಮತದಾರರ ಪಟ್ಟಿಯಿಂದ ಬ್ರಿಜ್ ಭೂಷಣ್, ಅವರ ಪುತ್ರ ಕರಣ್ ಹೊರಕ್ಕೆ
ಕಳೆದ ತಿಂಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿದ್ದ, ಲೈಂಗಿಕ ಕಿರುಕುಳ-ಆರೋಪಿಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಪ್ರಮುಖ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಹಾಗೂ ವಿನೇಶ್ ಫೋಗಟ್ ಅವರು ಬ್ರಿಜ್ ಭೂಷಣ್ ಅವರ ಕುಟುಂಬದಿಂದ ಯಾರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು.
ಹೊಸದಿಲ್ಲಿ: ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಅವರ ಪುತ್ರ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಉಪಾಧ್ಯಕ್ಷ ಕರಣ್ ಭೂಷಣ್ ಸಿಂಗ್ ಅವರು ಮುಂದಿನ ತಿಂಗಳು ಚುನಾಯಿತರಾಗಲಿರುವ ಡಬ್ಲ್ಯುಎಫ್ ಐನ ಹೊಸ ಕಾರ್ಯಕಾರಿ ಮಂಡಳಿಯ ಭಾಗವಾಗುವುದಿಲ್ಲ.
ಬಿಜೆಪಿ ಸಂಸದ ಹಾಗೂ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಹಾಗೂ ಅವರ ಮಗನನ್ನು ಆಗಸ್ಟ್ 12 ರಂದು ನಡೆಯಲಿರುವ ಫೆಡರೇಶನ್ ಚುನಾವಣೆಗಾಗಿನ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ.
ಕಳೆದ ತಿಂಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿದ್ದ, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಹಾಗೂ ವಿನೇಶ್ ಫೋಗಟ್ ನೇತೃತ್ವದ ಪ್ರತಿಭಟನಾ ನಿರತ ಕುಸ್ತಿಪಟುಗಳು, ಬ್ರಿಜ್ ಭೂಷಣ್ ಅವರ ಕುಟುಂಬದಿಂದ ಯಾರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು.
ಆದಾಗ್ಯೂ, ಸರಕಾರವು ಎಪ್ರಿಲ್ ನಲ್ಲಿ ಡಬ್ಲ್ಯು ಎಫ್ ಐ ಅನ್ನು ವಿಸರ್ಜಿಸುವ ಮೊದಲು ಡಬ್ಲ್ಯುಎಫ್ ಐನ ಭಾಗವಾಗಿದ್ದ ಬ್ರಿಜ್ ಭೂಷಣ್ ಅವರ ಮೂರು ಕುಟುಂಬ ಸದಸ್ಯರಲ್ಲಿ, ಅವರ ಅಳಿಯ ವಿಶಾಲ್ ಸಿಂಗ್ ಇನ್ನೂ ಎಲೆಕ್ಟೋರಲ್ ಕಾಲೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ ಅಂತಿಮಗೊಂಡ ಪಟ್ಟಿಯಲ್ಲಿ ಮತ್ತೋರ್ವ ಅಳಿಯ, ಮಾಜಿ ಜಂಟಿ ಕಾರ್ಯದರ್ಶಿ ಆದಿತ್ಯ ಪ್ರತಾಪ್ ಸಿಂಗ್ ಕಾಣಿಸಿಕೊಂಡಿಲ್ಲ.