ಸರಕಾರ ವಿಜಯಪುರ ಕಬ್ಬು ಬೆಳೆಗಾರರ ಪರವಾಗಿ ಪ್ರತ್ಯೇಕ ನಿರ್ಧಾರ ಕೈಗೊಳ್ಳಬೇಕು : ಸಂಗಮೇಶ ಸಗರ
"ಸಕ್ಕರೆ ಕಾರ್ಖಾನೆಗಳಿಂದ 11.ರಷ್ಟು ಇಳುವರಿ ಕಬ್ಬಿಗೆ ಮಾತ್ರ 3,250 ರೂ.; ವಿಜಯಪುರ ರೈತರಿಗೆ ಅನ್ಯಾಯ"
ವಿಜಯಪುರ : ಕಬ್ಬಿಗೆ 3,500 ರೂ. ದರ ನೀಡುವಂತೆ ಆಗ್ರಹಿಸಿ ಹೋರಾಟದ ಕಿಚ್ಚು ತಣ್ಣಗಾಗುವ ನಿರೀಕ್ಷೆ ಇಲ್ಲದಂತಾಗಿದೆ. ರಿಕವರಿ ಆಧರಿಸಿ ಬೆಲೆ ನಿಗದಿಪಡಿಸಿರುವುದರಿಂದ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಹಿನ್ನೆಡೆಯಾಗಿದ್ದು, ವಿಜಯಪುರ ಜಿಲ್ಲೆಗೆ ಪ್ರತ್ಯೇಕವಾಗಿಯೇ 3,500 ರೂ. ನಿಗದಿ ಮಾಡುವಂತೆ ಅಹೋರಾತ್ರಿ ಹೋರಾಟ ಮುಂದುವರೆಯಲಿದೆ.
ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ - ಹಸಿರುಸೇನೆ ವತಿಯಿಂದ ಕಳೆದ 4 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಹೋರಾಟ ಮುಂದುವರೆಯಲಿದೆ.
ಸಂಘಟನೆಯ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರಾಜ್ಯ ಸರಕಾರ 11ರಷ್ಟು ಇಳುವರಿ ಇರುವ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು 3250 ರೂ. ಪಾವತಿಸಲು ಒಪ್ಪಿದ್ದು, ಅದಕ್ಕೆ 50 ರೂ. ಸರಕಾರ ಬೆಂಬಲ ಬೆಲೆ ನೀಡಲಿದ್ದು, ಒಟ್ಟು 3,300 ರೂ. ದರ ನಿಗದಿಯಾಗಿದೆ. ಆದರೆ ವಿಜಯಪುರ ಭಾಗದಲ್ಲಿ ಇಳುವರಿ ಪ್ರಮಾಣ 9 ರಷ್ಟಿದೆ, ಇದರಿಂದ ರೈತರಿಗೆ ಮತ್ತಷ್ಟು ಅನ್ಯಾಯವಾಗಲಿದೆ. ಹೀಗಾಗಿ ನಾವು ಹೋರಾಟ ಮುಂದುವರೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿಯೂ ನಾನು ಭಾಗವಹಿಸಿದ್ದು, ಸಕ್ಕರೆ ಕಾರ್ಖಾನೆಗಳು 11.ರಷ್ಟು ಇಳುವರಿ ಇರುವ ಕಬ್ಬಿಗೆ ಮಾತ್ರ 3250 ರೂ. ನೀಡುವುದಾಗಿ ಘೋಷಿಸಿವೆ. ಇದರಿಂದ ವಿಜಯಪುರ ಜಿಲ್ಲೆಗೆ ಅನ್ಯಾಯವಾಗಲಿದೆ, ಹೀಗಾಗಿ ಸರಕಾರ ವಿಜಯಪುರ ಕಬ್ಬು ಬೆಳೆಗಾರರ ಪರವಾಗಿಯೇ ಪ್ರತ್ಯೇಕ ನಿರ್ಧಾರ ಕೈಗೊಳ್ಳಬೇಕು, ಕೂಡಲೇ ರಾಜ್ಯ ಸರಕಾರ ನಾಳೆ ಸ್ಪಷ್ಟನೆ ನೀಡಬೇಕು, ನಾಳೆ ಸಂಜೆಯವರೆಗೂ ನಾವು ಸರಕಾರದ ನಿರ್ಧಾರಕ್ಕಾಗಿ ಕಾಯುತ್ತೇವೆ, ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲು ಸಹ ಹಿಂದೇಟು ಹಾಕುವುದಿಲ್ಲ ಎಂದರು.
ರೈತ ಮುಖಂಡರಾದ ರಾಹುಲ್ ಕುಬಕಡ್ಡಿ, ಮಲ್ಲಿಕಾರ್ಜುನ ಕೆಂಗನಾಳ, ಶ್ರೀಶೈಲ ಮಳಜಿ ಸೇರಿದಂತೆ ಅನೇಕರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.