×
Ad

‘ರಾಷ್ಟ್ರದ್ರೋಹಿ’ ಬುದ್ಧ-ಬಸವರು ಮತ್ತು ಆರೆಸ್ಸೆಸ್‌ನ ಬ್ರಾಹ್ಮಣೀಯ ‘ಹಿಂದೂರಾಷ್ಟ್ರ’

Update: 2025-10-22 11:00 IST

1941ರಲ್ಲೂ ಮತ್ತೊಮ್ಮೆ ಇದೇ ಭರವಸೆಯನ್ನು ಸಾವರ್ಕರ್ ಕೊಡುತ್ತಾರೆ. ಆದ್ದರಿಂದಲೇ ಅಲ್ಲವೇ ಅಂಬೇಡ್ಕರ್ ಅವರು 1951ರಲ್ಲಿ ಆರ್‌ಪಿಐನ ಚುನಾವಣಾ ಪ್ರಣಾಳಿಕೆಯನ್ನು ರೂಪಿಸುವಾಗ ತಮ್ಮ ಪಕ್ಷ ಯಾವ ಕಾರಣಕ್ಕೂ ಅತ್ಯಂತ ಪ್ರತಿಗಾಮಿ ಪಕ್ಷವಾದ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್ ಜೊತೆಗೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದು!

ಈದೇಶದಲ್ಲಿ ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ ಕಾಲಿಡುವ ಮುಂಚಿನಿಂದಲೂ ಎರಡು ಪರಸ್ಪರ ವಿರುದ್ಧ ತಾತ್ವಿಕ -ಧಾರ್ಮಿಕ ಧಾರೆಗಳು ಮಾರಣಾಂತಿಕ ಸಂಘರ್ಷದಲ್ಲಿದ್ದವು. ಈಗಲೂ ಇವೆ.

ಒಂದು- ಮೇಲು-ಕೀಳು ಶ್ರೇಣೀಕರಣವನ್ನು, ವರ್ಣ ಮತ್ತು ಜಾತಿ ವ್ಯವಸ್ಥೆಯನ್ನೇ ಸಾಮಾಜಿಕ ಮತ್ತು ವೈಯಕ್ತಿಕ ಮೌಲ್ಯಗಳನ್ನಾಗಿಯೂ, ಕಾನೂನು ಮತ್ತು ಧರ್ಮದರ್ಶನವಾಗಿಯೂ, ಇದನ್ನು ಒಪ್ಪದ ಇತರರನ್ನು ಇವನಾರವ ಎಂದು ದೂರೀಕರಿಸುವ ಬ್ರಾಹ್ಮಣ ಧಾರೆ.

ಮತ್ತೊಂದು ಅದಕ್ಕೆ ತದ್ವಿರುದ್ಧವಾಗಿ ಸಮತೆ-ಮಮತೆಗಳನ್ನು, ಜ್ಞಾನ ಶೀಲ, ಕರುಣಾ ಮೈತ್ರಿಗಳನ್ನು, ಸಾಮಾಜಿಕ ಮತ್ತು ವೈಯಕ್ತಿಕ ಮೌಲ್ಯಗಳನ್ನಾಗಿ ಪ್ರತಿಪಾದಿಸುವ ಎಲ್ಲರನ್ನು ನಮ್ಮವ ನಮ್ಮವ ಎನ್ನುವ ಬುದ್ಧ , ಬಸವಾದಿ ಶ್ರಮಣ ಧಾರೆ.

ಅಂಬೇಡ್ಕರ್ ಹೇಳುವಂತೆ ಭಾರತದ ಇತಿಹಾಸವೆಂದರೆ ಈ ಎರಡು ಧಾರೆಗಳ ನಡುವಿನ ಮಾರಣಾಂತಿಕ ಸಂಘರ್ಷವೇ ಆಗಿದೆ.

ಮೂಲದಲ್ಲಿ ಇಸ್ಲಾಮ್ ಮತ್ತು ಕ್ರಿಶ್ಚ್ಚಿಯಾನಿಟಿಗಳ ಧರ್ಮ ದರ್ಶನವೂ ಮೇಲು-ಕೀಳಿನ ವಿರುದ್ಧವೇ ಆಗಿದ್ದರಿಂದ ಅವು ಭಾರತಕ್ಕೆ ಬಂದ ಮೇಲೆ ಅವೈದಿಕ ದರ್ಶನಗಳ ಜೊತೆ ಬೆರೆತುಹೋದವು. ಭಾರತದ ಶ್ರಮಣ ಜನರ ನಡುವೆ ಬೇರುಬಿಟ್ಟವು ಮತ್ತು ಭಾರತೀಯವೇ ಆಗಿಬಿಟ್ಟವು.

ಇವೆಲ್ಲವೂ ಒಟ್ಟು ಸೇರಿ ಬ್ರಾಹ್ಮಣ್ಯ ದ ಸಾಮ್ರಾಜ್ಯಕ್ಕೆ ಸವಾಲೊಡ್ಡುತ್ತಾ ಬಂದಿವೆ. ಹೀಗಾಗಿ ಬ್ರಾಹ್ಮಣ್ಯವು ತನ್ನ ಉಳಿವಿಗಾಗಿ ಈ ಧಾರೆಗಳನ್ನು ಇಲ್ಲವಾಗಿಸುವ, ಅನ್ಯಗೊಳಿಸುವ ಅಥವಾ ಅಧೀನಗೊಳಿಸಿ ಒಳಗೊಳ್ಳುವ ಮಾರ್ಗವನ್ನು ಇತಿಹಾಸದುದ್ದಕ್ಕೂ ಅನುಸರಿಸುತ್ತಾ ಬಂದಿದೆ. ಅದಕ್ಕೆ ಹಲವಾರು ಮುಖವಾಡಗಳನ್ನೂ ಧರಿಸುತ್ತಾ ಬಂದಿದೆ.

► ಹಿಂದೂ ಮುಖವಾಡ ತೊಟ್ಟ ಬ್ರಾಹ್ಮಣ್ಯ

ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತೀಯ ಅಸ್ಮಿತೆಯನ್ನು ಆಧರಿಸಿ ವಿದೇಶಿ ವಸಾಹತು ವಿರೋಧಿ ಹೋರಾಟ ನಡೆಯುತ್ತಿರುವಾಗ ಮತ್ತೊಮ್ಮೆ ಬ್ರಾಹ್ಮಣ್ಯವು ತನ್ನ ಪುನರ್ ಸ್ಥಾಪನೆ ಮಾಡಿಕೊಳ್ಳುವ ಹುನ್ನಾರವನ್ನು ಪ್ರಾರಂಭಿಸಿತು.

ಭಾರತೀಯವೆಂದರೆ ಭಾರತದ ಎಲ್ಲರೂ ಎಂಬ ‘ನಮ್ಮವಗೊಳಿಸಿಕೊಳ್ಳುವ’ ಧಾರೆಯ ವಿರುದ್ಧ ಭಾರತೀಯವೆಂದರೆ ಸಂಸ್ಕೃತಿ, ಜನಾಂಗ ಮತ್ತು ಧರ್ಮವನ್ನು ಆಧರಿಸಿದ ‘ಹಿಂದೂ ರಾಷ್ಟ್ರದ’ ಪರಿಕಲ್ಪನೆಯನ್ನು ಸಾವರ್ಕರ್(ಆರೆಸ್ಸೆಸ್) ಮುಂದಿಟ್ಟರು. ಬ್ರಾಹ್ಮಣ್ಯವನ್ನು ಹಿಂದೂ ಎಂಬ ಮುಸುಕಿನಲ್ಲಿ ಮತ್ತೆ ಮರುಸ್ಥಾಪನೆ ಮಾಡುವ ರಾಜಕೀಯ ಪ್ರಾರಂಭಿಸಿದರು. ಅದಕ್ಕೆ ಒಗ್ಗದವರನ್ನು ‘ಇವನಾರವ’ ಎನ್ನುವ ರಾಜಕಾರಣ ಹುಟ್ಟುಹಾಕಿದರು.

ಯಾರಿಗೆ ಭಾರತವು ಪಿತೃಭೂಮಿ ಮತ್ತು ಪುಣ್ಯಭೂಮಿ ಎರಡೂ ಆಗಿರುದೆಯೋ ಅವರು ಮಾತ್ರ ಭಾರತೀಯರು ಎಂಬ ವ್ಯಾಖ್ಯಾನ ನೀಡುತ್ತಾ ಸಾವರ್ಕರ್ ಏಕಾಏಕಿ ಭಾರತೀಯ ಮುಸ್ಲಿಮರು, ಕ್ರಿಶ್ಚಿಯನ್ನ್ನು, ಪಾರ್ಸಿಗಳನ್ನು ಅನ್ಯಗೊಳಿಸಿದರು.

ಇದು ಎಲ್ಲರಿಗೂ ಸ್ಪಷ್ಟ. ಆದರೆ ಭಾರತದಲ್ಲಿ ಹುಟ್ಟಿದ ಇತರ ಎಲ್ಲಾ ಧರ್ಮಗಳನ್ನು ಆರೆಸ್ಸೆಸ್-ಸಾವರ್ಕರ್ ಸಮಾನವೆಂದು ಒಪ್ಪಿಕೊಳ್ಳುತ್ತ್ತಾರೆಯೆ? ಇಲ್ಲ.

► ಅಬ್ರಾಹ್ಮಣವನ್ನು ಅಮಾನ್ಯಗೊಳಿಸುವ, ಅಧೀನಗೊಳಿಸುವ ಹಿಂದುತ್ವ

ಬದಲಿಗೆ ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಯನ್ನು ಅನ್ಯಗೊಳಿಸುವಾಗಲೇ ಹಿಂದೂ ಎಂಬ ಹೆಸರಿನಲ್ಲಿ ಬ್ರಾಹ್ಮಣ್ಯದ ವೈಭವೀಕರಣ ಮಾಡುತ್ತಾ ಅಬ್ರಾಹ್ಮಣ ಮತ್ತು ಅವೈದಿಕವಾದದ್ದೆಲ್ಲವನ್ನು ಬ್ರಾಹ್ಮಣ್ಯಕ್ಕೆ ಅಧೀನಗೊಳಿಸುವ ಸಾಂಸ್ಕೃತಿಕ ರಾಜಕಾರಣವನ್ನು ಪ್ರಾರಂಭಿಸಿತು. ಅದಕ್ಕೆ ಅದನ್ನು ಬ್ರಾಹ್ಮಣ್ಯವೆನ್ನದೆ ಹಿಂದೂ, ಹಿಂದೂ ರಾಷ್ಟ್ರವೆಂಬ ರಾಜಕಾರಣವನ್ನು ಪ್ರಾರಂಭಿಸಿತು.

ಅದಕ್ಕಾಗಿ ಹಿಂದು ಧರ್ಮ ಬೇರೆ ಹಿಂದುತ್ವ ಬೇರೆ. ಭಾರತದಲ್ಲಿ ಹುಟ್ಟಿದ ಮತ್ತು ಭಾರತೀಯ ಸಂಸ್ಕೃತಿಯನ್ನು ಉಸಿರಾಡುವ ಎಲ್ಲವೂ ಹಿಂದುತ್ವವೇ. ಹಿಂದುತ್ವ ಎಂದರೆ ಭಾರತೀಯತೆ . ಹೀಗಾಗಿ ಭಾರತದಲ್ಲಿ ಹುಟ್ಟಿರುವ ಧರ್ಮಗಳೆಲ್ಲಾ ಹಿಂದುತ್ವದ ಕವಲುಗಳೇ. ಅವೆಲ್ಲವೂ ಒಟ್ಟು ಸೇರಿಯೇ ಹಿಂದುತ್ವ, ಸನಾತನ ಮತ್ತು ಭಾರತೀಯತೆ ಎಂದು 1923ರಲ್ಲಿ ಸಾವರ್ಕರ್ "Essentials Of Hindutva” ಬರೆದಾಗಿನಿಂದಲೂ ಸಂಘಿಗಳು ಪುಂಗಿ ಬಿಡುತ್ತಲೇ ಬಂದಿದ್ದಾರೆ.

ಸಾವರ್ಕರ್ ಅವರು ತಮ್ಮ Essentials Of Hindutva ದಲ್ಲಿ ಹಿಂದುತ್ವವೆಂದರೆ ಹಿಂದೂ ಧರ್ಮವಲ್ಲವೆಂದೂ.. ಬೌದ್ಧ, ಜೈನ, ಚಾರ್ವಾಕ ..ಹೀಗೆ ಭಾರತದಲ್ಲಿ ಹುಟ್ಟಿದ ಎಲ್ಲವೂ ಹಿಂದುತ್ವವೇ ಎಂದು ಹೇಳುತ್ತಾರಲ್ಲವೆ? ಹಾಗೆಯೇ ಆರೆಸ್ಸ್ಸೆೆಸ್‌ನ ಸರಸಂಘಚಾಲಕರಾದ ಗೋಳ್ವಾಲ್ಕರ್ ಅವರು ಭಾರತೀಯವಾದದ್ದೆಲ್ಲ ಹಿಂದುತ್ವವೇ ಎಂದು ಹೇಳುತ್ತಾರೆ. ಹಾಗೆಯೇ ಹಾಲಿ ಸರಸಂಘಚಾಲಕ ಭಾಗವತರೂ ಪದೇಪದೇ ಅದೇ ತುತ್ತೂರಿ ಊದುತ್ತಿರುತ್ತಾರೆ .

ಆದರೆ ಆರೆಸ್ಸ್ಸೆೆಸ್ ನಿಜಕ್ಕೂ ಭಾರತದಲ್ಲಿ ಹುಟ್ಟಿದ ಎಲ್ಲವನ್ನು ಹಿಂದುತ್ವವೇ ಎಂದು ಭಾವಿಸಿದ್ದರೆ ಆ ಎಲ್ಲಾ ಪಂಥಗಳನ್ನು ಸರಿಸಮಾನವಾಗಿ ನೋಡಬೇಕಿತ್ತಲ್ಲವೇ? ಬ್ರಾಹ್ಮಣ್ಯವನ್ನು ಮಾತ್ರ ವೈಭವೀಕರಿಸಬಾರದಿತ್ತಲ್ಲವೇ?

ಹೀಗಾಗಿ ಭಾರತೀಯವಾದದ್ದೆಲ್ಲಾ ಹಿಂದುತ್ವವೇ ಅಥವಾ ಆರೆಸ್ಸೆಸ್ ಪ್ರಕಾರ ಬ್ರಾಹ್ಮಣ್ಯ ಮಾತ್ರ ಅಸಲಿ ಹಿಂದುತ್ವವೇ ಎಂಬುದನ್ನು ಪರಿಶೀಲಿಸಲು ಎರಡು ಪರೀಕ್ಷೆಗಳನ್ನು ಮಾಡಬಹುದು.

1. ಅಬ್ರಾಹ್ಮಣ ದಾರ್ಶನಿಕ ಪಂಥಗಳಾದ ಬೌದ್ಧ, ಸಿಖ್, ಲಿಂಗಾಯತಗಳ ಬಗ್ಗೆ ಆರೆಸ್ಸೆಸ್ ಮತ್ತು ಸಾವರ್ಕರ್ ಅವರ ನಿಜವಾದ ಅಭಿಪ್ರಾಯವೇನಾಗಿತ್ತು?

2. ಅಬ್ರಾಹ್ಮಣ ಪಂಥಗಳ ಮೌಲ್ಯಗಳಾದ ವರ್ಣಾಶ್ರಮ ವಿರೋಧ, ಜಾತಿ ವಿರೋಧ ಇವುಗಳ ಬಗ್ಗೆ ಬ್ರಾಹ್ಮಣೀಯ ಭಾರತೀಯತೆಯ ಪ್ರತಿಪಾದಕರಾದ ಆರೆಸ್ಸೆಸ್‌ನ ಸಿದ್ಧಾಂತಿಗಳ ನಿಲುವೇನಿತ್ತು?

ಹಿಂದುತ್ವ ಭಾರತೀಯತೆಯನ್ನು ಪ್ರತಿಪಾದಿಸಿದ ಸಾವರ್ಕರ್ ಆಗಲೀ, ಅದನ್ನು ಮುಂದುವರಿಸುತ್ತಾ ಬಂದಿರುವ ಆರೆಸ್ಸೆಸ್‌ಆಗಲೀ, ಭಾರತದಲ್ಲೇ ಹುಟ್ಟಿದ ಬೌದ್ಧ, ಜೈನ, ಸಿಖ್, ಲಿಂಗಾಯತ , ಆದಿವಾಸಿಗಳ ಸರ್ನಾ ಇನ್ನಿತರ ಅವೈದಿಕ ಮತ್ತು ವೈದಿಕ ವಿರೋಧಿ ಮತ್ತು ಧರ್ಮಗಳನ್ನು ಹಾಗೂ ಚಾರ್ವಾಕ, ಲೋಕಾಯತ ಪಂಥಗಳನ್ನು ಸರಿಸಮಾನವೆಂದು ಎಂದೂ ಭಾವಿಸಿಲ್ಲ.

ಬದಲಿಗೆ ಉದ್ದಕ್ಕೂ ಅವುಗಳನ್ನು ವಿಲೀನಗೊಳಿಸುವ ಅಥವಾ ಬ್ರಾಹ್ಮಣ್ಯ ವಿರೋಧಿ ಸಮಾನತಾವಾದಿ ಸಾರವನ್ನು ತೆಗೆದು ವಿರಾಟ್ ಹಿಂದೂ ಚೌಕಟ್ಟಿನಲ್ಲಿ ಒಳಗೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ವೈದಿಕೇತರ ಭಾರತೀಯ ದರ್ಶನಗಳಾದ ಬೌದ್ಧ, ಜೈನ, ಸಿಖ್, ಲಿಂಗಾಯತ ಗಳನ್ನು ಅದರಲ್ಲಿ , ವಿಶೇಷವಾಗಿ ಬುದ್ಧನನ್ನು ದೇಶದ್ರೋಹಿ ಎಂದೂ , ಬೌದ್ಧ ಧರ್ಮವನ್ನು ಧರ್ಮಗ್ಲಾನಿ ಎಂದೇ ಬೋಧಿಸಿಕೊಂಡು ಬಂದಿದೆ...ಬ್ರಾಹ್ಮಣೀಯ ಆರೆಸ್ಸೆಸ್ ನ ಪಿತಾಮಹರಾದ ‘ಸಾವರ್ಕರ್ ಮತ್ತು ಗೋಳ್ವ್ವಾಲ್ಕರ್’ ಈ ನೆಲದಲ್ಲೇ ಹುಟ್ಟಿದ ಬ್ರಾಹ್ಮಣ್ಯ ವಿರೋಧಿ ಬುದ್ಧ, ಬಸವ ಹಾಗೂ ಸಿಖ್ ಧರ್ಮ / ದರ್ಶನಗಳನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.

► ರಕ್ಷಕ ಬ್ರಾಹ್ಮಣ - ದ್ರೋಹಿ ಬುದ್ಧ , ಬಸವ!

ಉದಾಹರಣೆಗೆ ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕ ‘ಗೋಳ್ವ್ವಾಲ್ಕರ್’ ಅವರ Bunch Of Thoughts ಬರಹ ಗುಚ್ಛವನ್ನು ಗಮನಿಸಿ . ಅದರಲ್ಲಿ ಅವರು ಭಾರತದ ಉಳಿವಿಗೆ ಕಾರಣ ‘ಧರ್ಮಸತ್ತಾ’ ಅರ್ಥಾತ್ ‘ಬ್ರಾಹ್ಮಣ ಸಾಮ್ರಾಜ್ಯ’ ಎಂದು ಘೋಷಿಸುತ್ತಾರೆ. ಅದರ ಮೇಲೆ ದಾಳಿಯಾದಾಗಲೆಲ್ಲಾ ಭಾರತದ ಋಷಿ ಮುನಿಗಳು ಕ್ಷತ್ರಿಯರಿಗೆ ಮಾರ್ಗದರ್ಶನ ಮಾಡುವ ಮೂಲಕ ಭಾರತವನ್ನು ಉಳಿಸಿದ್ದಾರೆ ಎಂದು ಬರೆಯುತ್ತಾರೆ.

ಉದಾಹರಣೆಗೆ ರಾಮಾಯಣದ ಕಾಲದಲ್ಲಿ ರಾವಣನಿಂದ ಧರ್ಮ ಸಂಕರ ಆಗುತ್ತಿದ್ದಾಗ ಬ್ರಾಹ್ಮಣ ಸಂತರಾದ ವಿಶ್ವಾಮಿತ್ರ , ವಶಿಷ್ಠ ಮತ್ತು ಅಗಸ್ತ್ಯ ರು ರಾಮನಿಗೆ ರಾಷ್ಟ್ರ ರಕ್ಷಣೆಯ ಸಂಕಲ್ಪ ಬೋಧಿಸುತ್ತಾರೆ ಮತ್ತು ರಾವಣನನ್ನು ಕೊಂದ ಬಾಣವನ್ನು ಕೂಡ ಅಗಸ್ತ್ಯ ಮುನಿಯೇ ಮಂತ್ರಿಸಿ ಕೊಡುತ್ತಾರೆ ಎಂದು ಹೇಳುತ್ತಾ ರಾಷ್ಟ್ರವೆಂದರೆ ಬ್ರಾಹ್ಮಣ ಎಂದು ಪ್ರತ್ಯಕ್ಷವಾಗಿಯೇ ಬೋಧಿಸುತ್ತಾರೆ...

(Bunch Of Thoughts, Sahitya Sindhu Prakashana, Bangalore, 1966. p.70)

ಮುಂದುವರಿದು....,ಬೌದ್ಧದಿಂದ ಆಗುತ್ತಿದ್ದ ಧರ್ಮಗ್ಲಾನಿಯಿಂದ ಭಾರತವನ್ನು ಶಂಕರಾಚಾರ್ಯ ಬಚಾವು ಮಾಡಿದರೆಂದು ಬರೆದಿದ್ದಾರೆ. ಆ ಬರಹವು ಅವರ ಬರಹಗಳ ಸಂಕಲನವಾದ @"Bunch Of Thoughts" ಸಂಕಲನದಲ್ಲಿದೆ.

ಆ ಸಂಕಲನದ ಪುಟ 66-67 ರಲ್ಲಿ ಗೋಳ್ವ್ವಾಲ್ಕರ್ ಹೀಗೆ ಬರೆಯುತ್ತಾರೆ:

‘ಬೌದ್ಧ ಪಂಥವು ಮಾತೃ ಸಮಾಜಕ್ಕೂ , ಮಾತೃ ದೇಶಕ್ಕೂ ದ್ರೋಹವೆಸಗಿತು. ಅಂಥಾ ಸಂಕಷ್ಟಕರ ಸಂದರ್ಭದಲ್ಲಿ ಧರ್ಮವನ್ನು, ಸಮಾಜವನ್ನು ರಕ್ಷಿಸಲು ಬಂದವರು ಯಾರು? ಭಾರತದ ಸಂತ ಪರಂಪರೆಯೇ ಶ್ರೀ ಶಂಕರಾಚಾರ್ಯರ ರೂಪದಲ್ಲಿ ಮತ್ತೆ ಅವತರಿಸಿ ಧರ್ಮವನ್ನು ರಕ್ಷಿಸಿತು’.

‘ಆ ಮೂಲಕ ಒಂದು ಪ್ರತ್ಯೇಕ ಪಂಥವಾಗಿ ಬೌದ್ಧವನ್ನು ಈ ನೆಲದಿಂದ ಅಳಿಸಿಹಾಕಲಾಯಿತು. ಬುದ್ಧನನ್ನು ದೇವರ ಅವತಾರವಾಗಿ ಉಳಿಸಿಕೊಳ್ಳಲಾಯಿತು’.

‘ನಾವು ಶಿವನನ್ನು ಆರಾಧಿಸುವುದು ನಿಸ್ಸಂಶಯ. ಆದರೆ ಹಾಗೆಂದು ಆತನ ಸುತ್ತ ಇರುವ ದೆವ್ವಗಳನ್ನು ಅಪ್ಪಿಕೊಳ್ಳುತ್ತೇವೆಯೆ’ೀ?

(Bunch Of Thoughts, Vikrama prakasahana, Bangalore Fourth Impression, 1968- p 66-67

ಆಗ ಭಾರತವನ್ನು ಉಳಿಸಿದ್ದು ಶಂಕರಾಚಾರ್ಯರಂತೆ ...!

( Bunch Of Thoughts, Vikrama prakasahana, Bangalore Fourth Impression, 1968- p 66-67 )

ಹಾಗೆಯೇ 12 ನೇ ಶತಮಾನದಲ್ಲಿ ಬಸವ ಪ್ರಣೀತ ಲಿಂಗಾಯತ, 16-17ನೇ ಶತಮಾನದಲ್ಲಿ ಸಿಖ್ಖರು ಕೂಡ ಭಾರತದ ಧರ್ಮಸತ್ತೆಗೆ -ಅರ್ಥಾತ್ ಬ್ರಾಹ್ಮಣ್ಯಕ್ಕೆ ಸವಾಲೊಡ್ಡಿದ್ದನ್ನು ರಾಷ್ಟ್ರ ಭದ್ರತೆಗೆ ಒದಗಿದ್ದ ಅಪಾಯ ಎಂದು ಬಣ್ಣಿಸುತ್ತಾರೆ... ಮತ್ತು ಸಿಖ್ ಮತ್ತು ಲಿಂಗಾಯತರನ್ನು ಆ ಕಾರಣಕ್ಕೆ ದೇಶದ್ರೋಹಿಗಳ ಪಟ್ಟಿಗೆ ಸೇರಿಸುತ್ತಾರೆ...

ಸ್ವಾತಂತ್ರ್ಯಾ ನಂತರವೂ ಸಿಖ್ಖರು ಮತ್ತು ಲಿಂಗಾಯತರು ತಾವು ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುತ್ತಿರುವುದು ದೇಶದ್ರೋಹ ಎಂದು ಗೋಳ್ವಾಲ್ಕ್ಕರ್ ಸ್ಪಷ್ಟವಾದ ಮಾತುಗಳಲ್ಲಿ ಘೋಷಿಸುತ್ತಾರೆ.

ಪಂಜಾಬಿಗಳು ಭಾಷೆಯ ಆಧಾರದಲ್ಲಿ ಪ್ರತ್ಯೇಕ ರಾಜ್ಯ ಬೇಡಿಕೆ ಇಟ್ಟಿದ್ದನ್ನು ದೇಶ ವಿಭಜನೆಗೆ ಹೋಲಿಸುತ್ತಾರೆ...!

Some of the Sikhs, Jains, Lingayats and Aryasamajists declare that they are separate from Hindus. Some prominent Sikh leaders are demanding and agitating for a separate sectarian Sikh State

ಮುಂದುವರಿದು ಬ್ರಾಹ್ಮಣ್ಯ ದ ಸನಾತನವನ್ನು ವಿರೋಧಿಸುವುದು ದೇಶದ್ರೋಹ ಎಂದು ಗೋಳ್ವಾಲ್ಕರ್ ಪ್ರತಿಪಾದಿಸುತ್ತಾರೆ.

2018 ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಉತ್ತುಂಗ ದಲ್ಲಿದ್ದಾಗ ಆರೆಸ್ಸೆಸ್‌ನ ಹಾಲಿ ಸರಸಂಘ ಚಾಲಕ ಭಾಗವತ್ ಕೂಡ ಲಿಂಗಾಯತರ ಪ್ರತ್ಯೇಕ ಧರ್ಮ ಸ್ಥಾನ ಮಾನ ಚಳುವಳಿ ದೇಶದೊಳಗೆ ಒಡಕು ಹುಟ್ಟಿಸುವ ತಂತ್ರವೆಂದು ತೀವ್ರವಾಗಿ ವಿರೋಧಿಸಿದ್ದರು. ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕ ಸರಕಾರ ಕಳಿಸಿದ್ದ ಪ್ರಸ್ತಾವವನ್ನು ನಿರಾಕರಿಸಿತ್ತು.

► ಬುದ್ಧನೊಬ್ಬ ದೇಶದ್ರೋಹಿ-ಸಾವರ್ಕರ್

ಸಾವರ್ಕರ್ ಪ್ರಕಾರ ರಾಷ್ಟ್ರವೊಂದರ ನಿರ್ಮಾಣಕ್ಕೆ ಬೇಕಾದದ್ದು ಕ್ಷಾತ್ರತೆ ಅರ್ಥಾತ್ ಕ್ರೌರ್ಯ.

ಕಲ್ಪಿತ ಶತ್ರುವಿನ ವಿರುದ್ಧ ದಯ-ದಾಕ್ಷಿಣ್ಯವಿಲ್ಲದ ಧೋರಣೆ ಮಾತ್ರ ಬಿರುಕಿಲ್ಲದ ರಾಷ್ಟ್ರವನ್ನು ಕಟ್ಟಬಹುದು.

ಹೀಗಾಗಿ ದ್ವೇಷಭರಿತ ಶೌರ್ಯ-ಕ್ರೌರ್ಯಗಳ ಹಿಂಸಾಚಾರಗಳಿಗೆ ಶಾಂತಿ-ಪ್ರೀತಿಯ ತತ್ವಗಳ ಮೂಲಕ ಅಡ್ಡಗಾಲು ಹಾಕುವ, ಎಲ್ಲರೂ ಒಂದೇ ಎನ್ನುವ ದಾರ್ಶನಿಕರೆಲ್ಲಾ ದೇಶದ್ರೋಹಿಗಳೇ.

ಏಕೆಂದರೆ ಅದು ರಾಷ್ಟ್ರನಿರ್ಮಾಣಕ್ಕೆ ಬೇಕಾದ ಕ್ರೌರ್ಯ ಹಾಗೂ ದ್ವೇಷವನ್ನು ತಣ್ಣಗಾಗಿಸಿ ರಾಷ್ಟ್ರಪುರುಷನನ್ನು ನಿರ್ವೀರ್ಯಗೊಳಿಸುತ್ತದೆ!

ಉದಾಹರಣೆಗೆ ಬೌದ್ಧರನ್ನು ಕಗ್ಗೊಲೆ ಮಾಡಿ ಬ್ರಾಹ್ಮಣ್ಯವನ್ನು ಪುನರ್‌ರ್ಸ್ಥಾಪನೆ ಮಾಡಿದ ಪುಷ್ಯಮಿತ್ರ ಶುಂಗನ ಕ್ರೌರ್ಯದ ಬಗ್ಗೆ ಸಾವರ್ಕರ್ ತಮ್ಮ https://thewire.in/politics/rss-ambedkar-camaraderie-fictional-narratives.. ನಲ್ಲಿ ಹೀಗೆ ಬರೆಯುತ್ತಾರೆ:

ಇತಿಹಾಸದಲ್ಲಿ ಒಮ್ಮ್ಮೊಮ್ಮೆ ಮಾನವ ಗುಣಗಳ ಬೆಳವಣಿಗೆಗಾಗಿ ಮನುಷ್ಯರಲ್ಲಿ ದೌರ್ಬಲ್ಯವನ್ನು ಬಿತ್ತಿ ನಿರ್ವೀರ್ಯಗೊಳಿಸುವ ಅಹಿಂಸೆಯ ತತ್ವವನ್ನು ಕ್ರೂರವಾದ ಹಿಂಸೆಯಿಂದ ಕೊಲ್ಲಬೇಕಾಗುತ್ತದೆ. ಏಕೆಂದರೆ ಆ ಕಾಲಘಟ್ಟದಲ್ಲಿ ಆ ಹಿಂಸೆಯೇ ನಿಜವಾದ ನೀತಿ, ನಿಜವಾದ ಧರ್ಮ ಮತ್ತು ಮಾನವ ಸಂಸ್ಕೃತಿಯನ್ನು ಔನ್ನತ್ಯಕ್ಕೆ ತೆಗೆದುಕೊಂಡು ಹೋಗುವ ಕೃತ್ಯವಾಗಿರುತ್ತದೆ .

ಏಕೆಂದರೆ ಸಾವರ್ಕರ್ ಪ್ರಕಾರ ಭಾರತವು ಸತತವಾಗಿ ಪರಕೀಯರ ದಾಳಿಗೆ ತುತ್ತಾಗಲು ಕಾರಣ ಶಾಂತಿ, ಅಹಿಂಸೆ, ಸಮಾನತೆ ಮತ್ತು ನ್ಯಾಯಗಳನ್ನು ಪ್ರತಿಪಾದಿಸಿದ ದಾರ್ಶನಿಕರೇ..

ಹೀಗಾಗಿ ಶಾಂತಿ, ಮಮತೆ ಮತ್ತು ಸಮತೆಯನ್ನು ಸಾರಿದ ಗೌತಮ ಬುದ್ಧ ಹಾಗೂ ಅವನ ಅನುಯಾಯಿಗಳು ಈ ದೇಶದ ಪ್ರಥಮ ದೇಶದ್ರೋಹಿಗಳೆಂದು ಸಾವರ್ಕರ್ ತಮ¾ https://thewire.in/politics/rss-ambedkar-camaraderie-fictional-narrativess ಪುಸ್ತಕದಲ್ಲಿ ಏನಿಲ್ಲವೆಂದರೂ 32 ಸಾರಿ ಹೀಗಳೆದಿದ್ದಾರೆ.

ಒಂದೆರಡು ಉದಾಹರಣೆಗಳು

ಬೌದ್ಧ ಧರ್ಮವು ಜಾತಿ, ಜನಾಂಗ ಅಥವಾ ರಾಷ್ಟ್ರೀಯತೆಗಳ ವ್ಯತ್ಯಾಸಗಳನ್ನೇ ಗುರುತಿಸಲಿಲ್ಲ.! ಇಂಥಾ ರಾಷ್ಟ್ರದ್ರೋಹಿ, ಭಾರತ ದ್ರೋಹಿ ಚಿಂತನೆಗಳ ಮೂಲಕ ಬೌದ್ಧ ಪ್ರಚಾರಕರು ಭಾರತದ ಜನರನ್ನು ದಾರಿತಪ್ಪಿಸಲು ಪ್ರಾರಂಭಿಸಿದರು.

ಈ ಭಾರತೀಯ ಬೌದ್ಧರ ಇಂಥಾ ಅತ್ಯಂತ ಖಂಡನಾರ್ಹ ದ್ರೋಹಪೂರಿತ ಕೃತ್ಯಗಳನ್ನು, ರಾಷ್ಟ್ರೀಯ ಸ್ವಾತಂತ್ರ್ಯವನ್ನು ಕೊನೆಗೊಳಿಸಲು ರೂಪಿಸಿದ ತಂತ್ರಗಳನ್ನು ಮತ್ತು ಬೌದ್ಧ ವಿಹಾರಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ದೇಶದ್ರೋಹೀ ಕೃತ್ಯಗಳನ್ನು ಎಸಗಲು ದೊರೆಯುತ್ತಿದ್ದ ಬಹಿರಂಗ ಪ್ರಚೋದನೆಗಳನ್ನು ಕಠಿಣವಾಗಿ ನಿಗ್ರಹಿಸಲು ಪುಷ್ಯಮಿತ್ರ ಮತ್ತವರ ದಂಡನಾಯಕರು ಕಾಲದ ಅನಿವಾರ್ಯತೆಯಿಂದಾಗಿ ದೇಶದ್ರೋಹಿ ಕೃತ್ಯಗಳಲ್ಲಿ ಭಾಗವಹಿಸಿದ್ದ ಬೌದ್ಧರನ್ನು ಗಲ್ಲಿಗೇರಿಸಬೇಕಾಯಿತು ಮತ್ತು ದೇಶದ್ರೋಹಿ ಕೃತ್ಯಗಳ ಕೇಂದ್ರವಾಗಿದ್ದ ಬೌದ್ಧವಿಹಾರಗಳನ್ನು ಕೆಡವಿ ನಾಶಗೊಳಿಸಬೇಕಾಯಿತು. ಅದು ಶತ್ರುಗಳ ಜೊತೆ ಕೈಗೂಡಿಸಿದ್ದಕ್ಕಾಗಿ, ದೇಶದ್ರೋಹದ ಅಪರಾಧಕ್ಕಾಗಿ ಮತ್ತು ಭಾರತದ ಸಾಮ್ರಾಜ್ಯ ಮತ್ತು ಸ್ವಾತಂತ್ರ್ಯಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನೀಡಿದ ಶಿಕ್ಷೆಯಾಗಿತ್ತು. ಆದ್ದರಿಂದ ಅದು ಧಾರ್ಮಿಕ ಕಾರಣಕ್ಕಾಗಿ ನೀಡಿದ ಶಿಕ್ಷೆಯಾಗಿರಲಿಲ್ಲ. ಅದು, ಭಾರತದ ಸಾಮ್ರಾಜ್ಯದ ಆಡಳಿತ ಯಂತ್ರಾಂಗವನ್ನು ನಡೆಸುವ ಅತ್ಯುನ್ನತ ಅಧಿಕಾರ ಸ್ಥಾನದಲ್ಲಿದ್ದವನಾಗಿ ಪುಷ್ಯಮಿತ್ರ ಮಾಡಲೇ ಬೇಕಾದ ಕರ್ತವ್ಯವಾಗಿತ್ತು.

ಇನ್ನೂ ಹೆಚ್ಚಿನ ವಿವರಗಳಿಗಾಗಿ ಆಸಕ್ತರು ಸಾವರ್ಕರ್ ಅವರ Six Glorious Epochs... ... ಪುಸ್ತಕವನ್ನು ಅಂತರ್ಜಾಲದ ಈ ವಿಳಾಸದಲ್ಲಿ ಓದಬಹುದು :

(/https://savarkar.org/en/pdfs/6_Glorious_Epochs_of_Indian_History.pdf)

ಹೀಗೆ ಈ ಬ್ರಾಹ್ಮಣಶಾಹಿ ತಿಳುವಳಿಕೆ ಆರೆಸ್ಸೆಸ್ ಮತ್ತು ಸಾವರ್ಕರ್ ಅನುಯಾಯಿಗಳ ಕಣಕಣದಲ್ಲೂ ಹರಿಯುತ್ತದೆ. ಅದಕ್ಕೆ ಸಾವರ್ಕರ್ ಮತ್ತು ಆರೆಸ್ಸೆಸಿನ ಎಲ್ಲಾ ನಾಯಕರಿಗೆ ಸಮಾನತೆಯನ್ನು ಬೋಧಿಸಿದ ಬುದ್ಧನನ್ನು ಕಂಡರೆ ಎಲ್ಲಿಲ್ಲದ ಸಿಟ್ಟ್ಟು. ಅಷ್ಟು ಮಾತ್ರವಲ್ಲ 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ಅಂಬೇಡ್ಕರ್ ಅವರನ್ನು ಹೀಗಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಸಮಾಲೋಚನೆಯೊಂದಿಗೆ ಪ್ರಕಟವಾಗುತ್ತಿದ್ದ ಪ್ರಬುದ್ಧ ಭಾರತ್ ಪತ್ರಿಕೆಯಲ್ಲಿ ಸಾವರ್ಕರ್ ಅವರ ವೀರ ಎಂಬ ಅಭಿದಾನದ ಔಚಿತ್ಯವನ್ನು ಹಾಗೂ ಅವರ ಶರಣಾಗತಿಯ ಚರಿತ್ರೆಯನ್ನು ನೆನಪಿಸಲಾಗುತ್ತದೆ.

(https://thewire.in/politics/rss-ambedkar-camaraderie-fictional-narratives)

► ಬೌದ್ಧವೂ ಅಲ್ಲ,ಲಿಂಗಾಯತವೂ ಅಲ್ಲ,ಮನುಸ್ಮೃತಿಯೇ ಭಾರತೀಯತೆ!

ಈಗ ಅಬ್ರಾಹ್ಮಣ ದರ್ಶನಗಳ ಜಾತಿ ವಿರೋಧಿ ಮೌಲ್ಯಗಳ ಬಗ್ಗೆ ಹಿಂದೂ ಬ್ರಾಹ್ಮಣ್ಯದ ನಿಲುವೇನು ಎಂದು ಗಮನಿಸೋಣ.

ಮೊದಲನೆಯದಾಗಿ ಅವರ 1932ರ ಕಿರ್ಲೋಸ್ಕರ್ ಲೇಖನವನ್ನು ಗಮನಿಸೋಣ.

ಆದರೆ, ಇದಕ್ಕೆ 5 ವರ್ಷಗಳಷ್ಟು ಮುಂಚೆಯೇ, 1927ರ ಡಿಸೆಂಬರ್ ನಲ್ಲಿ ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಲಿತ-ಮಹಿಳಾ-ಮಾನವತೆಯ ವಿರೋಧಿ ಗ್ರಂಥ ಎಂದು ಸುಟ್ಟುಹಾಕಿದ್ದರು ಎಂಬುದನ್ನು ನೆನಪಿನಲ್ಲಿಡೋಣ. ಹಾಗೆಯೇ ಅಸ್ಪೃಶ್ಯತೆಯ ಮೂಲ ಹಿಂದೂ ಧರ್ಮದಲ್ಲಿದೆಯೆಂದೂ, ಅದರ ಸಾರ ಮನುಸ್ಮತಿಯಲ್ಲಿದೆಯೆಂದೂ, ಹಾಲಿ ಇರುವ ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯು ನಿಂತಿರುವುದೇ ಮನುಸ್ಮೃತಿಯ ನಿರ್ದೇಶನ ಹಾಗೂ ಪ್ರೇರಣೆಗಳಿಂದ ಎಂದೂ ಸ್ಪಷ್ಟ ಪಡಿಸಿದ್ದರು.

ಇಂಥ ಮನುಸ್ಮತಿಯ ಬಗ್ಗೆ ಸಾವರ್ಕರ್ ಅವರು ತಮ್ಮ ಕಿರ್ಲೋಸ್ಕರ್ ಲೇಖನದಲ್ಲಿ ಹೀಗೆ ಬರೆಯುತ್ತಾರೆ:

‘ವೇದಗಳ ನಂತರದಲ್ಲಿ ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಪೂಜನೀಯ ಎಂದು ಗೌರವಿಸುವ ಶಾಸ್ತ್ರಗ್ರಂಥವೆಂದರೆ ಮನುಸ್ಮತಿ. ಇದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರದಾಯಗಳ, ವಿಚಾರ ಹಾಗೂ ಆಚಾರಗಳ ಆಧಾರ ಗ್ರಂಥವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರವು ಶತಮಾನಗಳಿಂದ ಸಾಧಿಸುತ್ತಿರುವ ಆಧ್ಯಾತ್ಮಿಕ ಹಾಗೂ ದೈವಿಕ ಮುನ್ನ್ನಡೆಗಳನ್ನು ಸೂತ್ರೀಕರಿಸಿದೆ. ಇಂದಿಗೂ ಈ ದೇಶದ ಕೋಟ್ಯಂತರ ಜನರ ಜೀವನ ಮತ್ತು ನಡೆಗಳು ಮನುಸ್ಮತಿಯನ್ನೇ ಅನುಸರಿಸುತ್ತದೆ. ಇಂದು ಮನುಸ್ಮೃತಿಯೇ ಹಿಂದೂ ಕಾನೂನು ಕೂಡಾ ಆಗಿದೆ. ಹಾಗೂ ಇದು ಹಿಂದೂ ದೇಶವಾಗಿದೆ’ಎಂದು ಘೋಷಿಸುತ್ತಾರೆ.

[ VD Savarkar, ‘Women in Manusmriti’ in Savarkar Samagar (collection of Savarkar’s writings in Hindi), Prabhat, Delhi, vol. 4, p. 415ಶಂಸುಲ್ ಇಸ್ಲಾಮ್ ಅವರ ‘ಮಿಥ್ಸ್ ಆಂಡ್ ಾಕ್ಟ್ಸ್’ ಪುಸ್ತಕದಲ್ಲಿ ಉಲ್ಲೇಖ

ಆದರೆ ಮನುಸ್ಮೃತಿಯ ಕಾನೂನುಗಳು ಮತ್ತು ಸೂತ್ರಗಳು ಎಷ್ಟು ಮಹಿಳಾ ವಿರೋಧಿ ಮತ್ತು ಅಸ್ಪಶ್ಯ ವಿರೋಧಿ ಇದೆ ಎಂಬುದನ್ನು ಆ ವೇಳೆಗಾಗಲೇ ಫುಲೆ-ಅಂಬೇಡ್ಕರ್ ಹಾಗೂ ಇನ್ನಿತರ ಬಹುಜನ ಚಿಂತಕರು ಬಯಲು ಮಾಡಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ಮನುಸ್ಮತಿಯ ಬಗ್ಗೆ ಎದ್ದಿರುವ ಪ್ರಶ್ನೆಯನ್ನು ಸಾವರ್ಕರ್ ಅವರು ಜಾಣತನದಿಂದ ಬಗೆಹರಿಸುತ್ತಲೇ ಮನುಸ್ಮತಿಯ ಪಾರಮ್ಯವನ್ನು ಎತ್ತಿಹಿಡಿಯುತ್ತಾರೆ. ಅವರ ಪ್ರಕಾರ:

‘ಇಂದಿನ ದೃಷ್ಟಿಯಲ್ಲಿ ನೋಡುವುದಾದರೆ ಯಾವೆಲ್ಲ ವಿಷಯಗಳು ಮನುಸ್ಪತಿಯಲ್ಲಿ ಪ್ರತಿಗಾಮಿ ಎಂದು ಕಂಡು ಬರುವುದೋ ಅವುಗಳನ್ನು ಕೈಬಿಡಬೇಕು ಎನ್ನುವುದು ಸರಿ. ಆದರೆ ಅಷ್ಟು ಮಾತ್ರಕ್ಕೆ ಮನುಸ್ಮತಿ ಅಪಾಯಕಾರಿಯೋ ಅಥವಾ ಕಾಲಬಾಹಿರವೋ ಆಗಿಬಿಡುವುದಿಲ್ಲ. ಬ್ಯೂಬಿಲೋನಿಯಾ, ಈಜಿಪ್ಟ್, ಹೀಬ್ರು, ಗ್ರೀಸ್ ಮತ್ತು ರೋಮನ್ ಸಮಾಜಗಳ ಸಾಮಾಜಿಕ ಸೂತ್ರಗಳಿಗೆ ಹೋಲಿಸಿದಲ್ಲಿ ಮನುಸ್ಮತಿ ಅವೆಲ್ಲಕ್ಕಿಂತ ಎತ್ತರದಲ್ಲಿ ನಿಲ್ಲುತ್ತದೆ. ಅದಕ್ಕಾಗಿ ನಾವು ಅದಕ್ಕೆ ಸಕಲ ಗೌರವಗಳನ್ನೂ ಸಲ್ಲಿಸಬೇಕು’

ಎಂದು ಮನುಸ್ಮತಿಯನ್ನು ಸುಟ್ಟ ಅಂಬೇಡ್ಕರ್ ಅವರಿಗೆ ನೇರವಾಗಿ ಸವಾಲು ಹಾಕುತ್ತಾರೆ.

ಇತರ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಮನುಸ್ಮೃತಿ ಶ್ರೇಷ್ಠವೆಂಬುದು ಸಾವರ್ಕರ್ ಅವರ ವಾದವಾದರೆ, 1950ರಲ್ಲಿ ಮನುಸ್ಮೃತಿಯನ್ನೂ ಒಳಗೊಂಡಂತೆ ಜಗತ್ತಿನ ಎಲ್ಲಾ ಪುರಾತನ ನಾಗರಿಕತೆಗಳ ಸಾಮಾಜಿಕ ಸೂತ್ರಗಳಿಗಿಂತ ಉನ್ನತವಾದ ಮೌಲ್ಯವನ್ನು ಪ್ರತಿಪಾದಿಸುವ ಅಂಬೇಡ್ಕರ್ ನೇತೃತ್ವದಲ್ಲಿ ತಯಾರಾದ ಭಾರತದ ಸಂವಿಧಾನದ ಬಗ್ಗೆ ಸಾವರ್ಕರ್ ಮತ್ತು ಆರೆಸ್ಸೆಸ್‌ನ ನಿಲುವು ಏನಾಗಿತ್ತು?

1949ರ ನವೆಂಬರ್ 26ರಂದು ಸಂವಿಧಾನ ಬರಹ ಮುಗಿದು ನಾಡಿಗೆ ಅರ್ಪಣೆಯಾದ ಕೇವಲ ನಾಲ್ಕು ದಿನಗಳ ನಂತರ 1949ರ ನವೆಂಬರ್ 30 ರಂದು ಆರೆಸ್ಸೆಸ್‌ನ ಮುಖಪತ್ರಿಕೆಯಾದ ಆರ್ಗನೈಸರ್ ಪತ್ರಿಕೆಯಲ್ಲಿ ಸಂವಿಧಾನವನ್ನು ಹೀಗಳೆಯುತ್ತಾ ಹೀಗೆ ಬರೆದುಕೊಳ್ಳುತ್ತಾರೆ:

‘ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ’ ಎಂದು ಟೀಕಿಸುತ್ತಾರೆ..

► ಗೋಳ್ವಾಲ್ಕರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಅವರ ಜಾತಿ ವಿನಾಶ ಯೋಜನೆಯ ವಿರುದ್ಧ ಹೀಗೆ ಕಿಡಿ ಕಾರುತ್ತಾರೆ:

‘‘ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ..ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ , ಕನಿಷ್ಠ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ’’

(The Organiser, 26 January 1962)

ಅದಕ್ಕೆ ಈ ಸಂಘಪರಿವಾರದ ಈ ಕುಲಪುರೋಹಿತರು ಇನ್ನೂ ಚಿತ್ರವಿಚಿತ್ರವಾದ ಆದರೆ ಅಪಾಯಕಾರಿಯಾದ ವಾದಗಳನ್ನು ಮುಂದಿಡುತ್ತಾರೆ. ಅವರ ಪ್ರಕಾರ :

‘‘ನಮ್ಮ ದೇಶದ ಈಶಾನ್ಯ ಹಾಗೂ ವಾಯವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತ್ತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ ಬುದ್ಧನ ಚಿಂತನೆಗಳ ದುಶ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಆಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ ದಿಲ್ಲಿ ಪ್ರಾಂತಗಳು ಪ್ರಧಾನವಾಗಿ ಹಿಂದುವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು’’

(RSS and Democracy (Delhi: Sampradayikta Virodhi Committee, nd ) - ಆನಂದ್ ತೇಲ್ತುಂಬ್ಡೆ ಯವರು ಸಂಪಾದಿಸಿರುÜHINDUTVA AND DALITS ಗ್ರಂಥದಲ್ಲಿ ಉಲ್ಲೇಖಿತ)

► ದಲಿತರು ಸ್ವಧರ್ಮದಲ್ಲೇ ಸಾಯಬೇಕು- ದೀನದಯಾಳ್ ಉಪಾಧ್ಯ

ಆರೆಸ್ಸೆಸ್‌ನ ಮತ್ತೊಬ್ಬ ಗುರುವಾದ ಹಾಗೂ ಮೋದಿಯವರು ಬಹುವಾಗಿ ಉಲ್ಲೇಖಿಸುವ ದೀನ್ ದಯಾಳ್ ಉಪಾಧ್ಯ ಅವರಂತೂ ಇದೇ ಅತ್ಯಂತ ಅಪಾಯಕಾರಿ ಚಿಂತನೆಯನ್ನು ಘೋರವಾದ ಮೃದು ಭಾಷೆಯಲ್ಲಿ ಮುಂದಿಡುತ್ತಾರೆ:

‘‘ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರು ಸಮಾನರಲ್ಲ. ಪ್ರತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ. ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ. ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯಾವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ’’ ಇದನ್ನು ಮುಂದುವರಿಸಿಯೇ ಮೋದಿಯವರು ಚರಂಡಿ ಸ್ವಚ್ಛ ಮಾಡುವ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ಘನತೆಯನ್ನು ಮತ್ತು ದೇವರನ್ನು ಕಾಣುವ ಕರ್ಮಯೋಗಿಗಳು ಎಂದು ಹೇಳಿದ್ದು.

(upadhya , P. Bhishikar, Pandit Deendayal Upadhyaya: Ideology and Perception-Concept of the Rashtra, vol. 5)

ಹಾಗಿದ್ದರೂ ಸಾವರ್ಕರ್ ಅವರನ್ನು ಅತ್ಯಂತ ದೊಡ್ದ ದಲಿತೋದ್ಧಾರಕ ಎಂದು ಸ್ಥಾಪಿಸಲು ಮೋದಿ ಮತ್ತು ಆರೆಸ್ಸೆಸಿಗರು ಹೇಗೆ ಹಿಂದೂ ಏಕತೆ ಸಾಧಿಸಲು ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಪಟ್ಟರು ಎಂದು ಹಲವಾರು ಉದಾಹರಣೆಗಳನ್ನು ಕೊಡುತ್ತಾರೆ.

ಆದರೆ ಸಾವರ್ಕರ್ ಅವರಾಗಲೀ, ಹೆಡ್ಗೇವಾರ್ ಅವರಾಗಲೀ ಮೇಲ್ಜಾತಿಯವರ ಇಷ್ಟಕ್ಕೆ ವಿರುದ್ಧವಾಗಿ ಯಾವುದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಲಿಖಿತ ಭರವಸೆ ಕೊಟ್ಟಿರುತ್ತಾರೆ.

ಉದಾಹರಣೆಗೆ 1939ರ ಹಿಂದೂ ಮಹಾ ಸಭಾ ಸಮ್ಮೇಳನದಲ್ಲಿ:

‘ತಮ್ಮ ಸಂಘವು ಅಸ್ಪೃಶ್ಯರಿಗೆ ದೇವಸ್ಥಾನಗಳಿಗೆ ಪ್ರವೇಶ ಕಡ್ಡಾಯ ಮಾಡುವ ಯಾವುದೇ ಮಸೂದೆಯನ್ನು ಶಾಸನ ಸಭೆಗಳಲ್ಲಿ ಮಂಡಿಸುವುದಿಲ್ಲವೆಂದು ಭರವಸೆ ನೀಡಿರುತ್ತಾರೆ’

1941ರಲ್ಲೂ ಮತ್ತೊಮ್ಮೆ ಇದೇ ಭರವಸೆಯನ್ನು ಸಾವರ್ಕರ್ ಕೊಡುತ್ತಾರೆ. ಆದ್ದರಿಂದಲೇ ಅಲ್ಲವೇ ಅಂಬೇಡ್ಕರ್ ಅವರು 1951ರಲ್ಲಿ ಆರ್‌ಪಿಐನ ಚುನಾವಣಾ ಪ್ರಣಾಳಿಕೆಯನ್ನು ರೂಪಿಸುವಾಗ ತಮ್ಮ ಪಕ್ಷ ಯಾವ ಕಾರಣಕ್ಕೂ ಅತ್ಯಂತ ಪ್ರತಿಗಾಮಿ ಪಕ್ಷವಾದ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್ ಜೊತೆಗೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದು!

► ಇದು ಆರೆಸ್ಸೆಸ್ - ಬಿಜೆಪಿಗಳ ನಿಜಸ್ವರೂಪ.

ಅವರ ಹಿಂದುತ್ವ ಎಂದರೆ ಬ್ರಾಹ್ಮಣತ್ವ ಅವರ ಭಾರತೀಯತೆ ಎಂದರೆ ಬ್ರಾಹ್ಮಣ್ಯ.

ಅವರ ಹಿಂದುತ್ವ ಎಂದರೆ ಬಸವ ದ್ವೇಷಿ , ಬುದ್ಧ ದ್ವೇಷಿ, ಅಂಬೇಡ್ಕರ್ ದ್ವೇಷಿ ..

ಅದನ್ನು ಅರಿಯದೆ ಕೆಲವು ಬುದ್ಧವಾದಿಗಳು, ಬಸವವಾದಿಗಳು ನಾವು ಧಾರ್ಮಿಕವಾಗಿ ಮಾತ್ರ ಹಿಂದೂಧರ್ಮವಲ್ಲ, ಆದರೆ ದೇಶವಾಗಿ ನಾವು ಹಿಂದುತ್ವವಾದಿಗಳೇ ಎಂದು ಪ್ರತಿಪಾದಿಸುವುದು ಆತ್ಮವಂಚನೆ ಮಾತ್ರವಲ್ಲ. ಬಸವದ್ರೋಹ ಬುದ್ಧ ದ್ರೋಹ ಶ್ರಮಣ ಭಾರತದ ದ್ರೋಹ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News